ಭಾಲಿ: ಭಾಲ್ಕಿ ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಡಾ.ಅಂಬೇಡ್ಕರ್ ಅವರು ಜ್ಞಾನ ಸಾಧನೆಯಲ್ಲಿ ಹಿಮಾಲಯದ ಎತ್ತರ ಏರಿದ ಮಹಾನ್ ದಾರ್ಶನಿಕರು ಆಗಿದ್ದರು. ಅವರು ಶಿಕ್ಷಣಕ್ಕಾಗಿ ಜ್ಞಾನಾರ್ಜನೆಗಾಗಿ ಪಟ್ಟಿರುವ ಶ್ರಮ ಅಪಾರವಾದದ್ದು. ಇವರಿಗೆ ಯಾವುದೇ ಅನುಕೂಲತೆ ಇರಲಿಲ್ಲ. ಆದರೂ ದೇಶ ವಿದೇಶಗಳಲ್ಲಿ ಶಿಕ್ಷಣವನ್ನು ಪಡೆದು ಆ ಕಾಲದ ಒಬ್ಬ ಮಹಾನ್ ವ್ಯಕ್ತಿ ಎಂದು ಅವರು ರೂಪುಗೊಂಡರು.
ಇದನ್ನೂ ಓದಿ: ಭಾಲ್ಕಿ ಸಂಸ್ಥಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ಡಾ.ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಅವರಿಗೆ ಒಂದು ಪತ್ರ ಬಂತು. ಆ ಪತ್ರ ಅವರ ಪತ್ನಿಯಾದ ರಮಾಬಾಯಿ ಅವರು ಬರೆದಿದ್ದರು. ಅದರಲ್ಲಿ ಅವರ ಮಗನಾದ ರಮೇಶ ಅವನು ಮೃತಪಟ್ಟಿರುವ ಸುದ್ದಿ ಇತ್ತು. ಆದರೂ ರಮಾಬಾಯಿ ಅವರು ಹೇಳಿದ್ದು ಏನೆಂದರೆ ನೀವು ಓದಲಿಕ್ಕೆ ಹೋಗಿದ್ದಿರಿ ಅದಕ್ಕಾಗಿ ನಿಮಗೆ ಈ ದುಃಖದ ಸಂಗತಿಯನ್ನು ತಿಳಿಸಿ ನಿಮ್ಮ ಅಧ್ಯಯನದಲ್ಲಿ ಅಡೆತಡೆ ಮಾಡಬಾರದೆಂದು ಯೋಚಿಸಿದೆ ಆದರೆ ನನಗೆ ದುಃಖ ಸಹಿಸಿಕೊಳ್ಳಿಕ್ಕೆ ಆಗಲಿಲ್ಲ ಎಂದು ಈ ಪತ್ರ ಬರೆಯುತ್ತಿದ್ದೇನೆ. ಆದರೂ ತಾವು ಈ ಘಟನೆಯ ಬಗ್ಗೆ ಹೆಚ್ಚಿಗೆ ಯೋಚಿಸದೆ ತಮ್ಮ ಅಧ್ಯಯನದ ಕಡೆ ಒಲವು ಕೊಡಬೇಕು.
ಇದನ್ನು ಓದಿ ಡಾ.ಅಂಬೇಡ್ಕರ್ ಅವರ ಕಣ್ಣಲ್ಲಿ ನೀರು ಬಂದವು. ಆದರೂ ಅವರು ಆ ದುಃಖವನ್ನು ಮರೆತು ಅಧ್ಯಯನದಲ್ಲಿ ನಿರತರಾದರು. ವಿದ್ಯಾರ್ಥಿ ಜೀವನದಲ್ಲಿ ಇಂತಹ ಅನೇಕ ಕಷ್ಟಗಳು ಬರುತ್ತವೆ. ಆದರೆ ಅವೆಲ್ಲವೂ ಮೆಟ್ಟಿ ನಿಂತಾಗ ನಮಗೆ ನಮ್ಮ ಗುರಿ ಸಾಧ್ಯವಾಗುತ್ತದೆ. ಆ ದಿಶೆಯಲ್ಲಿ ಎಲ್ಲರಿಗೆ ಡಾ.ಅಂಬೇಡ್ಕರ್ ಅವರ ಜೀವನ ಆದರ್ಶವಾಗಲಿ. ಪ್ರತಿಒಬ್ಬ ಭಾರತೀಯರಿಗೆ ನಮ್ಮ ಸಂವಿಧಾನವೆ ಧರ್ಮಗ್ರಂಥವಾಗಲಿ ಎಂದು ನುಡಿದರು.
ಇದನ್ನೂ ಓದಿ: ಮರತೂರ ಮೌನೇಶ್ವರ ಜಾತ್ರಾ ಮಹೋತ್ಸವ 15 & 16ರಂದು
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಮೋಹನರೆಡ್ಡಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಬಸವರಾಜ ಮೊಳಕೆರೆ ಮಾತನಾಡಿದರು. ಉಪಪ್ರಾಚಾರ್ಯರಾದ ಸಿದ್ರಾಮ ಗೊಗ್ಗಾ, ಹಣಮಂತರಾವ ಗೊಂಗಣೆ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಜ್ವಲ್, ಸಚಿದಾನಂದ, ಸ್ನೇಹಾ ಪಾಟೀಲ ಮುಂತಾದ ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು ಭಾಷಣ ಮಾಡಿದರು. ಹರ್ಷಿತಾ ವಚನ ಪ್ರಾರ್ಥನೆ ನಡೆಸಿಕೊಟ್ಟರು. ನೈನಾ ಸೂರ್ಯಕಾಂತ ನಿರೂಪಿಸಿದರು. ದಿವ್ಯ ದಯಾನಂದ ಸ್ವಾಗತಿಸಿದರು. ಸಾಕ್ಷಿ ಆನಂದ ದೇವಪ್ಪ ಶರಣು ಸಮರ್ಪಣೆ ಮಾಡಿದರು.