ಕಲಬುರಗಿ: ಪ್ರತಿಭೆಯ ಜೊತೆಗೆ ಪ್ರಯತ್ನ ಕೂಡ ಅಗತ್ಯ. ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮತನವನ್ನು ಮೆರೆಯಬೇಕು ಎಂದು ಲಲಿತಾಕಲಾ ಅಕಾಡೆಮಿ ಸದಸ್ಯ ಮಹ್ಮದ್ ಅಯಾಜುದ್ದೀನ್ ಪಟೇಲ್ ಹೇಳಿದರು.
ಲಿಯೊನಾರ್ಡೊ ಡ ವಿಂಚಿ ಜನುಮ ದಿನದ ಅಂಗವಾಗಿ ಇಲ್ಲಿನ ದೃಶ್ಯಕಲಾ ಸಾಂಸ್ಕೃತಿಕ ಸಂಸ್ಥೆ ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ದೃಶ್ಯಕಲಾ ದಿನಾಚರಣೆ ಆರನೆ ವಾರ್ಷಿಕ ಚಿತ್ರ-ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಲೆ ದೃಷ್ಟಿಯಿಂದ ಕಲ್ಬುರ್ಗಿ ಅತ್ಯಂತ ಹಾಟೆಸ್ಟ್ ಸಿಟಿ. ಇಲ್ಲಿ ಬಿಸಿಲು ಪ್ರಖರತೆ ಇರುವಂತೆ ಕಲೆ ಕೂಡ ಪ್ರಖರವಾಗಿ ಬೆಳೆದು ಬಂದಿದೆ ಎಂದರು.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಕಲೆಯಿಂದ ಮಾನವ ವ್ಯಕ್ತಿತ್ವಕ್ಕೆ ವಿಶಿಷ್ಟ ಸಂಸ್ಕೃತಿ, ಮೆರಗು ತಂದು ಕೊಡಬಲ್ಲದು. ದೃಶ್ಯಕಲೆ ಪರಿಣಾಮಕಾರಿ ಮಾಧ್ಯಮವಾಗಿದ್ದು, ಮಾನವ ಶಾಸ್ತ್ರೀಯ ಗುಣ ಹೊಂದಿದೆ ಎಂದು ತಿಳಿಸಿದರು. ಚಿತ್ರಕಲಾ ಶಿಬಿರದ ಸಂಚಾಲಕ ದೌಲತರಾಯ ದೇಸಾಯಿ, ಬೆಂಗಳೂರಿನ ಭಾರತಿ ಡಂಬಳ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಡಾ. ಪರುಶುರಾಮ ಪಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ನಯನಾ ಬಿ. ನಿರೂಪಿಸಿದರು. ಕಲಾವಿದರಾದ ಡಾ. ಬಸವರಾಜ ಜಾನೆ, ಡಾ. ಎ.ಎಸ್. ಪಾಟೀಲ, ವಿಜಯ ಹಾಗರಗುಂಡಗಿ, ಅಶೋಕ ಶೆಟಕಾರ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಭಾಗವಹಿಸಿದ್ದರು.