ಶರಣರ ತಾಣವಾದ ಹಾವೇರಿ: ಹುಕ್ಕೇರಿಮಠವು ಬೆಳೆದುಬಂದ ದಾರಿ

0
24

ಧಾರ್ಮಿಕ ನೆಲೆಬೀಡಾದ ಹಾವೇರಿ ಕ್ಷೇತ್ರವು ಹಲವಾರು ಶರಣ ಸಂತರ ಆಶ್ರಯ ತಾಣವಾಗಿದೆ. ಕನ್ನಡ ನಾಡಿನ ಯಾವ ಜಿಲ್ಲಾ ಕೇಂದ್ರದಲ್ಲಿಯೂ ಕಾಣಸಿಗದಷ್ಟು ಮಠಗಳು ಈ ನಗರದಲ್ಲಿರುವುದು ವಿಶೇಷವಾಗಿದೆ. 63 ಮಠಗಳನ್ನೂ ಹೊಂದಿದ ಈ ನಗರಕ್ಕೆ “ಮರಿ ಕಲ್ಯಾಣ” ಎಂಬ ಅಭಿದಾನ ಇರುವುದು ಇಲ್ಲಿನ ವೈಶಿಷ್ಟ್ಯ ಎಂದೇ ಹೇಳಬೇಕಾಗುತ್ತದೆ. ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾವೇರಿ ನಗರದಲ್ಲಿರುವ ಹುಕ್ಕೇರಿಮಠವು, ನಾಡಿನಾದ್ಯಂತ ಪ್ರಖ್ಯಾತ ಜಾಗೃತ ಸ್ಥಳಗಳಲ್ಲಿ ಮುಂಚೂಣಿಯಲ್ಲಿದೆ.
ಪ್ರಮುಖ ಮಠಗಳಲ್ಲಿ ಹಾವೇರಿ ಜಿಲ್ಲೆಯ ನಗರಸ್ಥಾನದಲ್ಲಿರುವ ಹುಕ್ಕೇರಿಮಠವೂ ವಿಶೇಷ ಸ್ಥಾನ ಪಡೆದಿದೆ.

ಹಾವೇರಿಯ ಹುಕ್ಕೇರಿಮಠವು ಹಲವು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಬಡ ಹಾಗೂ ಹಿಂದುಳಿದ ಜನತೆಗೆ ಜಾತಿ-ಮತ-ಪಂಥಗಳ ಬೇಧವಿಲ್ಲದೆ ಶೈಕ್ಷಣಿಕ ಸೇವೆ ಸಲ್ಲಿಸುತ್ತ ವಿದ್ಯಾ ಪ್ರಸಾರಕ್ಕೆ ಹೆಚ್ಚಿನ ಗಮನವನ್ನು ಕೊಡುತ್ತಿರುವುದು ಅಭಿಮಾನದ ಸಂಗತಿ. ಇದರ ರವಾರಿಗಳು ಲಿಂ. ಶಿವಬಸವ ಮಹಾಸ್ವಾಮಿಗಳು, ಲಿಂ.ಶಿವಲಿಂಗ ಶಿವಯೋಗಿಗಳು ಮತ್ತು ಹುಕ್ಕೇರಿಮಠದ ಪ್ರಸ್ತುತ ಮಠಾಧ್ಯಕ್ಷರಾದ ಪೂಜ್ಯ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹಾಗೂ ಮಾದನ ಹಿಪ್ಪರಗಿಯ ಶಿವಲಿಂಗೇಶ್ವರ ವಿರಕ್ತಮಠದ ಪೂಜ್ಯ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು. ಈಗಾಗಲೇ ಉಭಯ ಲಿಂ.ಶ್ರೀಗಳವರನ್ನು ಕುರಿತು ಜೀವನ ಚರಿತ್ರೆಗಳು, ಧಾರ್ಮಿಕ ಗ್ರಂಥಗಳು, ಬಿಡಿ ಲೇಖನಗಳು ಬೆಳಕು ಕಂಡಿವೆ. ಪೂಜ್ಯದ್ವಯರು ಹುಕ್ಕೇರಿಮಠದಿಂದ ಖ್ಯಾತಿ ಪಡೆದು, ಎರಡು ಮಠಗಳ ಎರಡು ಕಣ್ಣುಗಳಿದ್ದಂತೆ ಎಂಬುವುದು ಭಕ್ತರ ನಂಬಿಕೆಯಾಗಿದೆ. ಹಾವೇರಿ ಎಂದರೆ “ಹುಕ್ಕೇರಿಮಠ” ಹುಕ್ಕೇರಿಮಠವೆಂದರೆ “ಹಾವೇರಿ” ಎನ್ನುವಷ್ಟು ಅವಿನಾಭಾವ ಸಂಬಂಧ ಹೊಂದಿರುವ ಪರಂಪರೆಯಿದೆ.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಮಾನವ ಅನಾಗರಿಕತೆಯ ಅಂಧಕಾರದಿಂದ ನಾಗರಿಕತೆಯ ಬೆಳಕಿನಡೆಗೆ ಸಾಗಿದಂತೆ ತನ್ನ ಸಾಂಸ್ಕತಿೃಕ ಮತ್ತು ಧಾರ್ಮಿಕ ನೆಲೆ ಬದಲಾಗುತ್ತಾ ಸಾಗಿತ್ತು. ಬದಲಾವಣೆಯ ನೆಪದಲ್ಲಿ ಪೂರ್ವಿಕರ ಸಾಂಸ್ಕೃತಿಕ ಜೀವನ ಕ್ರಮ ಮರೆಮಾಚಿ ಆಧುನಿಕತೆಯ ಬೆನ್ನು ಹತ್ತಿ ವಿಲಾಸಿ ಜೀವನಕ್ಕೆ ವಾಲುತ್ತಿರುವುದು ಸತ್ಯದ ಸಂಗತಿ. ಈ ಜೀವನ ಕ್ರಮದಿಂದ ಅನೇಕಾನೇಕ ಸಾಂಸ್ಕೃತಿಕ ಬದಲಾವಣೆಗಳಾಗಿ ಧಾರ್ಮಿಕ ಕಾರ್ಯದಲ್ಲಿನ ಆಸಕ್ತಿ ಜನರಲ್ಲಿ ಕಡಿಮೆಯಾಗುತ್ತಿದೆ. ಒತ್ತಡದ ಬದುಕಿನ ನಗರ ಜೀವನ ಶೈಲಿಯು, ಹಣದ ಹಪಹಪಿತನವು ನಮ್ಮ ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳನ್ನು ನುಂಗಿ ಹಾಕುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ ನಾಡಿನ ಮಠಾದೀಶರು, ಶರಣ ಸಂತರು, ವಿಚಾರವಾದಿಗಳು ತಮ್ಮ-ತಮ್ಮ ಧರ್ಮ, ಸಂಸ್ಕೃತಿಯ ಉಳಿವಿಗಾಗಿ ಪರಿತಪಿಸುತ್ತಾ ಬಂದಿದ್ದಾರೆ. ಪ್ರದೇಶದಿಂದ ಪ್ರದೇಶಕ್ಕೆ, ಕಾಲದಿಂದ ಕಾಲಕ್ಕೆ ಆಚಾರ ವಿಚಾರಗಳು ವಿಭಿನ್ನವಾಗುತ್ತಲಿವೆ.

ಹೀಗಾಗಿ ಆಯಾ ಪ್ರದೇಶದ ಮಠಗಳ ಸಾಂಸ್ಕೃತಿಕ ಹಿನ್ನಲೆಯ ಚರ್ಚೆ ಬಹುಮುಖ್ಯ ಎನಿಸುತ್ತದೆ. ಧಾರ್ಮಿಕ ನೆಲೆಬೀಡಾದ ಹಾವೇರಿ ಕ್ಷೇತ್ರವು ಹಲವಾರು ಶರಣ ಸಂತರ ಆಶ್ರಯ ತಾಣವಾಗಿದೆ. ಕನ್ನಡ ನಾಡಿನ ಯಾವ ಜಿಲ್ಲಾ ಕೇಂದ್ರದಲ್ಲಿಯೂ ಕಾಣಸಿಗದಷ್ಟು ಮಠಗಳು ಈ ನಗರದಲ್ಲಿರುವುದು ವಿಶೇಷವಾಗಿದೆ. 63 ಮಠಗಳನ್ನು ಹೊಂದಿದ ಈ ನಗರಕ್ಕೆ “ಮರಿ ಕಲ್ಯಾಣ” ಎಂಬ ಅಭಿದಾನ ಇರುವುದು ಇಲ್ಲಿನ ವೈಶಿಷ್ಠ್ಯಎಂದೇ ಹೇಳಬೇಕಾಗುತ್ತದೆ. ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾವೇರಿ ನಗರದಲ್ಲಿರುವ ಹುಕ್ಕೇರಿಮಠವು, ನಾಡಿನಾದ್ಯಂತ ಪ್ರಖ್ಯಾತ ಜಾಗೃತ ಸ್ಥಳಗಳಲ್ಲಿ ಮುಂಚುಣಿಯಲ್ಲಿದೆ. ಇಂತಹ ಕ್ಷೇತ್ರದ ವೀರಶೈವ ಮಠಗಳ ಪಂಕ್ತಿಯಲ್ಲಿ ಹುಕ್ಕೇರಿಮಠವು ತನ್ನದೇಯಾದ ಚರಿತ್ರೆಯನ್ನು ಹೊಂದಿದೆ.

ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿಯಿಂದ ನೋಟಿಸ್

ಹಿಂದೆ ‘ನಳಪೂರ’ ಎಂದು ಕರೆಯಲಾಗುತ್ತಿದ್ದ ಹಾವೇರಿಯ ನಗರಕ್ಕೆ ಕಾಲಾಂತರದಲ್ಲಿ ಬದಲಾವಣೆ ಹೊಂದುತ್ತ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅಂತಯೇ ಹಾವೇರಿಯ ಹೆಸರಿನ ಬಗ್ಗೆ ಒಂದೊಂದು ರೋಚಕವಾದ ಐತಿಹ್ಯಗಳು ಇಂದಿಗೂ ತೆರದುಕೊಳ್ಳುತ್ತವೆ. ಹಾವೇರಿಯು ಹಲವಾರು ಕವಿಗಳು, ಚಿಂತಕರು, ಲೇಖಕರನ್ನು ನಮ್ಮ ನಾಡಿಗೆ ಕಾಣಿಕೆಯನ್ನಾಗಿ ನೀಡುತ್ತಾ ಬಂದಿದೆ. ಇಂದಿಗೂ ಈ ಪ್ರದೇಶದ ಅನೇಕಾನೇಕ ಬರಹಗಾರರು ತಮ್ಮ ವಿಶಿಷ್ಟ ಬರವಣಿಗೆಯಿಂದ ಜನಮನ ಸೆಳೆಯುತ್ತಿದ್ದಾರೆ.

ಇಂತಹ ಪರಿಸರದಲ್ಲಿದ್ದ ಹುಕ್ಕೇರಿಮಠವು ಹಲವಾರು ಸಾಹಿತಿಗಳಿಗೆ ಪ್ರೋತ್ಸಾಹಿಸಿ ಸಾಹಿತ್ಯ ಕೃಷಿ ಮಾಡಲು ಪ್ರೇರಣೆ ನೀಡುತ್ತಿದೆ. ಶ್ರೀಮಠದ ಲಿಂ.ಮ.ನಿ.ಪ್ರ, ಶಿವಲಿಂಗ ಶಿವಯೋಗಿಗಳು ಸ್ವತಃ ಕವಿಗಳಾಗಿ, ವಿಮರ್ಶಕರಾಗಿ, ಒಳ್ಳೆಯ ವಾಗ್ಮಿಗಳಾಗಿ ನಾಡಿನ ಜನತೆಗೆ ಮಾದರಿಯಾಗಿ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದು ಕಂಡುಬರುತ್ತದೆ. ಅವರ ಅಪಾರವಾದ ಪಾಂಡಿತ್ಯ, ವಿದ್ವತ್ಪೂರ್ಣ ಉಪನ್ಯಾಸಗಳು ಮತ್ತು ಸಾಹಿತ್ಯ ಚಟುವಟಿಕೆಯು ಭಕ್ತರ ಗಮನ ಸೆಳೆಯುತ್ತ ಬಂದಿವೆ. ಇವರಿಂದ ಪ್ರಭಾವಿತರಾದ ಅನೇಕಾನೇಕ ಸಾಹಿತಿಗಳಾಗಿ, ಸಾಹಿತ್ಯ ಪ್ರೇಮಿಗಳಾಗಿ, ಲೇಖಕರಾಗಿ, ಕವಿಗಳಾಗಿ ಹೊರಹೊಮ್ಮಿ ಪ್ರಶಸ್ತಿ ಪುರಸ್ಕಾರಗಳು ಪಡೆಯುವ ಮೂಲಕ ಖ್ಯಾತರಾಗಿದ್ದಾರೆ.

ಮಠದ ಉತ್ಸವ, ಚಟುವಟಿಕೆಗಳಲ್ಲಿ ನಾಡಿನ ಹೆಸರಾಂತ ಕವಿಗಳು ಭಾಗವಹಿಸಿ ಸಾಹಿತಿಕ ಸೇವೆ ಸಲ್ಲಿಸಿದ್ದಾರೆ. ಹೀಗೆ ಕವಿ, ಲೇಖಕ, ವಿಮರ್ಶಕ, ಸಂಶೋಧಕರ ಒಡನಾಟದಿಂದ ಮಠದ ಸಾಹಿತ್ಯ ಸಂಪತ್ತು ಹೆಚ್ಚುತ್ತಾ ಬಂದಿದೆ. ಯುವ ಬರಹಗಾರರ ಆಶಾಕಿರಣವಾಗಿ, ಸಕಾಲಿಕ ಮಾರ್ಗದರ್ಶನ ಒದಗಿಸುವ ಮೂಲಕ ಇಲ್ಲಿ ಬರವಣಿಗೆಯ ಬುಗ್ಗೆ ವಿಫುಲವಾಗಿ ಸಾಗುತ್ತಾ ಬಂದಿದೆ. ಗದಗಿನ ಪಂಡಿತ ಡಾ.ಪಂ. ಪುಟ್ಟರಾಜ ಗವಾಯಿಗಳು ಈ ಪರಿಸರದ ಸಾಹಿತಿಕ ಚಟುವಟಿಕೆಯ ಕುರಿತು ಹೇಳುವುದರ ಜೊತೆಗೆ ಲಿಂ. ಪರಮಪೂಜ್ಯ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳ ಕುರಿತಂತೆ ಪುರಾಣ ರಚಿಸಿದ್ದಾರೆ. ಅವರ ಸಾಹಿತಿಕ ಶ್ರೀಮಂತಿಕೆಯು ಮಠದ ಪ್ರಭಾವದಿಂದ ಬೆಳಗಿದ ರೀತಿ, ನೀತಿಗಳು ವಿಶಿಷ್ಟವಾದವುಗಳಾಗಿವೆ. ಅಪ್ರತಿಮ ಸಾಧಕರಿಗೆ ಪ್ರೋತ್ಸಾಹಿಸಿದ ಕೀರ್ತಿಯು ಮಠಕ್ಕೆ ಸಲ್ಲುತ್ತದೆ.

ಇದನ್ನೂ ಓದಿ: ಮೈಸೂರು: ಇಫ್ತಿಯಾರ್ ಕೂಟದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗಿ

ಹುಕ್ಕೇರಿಮಠದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳಸುವಲ್ಲಿ ಉಮಾಪತಿ ಶಾಸ್ತ್ರಿಗಳ ಪಾತ್ರ ಹಿರಿದಾದದ್ದು. ಅವರು ಕೆಲವು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ ಯುವ ಬರಹಗಾರರನ್ನು ಪ್ರೋತ್ಸಾಹಿಸಿ, ಮಠದ ಸಂಪುಟದಲ್ಲಿ ಲೇಖನಗಳ ಪ್ರಕಟಣೆಗೆ ಅವಕಾಶ ಒದಗಿಸಿದ್ದು ಕಂಡು ಬರುತ್ತದೆ. ಹೀಗಾಗಿ ಇಲ್ಲಿ ಲೇಖಕರ ಬಳಗವೇ ಬೆಳೆದು ನಿಂತದ್ದು ಗಮನಾರ್ಹ ಸಂಗತಿಯಾಗಿದೆ. ನಾಡಿನ ಹೆಸರಾಂತ ಚಿಂತಕರಾದ ಡಾ.ಪಂಚಾಕ್ಷರಿ ಹಿರೇಮಠ, ಸಂಶೋಧಕರಾದ ಡಾ.ಭೋಜರಾಜ ಪಾಟೀಲರವರು ನಾಡಿನ ಪ್ರಮುಖ ಸಾಹಿತಿಗಳಾಗಿ ಗುರುತಿಸಿಕೊಂಡು ಮೌಲ್ಯಯುತ ಗ್ರಂಥ ಪ್ರಕಟಿಸಿರುವುದು ಕಂಡು ಬರುತ್ತದೆ. ಮಠದ ಸಾಹಿತ್ಯದೊಂದಿಗೆ ನಾಡಿನಾದ್ಯಂತ ಗುರುತಿಸಲಾದ ಲೇಖನಗಳ ಜೊತೆಗೆ ತಮ್ಮದೆಯಾದ ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ.

ಭಾಮಿನಿ ಷಟ್ಪದಿಯಲ್ಲಿ ಶಿವಲಿಂಗ ಕಾವ್ಯ ರಚಿಸುವ ಮೂಲಕ ಮಠದೊಂದಿಗೆ ಗುರುತಿಸಿಕೊಳ್ಳುವ ಪ್ರೊ. ವಿರುಪಾಕ್ಷಪ್ಪ ಕೋರಗಲ್‍ರವರ ವಿದ್ವತ್ಪೂರ್ಣ ಬರಹ ಮೆಚ್ಚಲೇ ಬೇಕು. ಲಿಂ.ಮ.ನಿ.ಪ್ರ. ಶಿವಲಿಂಗ ಶಿವಯೋಗಿಗಳ ಒಡನಾಟದಿಂದ ಹಲವು ಗ್ರಂಥ ರಚನೆ ಮಾಡಿದ್ದಾರೆ. ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದು, ಬಂಡಾಯ ಚಿಂತಕರಲ್ಲಿ ಒಬ್ಬರಾಗಿ ಚಿರ ಪರಿಚಿತರು. ಕನ್ನಡದಲ್ಲಿ ಕಾವ್ಯ ಬರೆಯುವ ಸಾಮಥ್ರ್ಯವನ್ನು ಶ್ರೀಗಳ ಒಡನಾಟ ಪ್ರೇರಣೆ ಕೊಟ್ಟಿದೆ ಎಂದು ಸ್ವತಃ ಹೇಳುತ್ತಿರುತ್ತಾರೆ. ಕಾವ್ಯದ ಕುರಿತಂತೆ ವಿಷಯ ವಸ್ತು ಭಾಷೆಯ ಶೈಲಿ ಮುಂತಾದ ಚಿಂತನೆಗಳನ್ನು ಇಲ್ಲಿ ವಿಮರ್ಶಿಸಲಾಗಿದೆ. ಉತ್ತಮವಾದ ಕೃತಿಗಳನ್ನು ರಚಿಸುವ ಮುಖಾಂತರ ಪರಿಚಿತರಾದ ಕೆ.ಭಿಕ್ಷಾವರ್ತಿಮಠರವರ ಸಾಹಿತ್ಯಕ ಕೃಷಿ ಹೆಮ್ಮರವಾಗಿ ಬೆಳದದ್ದು ಶ್ರೀಗಳ ಕೃಪೆಯಿಂದ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಇವರು ಶಿವಲಿಂಗ ಕಂದ ಎಂಬ ಕಾವ್ಯನಾಮದಿಂದ ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕಗಳು, ವೈಚಾರಿಕ ಬರಹಗಳು, ಸಂಪಾದಿತ ಕೃತಿಗಳು ಹಾಗೂ ಸ್ಮರಣ ಸಂಚಿಕೆಗಳು ಹೊರತಂದದ್ದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಮಠದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾದ್ಯಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅದರಂತೆಯೇ ಬಸವರಾಜ, ಗಂಗಾಧರ ನಂದಿ, ಶ್ರೀಮತಿ ಅಕ್ಕಮಹಾದೇವಿ ಹಿರೇಮಠ ಸೇರಿದಂತೆ ಅನೇಕರು ಸಾಹಿತ್ಯ ಕೃಷಿ ಮಾಡುವ ಮೂಲಕ ಮಠದ ಘನತೆ ಹೆಚ್ಚಿಸಿದ್ದಾರೆ. ಇತ್ತಿಚೀನ ಯುವ ಬರಹಗಾರರಿಗೆ ಪುಸ್ತಕ ಪ್ರಕಟಿಸಲು ಅವಕಾಶ ಒದಗಿಸಿದ್ದು ಶ್ರೀಮಠದ ಸಾಹಿತ್ಯ ಪ್ರೀತಿಯ ಪ್ರತೀಕವಾಗಿದೆ.

ಇದನ್ನೂ ಓದಿ: ಆರ್ಯ ಈಡಿಗ ಸಮಾಜದಿಂದ ಡಾ. ರಾಜಕುಮಾರ ಜನ್ಮದಿನ ಆಚರಣೆ

ಮಾನವನು ಭಾವಜೀವಿ, ತನ್ನ ಆನಂದ ಮತ್ತು ನೋವನ್ನು, ನಗು ಮತ್ತು ಅಳುವುದರ ಮುಖಾಂತರ ಅಭಿವ್ಯಕ್ತಿಸಬಲ್ಲ. ಚಲುವಿನ ಪ್ರಜ್ಞೆ ಇದ್ದ ಪುರಾತನ ಕಾಲದ ಮನುಷ್ಯ, ಸಂತೋಷದ ಅಭಿವ್ಯಕ್ತಿಗಳಿಗಾಗಿ ತನ್ನ ಅಂಗಚೆಷ್ಠೆಗಳೇ ಬಳಸುತ್ತಿದ್ದ. ಅಕ್ಷರ ಜ್ಞಾನ ತಿಳಿದ ನಂತರ ತನ್ನ ಭಾವಾಭಿವ್ಯಕ್ತಿಯನ್ನು ಬರವಣಿಗೆಯ ಮುಖಾಂತರ ಹಿಡಿದಿಡಲು ಪ್ರಯತ್ನಿಸಿದ. ಹೀಗೆ ಮಾನವನ ಆನಂದದ ಕ್ಷಣಗಳನ್ನು ಮೆಲುಕು ಹಾಕಲು ಸಂಗೀತ ಕಲೆ ಮತ್ತು ಸಾಹಿತ್ಯದಲ್ಲಿ ತೊಡಗಿಕೊಂಡು ಹಾಡುವುದು, ಕುಣಿಯುದು ಇತ್ಯಾದಿ ಮನರಂಜನೆಯನ್ನು ಮಾಡತೋಡಗಿದ. ಈ ರೀತಿ ಬೆಳೆದು ಬಂದ ಸಂಗೀತವು ಬರುಬರುತ್ತಾ ತತ್ವಬೋಧನೆ, ಆಧ್ಯಾತ್ಮಿಕ ಅನುಭವಗಳು, ಸಮಾಜದ ಓರೆ ಕೋರೆಗಳನ್ನು ತಿದ್ದಲು ನೈತಿಕತೆ ಹೊಂದಿದ ಹಾಡುಗಳು ರಚನೆಯಾದವು.

ಇಂತಹ ಸ್ವಾರಸ್ಯಭರಿತ ಸಂಗೀತವನ್ನು ಪಾಲಿಸಿ ಪೋಷಿಸುವಲ್ಲಿ ಹುಕ್ಕೇರಿಮಠದ ಪಾತ್ರವು ಮಹತ್ವಪೂರ್ಣದ್ದಾಗಿದೆ. ಮಠದಲ್ಲಿ ಅನೇಕ ಭಜನಾ ಮತ್ತು ತತ್ವಪದಕಾರರು ತಮ್ಮ ಸಾಹಿತಿಕ ಸೇವೆ ಸಲ್ಲಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ನೋಡಿ ಆನಂದದಿಂದ ಭಾವ ತುಂಬಿ ಹಾಡಿ ಹೊಗಳಿದ್ದಾರೆ. ಲಿಂ.ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಮತ್ತು ಲಿಂ.ಮ.ನಿ.ಪ್ರ. ಶಿವಲಿಂಗ ಶಿವಯೋಗಿಗಳ ಜೀವನ ಮತ್ತು ಸಾಧನೆ, ಅವರ ಆಚಾರ-ವಿಚಾರಗಳು, ಸಮಾಜದ ಸನ್ನಡತೆಗಾಗಿ ಮಾಡಿದ ಸಚಿಂತನೆ ಕುರಿತಂತೆ ಅನೇಕ ಭಜನಾ ಪದಗಳು ದೊರೆತಿವೆ. ಹಾಡುಗಳ ಧ್ವನಿಸುರುಳಿ, ಪುಸ್ತಕಗಳು ಸಹ ಪ್ರಕಟವಾಗಿವೆ.

ಹುಕ್ಕೇರಿಮಠ ಮತ್ತು ಲಿಂ.ಶಿವಲಿಂಗ ಶಿವಯೋಗಿಗಳ ಕಾರ್ಯಕ್ಷೇತ್ರವಾದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನ ಹಿಪ್ಪರಗಿಯ “ಶಿವಲಿಂಗೇಶ್ವರ ವಿರಕ್ತಮಠ”ದಲ್ಲಿ ಇಂದಿಗೂ ತಾಳ ಲಯಗಳೊಂದಿಗೆ ಭಜನಾ ಪದಗಳು ಹಾಡುತ್ತಿರುತ್ತಾರೆ. ನೀಲಕಂಟಪ್ಪ ಬಡಿಗೇರ,ಸಿದ್ರಾಮಪ್ಪ ಕೋರಿ, ಅಮೃತಕ್ಕ ಶೀಲವಂತರ, ಬಸವರಾಜ ಓನಾಮಶೆಟ್ಟಿ, ಸಂಗೋಳಗಿ ಮಹಾರಾಜರು, ಶಿವಲಿಂಗಪ್ಪ ಪಾಟೀಲ, ಭೀಮಾಶಂಕರ ಘಂಟೆ, ಶಾಂತಲಿಂಗ ಬಿರಾದಾರ, ಹಾಗೂ ಶಿವಲಿಂಗಪ್ಪ ಸುತಾರ ಸೇರಿದಂತೆ ಅನೇಕಾನೇಕರನ್ನು ಗುರಿತಿಸಿಬಹುದು. ಭಜನಾ ಪದಗಳು ರಚಿಸಿ ರಾಗಬದ್ದವಾಗಿ ಹಾಡುತ್ತಿರುವುದು ಇಲ್ಲಿನ ವಿಶೇಷ ಸಂಗತಿಯಾಗಿದೆ.

ಇದನ್ನೂ ಓದಿ: ಶಹಾಬಾದ: ಕಸಾಪದಿಂದ ಡಾ. ರಾಜಕುಮಾರ್ 94ನೇ ಹುಟ್ಟುಹಬ್ಬದ

ಈ ಭಜನಾ ಹಾಡುಗಳು ಭಕ್ತಿ ಭಾವದೊಂದಿಗೆ ಎಲ್ಲರ ಮೆಚ್ಚುಗೆ ಪಡೆದದ್ದಲ್ಲದೆ ಆಕಾಶವಾಣಿಯಲ್ಲಿಯು ಪ್ರಸಾರಗೊಂಡು ಸೈ ಎನಿಸಿಕೊಂಡಿವೆ. ಹಾವೇರಿಯ ಮಠದಲ್ಲಿ ಸಂಗೀತ ಪಾಠ ಶಾಲೆ ಇದ್ದು, ಸಂಗೀತಾಸಕ್ತರಿಗೆ ಒಳ್ಳೆಯ ತರಬೇತಿ ನೀಡಿ ಕಲಾವಿದರನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಚಲನಚಿತ್ರದ ಹಿನ್ನಲೆ ಗಾಯಕರಾದ ಚಿ.ಉದಯ ಶಂಕರ, ಬಿ.ಕೆ ಸುಮಿತ್ರ ಸೇರಿದಂತೆ ಪ್ರಖ್ಯಾತ ಕಲಾವಿದರಿಂದ ಸಂಗೀತ ಸೇವೆ ಸಂದಿದೆ. ಸ್ವಾರಸ್ಯಕರ ಸಂಗೀತ ಸುಧೆಯನ್ನು ಮಠದ ಪ್ರಾಂಗಣದಲ್ಲಿ ನಡೆಸುವಲ್ಲಿ ಪೂಜ್ಯರ ಪಾತ್ರ ಶ್ಲಾಘನೀಯ.ಈ ಪರಿಸರದಲ್ಲಿಯೇ ಮಠದ ಬಗ್ಗೆ ಜನಪದ ಹಾಡುಗಳು ದೊರೆತಿವೆ. ಇಲ್ಲಿನ ಮಹಿಳೆಯರು ಅಕ್ಕನ ಬಳಗ ಕಟ್ಟಿಕೊಂಡು ಭಜನಾ ಹಾಡುಗಳು ರಚಿಸಿ ಹಾಡುತ್ತಿರುವುದು ಕಂಡು ಬರುತ್ತದೆ. ಇಂದಿಗೂ ಇಲ್ಲಿ ಸ್ವ-ಸಹಾಯ ಸಂಘಗಳು ತಮ್ಮ ಸ್ವಾವಲಂಬಿ ಬದುಕಿನೊಡನೆ ಅಧ್ಯಾತ್ಮದತ್ತ ಒಲುವು ಮೂಡಿರುವುದು ವಿಶೇಷವೆನಿಸುತ್ತದೆ. ಸಮಾಜದ ಶ್ರೇಯಸ್ಸನ್ನು ಬಯಸುವ ಮಠದ ಪೂಜ್ಯರು, ಭಕ್ತರ ಮನದಿಚ್ಛೆಯನ್ನು ಈಡೇರಿಸಲು ದೇವರಲ್ಲಿ ಪ್ರಾರ್ಥಿಸುತ್ತ ಮೌನ ಅನುಷ್ಟಾನ ಮಾಡುವ ಪದ್ದತಿ ರೂಢಿಯಲ್ಲಿದೆ. ಲಿಂ.ಮ.ನಿ.ಪ್ರ. ಶಿವಲಿಂಗ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಪ್ರಸ್ತುತ ಪೂಜ್ಯರಿರ್ವರು ಮೌನ ಅನುಷ್ಟಾನ ಮಾಡುವ ಪರಂಪರೆ ಮುಂದುವರೆಸಿದ್ದಾರೆ. ಮಠದ ಈ ಪರಂಪರೆಯನ್ನು ಪ್ರಸ್ತುತ ಪೂಜ್ಯರು ಪಾಲಿಸುತ್ತಾ ಭಕ್ತರ ಮನ ಗೆದ್ದಿದ್ದಾರೆ.

ರೈತಾಪಿ ವರ್ಗದವರ ದುಡಿಮೆ, ತ್ಯಾಗ, ಸೇವಾ ಮನೊಭಾವ, ನಿಷ್ಕಲ್ಮಶ ಪರಿಶುದ್ಧ ಕಾಯಕದ ಮಹತಿಗೆಗೌರವ ಸಲ್ಲಿಸಲೆಂದೇ ರೊಟ್ಟಿ ಜಾತ್ರೆ ಏರ್ಪಡಿಸಿದ್ದು ಕಂಡುಬರುತ್ತದೆ. ಒಂದು ಕಾಳು ಬೆಳೆಯಲು ಒಂದು ವರ್ಷ ಸಮಯ ಬೇಕಾಗುತ್ತದೆ. ಅದೆ ಒಂದು ಕಾಳು ಹಾಳುಮಾಡಲು ಕ್ಷಣಹೊತ್ತು ಸಾಕು. ಆದ್ದರಿಂದ ತುತ್ತಿನೊಳಗೊಂದು ಅರ್ಥ ತಿಳಿಸಿ ನಿತ್ಯ ದಾಸೋಹಿಗಳಾಗಲು ಬೆಳಕು ತೋರುವ ಕಾರ್ಯ ಈ ರೊಟ್ಟಿಜಾತ್ರೆಯಲ್ಲಿ ನಡೆಯುತ್ತದೆ. ಎತ್ತಿನ ಭಂಡಿಯಲ್ಲಿ ಮೆರವಣಿಗೆ ಮಾಡುತ್ತಾ ಬಂದು ದಾಸೋಹಕ್ಕೆ ಸಮರ್ಪಣೆ ಮಾಡುವ ಸಂಭ್ರಮ ನೋಡುಗರ ಕಣ್ಣಿಗೆ ಹಬ್ಬವೇ ಸರಿ.

ಜಾತ್ರೆಯ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸುತ್ತಾ ಬಂದಿದ್ದಾರೆ. ಇದರಿಂದ ಆರೋಗ್ಯದ ಅರಿವು ಮೂಡುವುದರೊಂದಿಗೆ ದಾನದ ಗುಣ ಬೆಳೆಸುವ ಸದುದ್ದೇಶವಿದೆ. ಸ್ಬತಃ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು ರಕ್ತದಾನ ಮಾಡಿರಿವುದರಿಂದ ಶಿಬಿರದಲ್ಲಿ ಹಲವರು ಭಕ್ತರು ಭಾಗವಹಿಸಿ ದಾನ ಗುಣವನ್ನು ಮೆರೆದಿದ್ದಾರೆ. ಇದರಿಂದಾಗಿ ಜನರಲ್ಲಿ ವೈಜ್ಞಾನಿಕ ಮನೋಭಾವ ತುಂಬುವಲ್ಲಿಯು ಮಠದ ಪೂಜ್ಯರ ಪಾತ್ರ ಹಿರಿದಾಗಿದೆ. ಇಂತಹ ಕಾರ್ಯಗಳ ಕುರಿತಂತೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸಿರುವ ಆಧುನಿಕ ಪ್ರಯತ್ನಗಳು ಶ್ರೀಮಠದಿಂದ ನಡೆದು ಬಂದಿವೆ.

ಇದನ್ನೂ ಓದಿ: ಶೋಭಾಯಾತ್ರೆ ಹಿನ್ನೆಲೆ:ಆಳಂದ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧ

ದುಷ್ಟ ಗುಣಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎಂಬ ಶೀರ್ಷಿಕೆಯಡಿಯಲ್ಲಿ ಮಠದ ಪೂಜ್ಯರು ಹಳ್ಳಿ ಹಳ್ಳಿಯ ಮನೆಗಳಿಗೆ ಹೋಗಿ ದುಷ್ಟ ಗುಣಗಳನ್ನು ತಮ್ಮ ಜೊಳಿಗೆಯಲ್ಲಿ ಹಾಕುವಂತೆ ಕೇಳಿಕೊಂಡರು. ಆ ಕಾರ್ಯ ಮುಂದುವರಿದೇ ಇದೆ. ಇದರಿಂದಾಗಿ ಅದೆಷ್ಟೋ ಜನ ದುಷ್ಟ ಗುಣಗಳಾದ ಸಿಗರೇಟು, ತಂಬಾಕು, ಕುಡಿತಗಳಂತಹ ಮಾರಕ ವ್ಯಸನಗಳಿಂದ ಮುಕ್ತರಾದ ಉದಾಹರಣೆಗಳಿವೆ. ಪ್ರಯೋಗಾತ್ಮಕ ಚಟುವಟಿಕೆಗಳು ಹಮ್ಮಿಕೊಳ್ಳುತ್ತ ಬಂದಿರುವುದು ಮಠದ ಹೆಮ್ಮೆಯ ಕಾರ್ಯಗಳಾಗಿವೆ. ಸಹಪಂಕ್ತಿ ಭೋಜನಗಳಂತಹ ಕಾರ್ಯಗಳಿಂದಾಗಿ ಜನರಲ್ಲಿ ಸಮಾನತೆಯ ಆಲೋಚನೆಗಳು ಬಿತ್ತರಿಸುತ್ತಿರುವುದು ಇಲ್ಲಿ ಕಾಣುವ ನಿತ್ಯ ಸತ್ಯದ ಸಂಗತಿಗಳಾಗಿವೆ. ಪುರಾಣ ಪ್ರವಚನಗಳು ಮಠದಲ್ಲಿ ನಡೆಯುತಲಿದ್ದು ಪೂರ್ವಿಕ ಶರಣರು ಬಾಳಿ ಬದುಕಿದ ಆದರ್ಶ ಜೀವನದ ಮೆಲುಕು ಹಾಕುತ್ತಾ ತಮ್ಮ ಬದುಕಿನ ದಾರಿ ಕಂಡುಕೊಳ್ಳುತ್ತಾ ಸಾಗುವ ವೇದಿಕೆಗಳಾಗಿವೆ. ಪೂಜ್ಯರ ಜನ್ಮದಿನೋತ್ಸವ ಮತ್ತು ಪುಣ್ಯ ಸ್ಮರಣೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲ್ಲಿವೆ.

ಮಠ ಮಂದಿರಗಳು ಧಾರ್ಮಿಕ ಚಟುವಟಿಕೆಗಳಲ್ಲಿ ತೋಡಗಿದರೆ ಸಾಲದೆಂದು, ಶೈಕ್ಷಣಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವುದು ಕಂಡುಬರುತ್ತದೆ. ಹುಕ್ಕೇರಿಮಠದಡಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ ಶಿಕ್ಷಣ ನೀಡುತ್ತಿದ್ದಾರೆ. ಶಿವಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿವಲಿಂಗೇಶ್ವರ ಮಹಿಳಾ ಪದವಿ ಮಹಾವಿದ್ಯಾಲಯ ಶಿವಲಿಂಗೇಶ್ವರ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ರಾಚೋಟೇಶ್ವರ ವಾಣಿಜ್ಯ ಮಹಾವಿದ್ಯಾಲಯ ಸೇರಿದಂತೆ ಅನೇಕಾನೇಕ ಶಾಲೆ ಕಾಲೇಜುಗಳ ಮೂಲಕ ಉಚಿತ ಶಿಕ್ಷಣ ವದಗಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ರಂಗದಲ್ಲಿ ಬೆಳೆಯಲು ಪ್ರೊತ್ಸಾಹಿಸುತ್ತಾ ಉಚಿತ ಪ್ರಸಾದ ನಿಲಯ ಸ್ಥಾಪಿಸಿದ್ದಾರೆ. ಇಲ್ಲಿ ಊಟ ವಸತಿಯೊಂದಿಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ವದಗಿಸುತ್ತಾ ಬಂದಿದ್ದಾರೆ. ಈ ಪ್ರಸಾದ ನಿಲಯದಲ್ಲಿ ಕಲಿತ ಅದೇಷ್ಟೋ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ಸರಕಾರಿ ನೌಕರಿಯಲ್ಲಿದ್ದಾರೆ. ಇನ್ನೂ ಕೆಲವರು ಸ್ವಯಂ ಉದ್ಯೋಗದಿಂದ ಸುಖಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಇಲ್ಲಿಯ ಶಿಕ್ಷಣ ಸಂಸ್ಥೆ ಬಡ ಜನರ ಆಶಾಕಿರಣವಾಗಿದೆ.

ಇದನ್ನೂ ಓದಿ: 10.ರೂ.ಗಳ ಕೋಟಿ ವಿವಿಧ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ

ಸಾಮಾಜಿಕ ಕಳಕಳಿಯಿಂದಾಗಿ ಶ್ರೀಮಠದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಮಾಡುವ ಮುಖಾಂತರ ನೂರಾರು ಬಡ ದಂಪತಿಗಳಿಗೆ ನೆರವಾಗುವುದು ಇಲ್ಲಿನ ಆದರ್ಶವೇ ಸರಿ. ಹೀಗೆ ಸಾಮಾಜಿಕ ಕಾರ್ಯಗಳು ಮಠದಲ್ಲಿ ನಿರಂತರವಾಗಿ ನಡೆಯುತ್ತಲಿವೆ. ಅದರಂತೆಯೇ ದನಗಳ ಜಾತ್ರೆಯು ಉತ್ತಮವಾದ ರೀತಿಯಲ್ಲಿ ನಡೆದು ಬಂದದ್ದು ಕಂಡು ಬರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಹುಕ್ಕೇರಿಮಠವು ಒಂದು ಅಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯಿಕ ರಂಗದಲ್ಲಿ ವಿಶೇಷ ಸ್ಥಾನ ಮಾನವನ್ನು ಪಡೆದಿದೆ. ಸಾಹಿತ್ಯ ಸಾಧಕರ ತಾಣವಾಗಿದ್ದು, ಹಲವು ಮಹತ್ವದ ಕೃತಿಗಳು, ಬಿಡಿ ಲೇಖನಗಳು, ಉಪನ್ಯಾಸ ಮಾಲಿಕೆಗಳು ಹಾಗೂ ಹಾಡುಗಳ ಧ್ವನಿಸುರುಳಿಗಳು ಲೋಕಾಪರ್ಣೆ ಮಾಡಿ ತನ್ನ ಘನತೆ ಹೆಚ್ಚಿಸಿ ಕೊಂಡಿದೆ. ಬಡವರ ಪಾಲಿನ ಆಶಾ ಕಿರಣವಾಗಿ ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ದಯಪಾಲಿಸಿದ್ದು ಹೆಮ್ಮೆಯ ಸಂಗತಿ. ಮಠದ ಶಿಕ್ಷಣ ಸಂಸ್ಥೆಯಿಂದ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಹಂತದ ವರೆಗಿನ ಉನ್ನತ ಶಿಕ್ಷಣ ಒದಗಿಸುತ್ತಿರುವುದು ವಿಶೇಷವಾಗಿದೆ..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here