ಕಲಬುರಗಿ: ರಾಜ್ಯ ಸರ್ಕಾರದ ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಏ .೨೨ ರಂದು ಸಾಯಂಕಾಲ ೫: ೩೦ ಕ್ಕೆ ವೀರಶೈವ ಕಲ್ಯಾಣ ಮಂಟಪದ ಎದುರುಗಡೆ ಬಯಲು ಆವರಣದಲ್ಲಿ ಸರ್ಕಾರಕ್ಕೆ ಅಭಿನಂದನಾ ಮತ್ತು ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ಶಿವು ಸ್ವಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರ ಅಧ್ಯಕ್ಷತೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಲ್ಲಾದ ಜೋಷಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿ.ವಿ ಸದಾನಂದ ಗೌಡ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನೀಲಕುಮಾರ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ ಸೇರಿದಂತೆ ಕಲಬುರಗಿ ಜಿಲ್ಲೆಯ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಅವರು ಮಾತನಾಡಿ, ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಕರೆತರಲು ಜಿಲ್ಲೆಯ ಶಾಸಕರು, ಸಂಸದರು ತುಂಬಾ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ಮುಖ್ಯಮಂತ್ರಿಗಳು ಸಮಾರಂಭಕ್ಕೆ ಆಗಮಿಸಲು ಒಪ್ಪಿದ್ದಾರೆ.
ಸಮಾರಂಭದಂದು ಮದ್ಯಾಹ್ನ ೩ ಗಂಟೆಗೆ ಹಳೆ ಚೌಕ್ ಪೋಲಿಸ್ ಠಾಣೆಯಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಜಗದ್ಗುರು ರೇಣುಕಾಚಾರ್ಯರ ಭವ್ಯವಾದ ಮೂರ್ತಿ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಒಂದು ಸಾವಿರ ಮಹಿಳೆಯರು ಕುಂಭ, ಕಳಸ, ಪುರವಂತಿಕೆ, ವಾದ್ಯ ವೈಭವ, ಕಲಾ ಮೇಳದೊಂದಿಗೆ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ನಡೆಯಲಿದೆ. ಆದ್ದರಿಂದ ಈ ಸಮಾರಂಭದಲ್ಲಿ ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯ ವಿವಿದೆಡೆಯಿಂದ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸತೀಶ ಸ್ವಾಮಿ, ಜಿ.ಕೆ ಪಾಟೀಲ, ದಯಾನಂದ ಪಾಟೀಲ, ಶಾಂತಾಬಾಯಿ ಹಾಲಮಠ, ವಿಶ್ವನಾಥ ಸಾಲಿಮಠ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.