ಶಹಾಬಾದ:ರಾಜ್ಯ ಸರಕಾರ ಕೊರೊನಾ ಹಾಗೂ ಒಮಿಕ್ರಾನ್ ತೀವ್ರತೆ ತಡೆಗಟ್ಟಲು ಸಾರ್ವಜನಿಕರಿಗೆ ಲಸಿಕೆಯನ್ನು ಹಾಕಿಕೊಳ್ಳಲು ಜಾಗೃತಿ ಮೂಡಿಸುತ್ತಿದೆ.ಮತ್ತೊಂದೆಡೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳು ಸ್ಟಾಕ್ ಇವೆ.ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಕೂಡ ಆರೋಗ್ಯ ಇಲಾಖೆಯ ಯಡವಟ್ಟುಗಳು ನಡೆಯುತ್ತಿವೆ.
ಹೌದು.ಫರ್ಸಿ ನಗರಿ ಶಹಾಬಾದನಲ್ಲಿ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ಪಡೆಯದಿದ್ದರೂ ಕೂಡ ನೀವು ಮೂರನೇ ಬೂಸ್ಟರ್ ಡೋಸ್ ಪಡೆದುಕೊಂಡಿದ್ದೀರಿ ಎಂದು ಮೋಬೈಲ್ಗಳಿಗೆ ಮೆಸೆಜ್ ಬರುತ್ತಿವೆ. ಓಟಿಪಿ ನೀಡದಿದ್ದರೂ ಮೋಬೈಲ್ಗಳಿಗೆ ಈ ರೀತಿ ಸಂದೇಶಗಳು ಬರುತ್ತಿವೆ. ೬೦ ವಯಸ್ಸು ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆದರೆ ಕೇವಲ ೪೭ ವರ್ಷ ವ್ಯಕ್ತಿಗೆ ನೀವು ಬೂಸ್ಟರ್ ಡೋಸ್ ಪಡೆದುಕೊಂಡಿದ್ದೀರಿ ಎಂದು ಸಂದೇಶ ಬಂದಿದೆ.
ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡುತ್ತಿದೆ.ಜತೆಗೆ ಲಸಿಕೆ ಹಾಕುವುದರಲ್ಲಿ ಗೋಲ್ ಮಾಲ್ ನಡೆಯುತ್ತಿದೆಯಾ ಎಂಬ ಅನುಮಾನಗಳು ಮೂಡುತ್ತಿವೆ. ಈಗಾಗಲೇ ನಗರದ ನಿವಾಸಿಯಾದ ನಾಗಣ್ಣ ರಾಂಪೂರೆ ಅವರಿಗೆ ಬೂಸ್ಟರ್ ಡೋಸ್ ಪಡೆದುಕೊಂಡಿದ್ದೀರಿ ಎಂದು ಸಂದೇಶ ಬಂದಿದೆ.ಅವರಿಗೆ ಕೇವಲ ೪೭ ವರ್ಷ. ಅಲ್ಲದೇ ೫೩ ವರ್ಷದ ಶರಣಬಸಪ್ಪ ಅರಳಿ ,60 ವಯಸ್ಸಿನ ದೇವೇಂದ್ರಪ್ಪ ವಾಲಿ, 49 ವಯಸ್ಸಿನ ಚಂದ್ರಕಾಂತ್ ಸೂರ್ಯವಂಶಿ ಎಂಬುವವರಿಗೂ ಈ ರೀತಿಯ ಸಂದೇಶ ಬಂದಿರುವುದು ಆಶ್ಚರ್ಯ ತಂದಿದೆ.
ಈ ರೀತಿಯ ಸಂದೇಶಗಳು ದಿನೇ ದಿನೇ ಹೆಚ್ಚುತ್ತಿರುವುದು ಬೆಳಿಕಿಗೆ ಬರುತ್ತಿವೆ.ಸರ್ಟಿಫಿಕೇಟ್ ಕೂಡ ಡೌನ್ಲೋಡ್ ಆಗಿದೆ. ಇದೇ ರೀತಿ ಇನ್ನೂ ಎಷ್ಟು ಸಂದೇಶಗಳು ನಗರ ಹಾಗೂ ಗ್ರಾಮೀಣ ಮಟ್ಟದ ಜನರಿಗೆ ಹೋಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.ಇದು ಯಾವುದೋ ಅಚಾತುರ್ಯದಿಂದ ಆಗಿದ್ದರೇ ಒಂದೆರಡು ಜನರಿಗೆ ಸಂದೇಶ ಹೋಗಿರಬೇಕಿತ್ತು.
ಆದರೆ ಈ ರೀತಿಯ ಯಡವಟ್ಟುಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿಯೂ ಕಂಡುಬಂದಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.ಅಲ್ಲದೇ ಒಂದು ವೇಳೆ ೬೦ ವರ್ಷದ ವ್ಯಕ್ತಿಗೆ ಈ ರೀತಿಯ ಸಂದೇಶ ಬಂದಿದ್ದರೇ, ಆತ ಲಸಿಕೆ ತೆಗೆದುಕೊಳ್ಳಲು ಹೋದಾಗ ಅವನಿಗೆ ಲಸಿಕೆ ತೆಗೆಕೊಂಡಿದ್ದೀರಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಲಸಿಕೆ ನೀಡಲು ನಿರಾಕರಿಸುತ್ತಿದ್ದರು.ಯಾರೋ ಮಾಡಿದ ತಪ್ಪಿಗೆ ಬೂಸ್ಟರ್ ಡೋಸ್ನಿಂದ ವಂಚಿತರಾಗುತ್ತಿದ್ದರು.
ಜನರ ಮೊಬೈಲ್ಗೆ ತಪ್ಪು ಸಂದೇಶಗಳು ಬರುತ್ತಿರುವುದರಿಂದ ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಲಸಿಕಾ ಅಭಿಯಾನದ ಜತೆಗೆ ಈ ರೀತಿಯ ತಪ್ಪು ಸಂದೇಶಗಳನ್ನು ಬರುವುದಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಿದೆ.ಅಲ್ಲದೇ ಈ ಬಗ್ಗೆ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ನಾಗಣ್ಣ ರಾಂಪೂರೆ ಜಿಲ್ಲಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕೆಲಸದ ಒತ್ತಡ ಹಾಗೂ ತಾಂತ್ರಿಕ ದೋಷದಿಂದ ತಪ್ಪು ಸಂದೇಶಗಳು ಆಗಿರಬಹುದು.ಅದನ್ನು ಸರಿಪಡಿಸಿಕೊಳ್ಳುತ್ತೆವೆ- ಡಾ.ಮಹ್ಮದ್ ಅಬ್ದುಲ್ ರಹೀಮ್ ವೈದ್ಯಾಧಿಕಾರಿಗಳು.ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ.
ಸರಕಾರ ಲಸಿಕೆ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಈ ರೀತಿಯ ಯಡವಟ್ಟಿಗೆ ಕಾರಣವಾಗುತ್ತಿದೆ.ಈಗಾಗಲೇ ಎರಡನೇ ಅಲೆಯಲ್ಲಿ ಒಬ್ಬ ವ್ಯಕ್ತಿಯ ಒಂದೇ ಮೊಬೈಲ್ ಸಂಖ್ಯೆಗೆ ಸುಮಾರು ಹತ್ತಾರು ಜನರಿಗೆ ಲಸಿಕೆ ನೀಡಿದ ಸಂದೇಶಗಳು ಬಂದಿದ್ದವು.ಈ ಯಡವಟ್ಟು ಆಗಲು ಕಾರಣವೇನು ಎಂಬುದು ತನಿಖೆ ನಡೆದಾಗಲೇ ಸತ್ಯ ಹೊರಬರಲಿದೆ.-ಕಿರಣ ಚವ್ಹಾಣ ಅಧ್ಯಕ್ಷರು ಯುವ ಕಾಂಗ್ರೆಸ್ ಶಹಾಬಾದ.