ಕಲಬುರಗಿ: ಕನ್ನಡದ ರಥವನ್ನು ಜಿಲ್ಲೆಯಾದ್ಯಂತ ಸಮರ್ಪಕವಾಗಿ ಎಳೆಯಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಎರಡನೇ ಹಂತದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪರಿಷತ್ತಿನ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ವೇದಿಕೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ರಾಜ್ಯದ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನೂತನ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಆ ಮೂಲಕ ಪರಿಷತ್ತು ಬದ್ಧತೆ ಮತ್ತು ನಿಸ್ವಾರ್ಥತೆಯಿಂದ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯನ್ನಾಗಿ ಸಾಹಿತ್ಯ ಪ್ರೇರಕ-ಚಿಂತಕ ಯಶವಂತರಾಯ ಅಷ್ಠಗಿ, ಮಹಿಳಾ ಪ್ರತಿನಿಧಿಗಳಾಗಿ ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಸಮಾಜ ಸೇವಕಿ ಸ್ನೇಹಲತಾ ಸಂದೇಶ ಕಮಕನೂರ, ಸಂಘ-ಸಂಸ್ಥೆ ಪ್ರತಿನಿಧಿಯಾಗಿ ಗುರೂಜಿ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಕಲ್ಯಾಣಕುಮಾರ ಶೀಲವಂತ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಉಪನ್ಯಾಸಕ ಡಾ.ಕೆ.ಗಿರಿಮಲ್ಲ, ಪತ್ರಕರ್ತ ಧರ್ಮಣ್ಣ ಧನ್ನಿ, ಪರಿಶಿಷ್ಟ ಪಂಗಡ ಪ್ರತಿನಿಧಿಯನ್ನಾಗಿ ಶಿಕ್ಷಕ ಸಂಗಪ್ಪ ಸೇದಿಮನಿ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ದ್ಯೇಯೋದ್ದೇಶಗಳಿಗೆ ಬದ್ಧರಾಗಿ ಕನ್ನಡಾಂಬೆಯ ಸೇವೆಯನ್ನು ಕೈಗೊಳ್ಳಲು ಅದೇಶದಲ್ಲಿ ಸೂಚಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.