ಭ್ರಷ್ಟಾಚಾರದ ಸೋಂಕಿತ ಸರ್ಕಾರ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

0
26
  • ಟೆಂಡರ್ ಸಮಿತಿ ಪ್ರಕ್ರಿಯೆ ನೋಡಿದರೆ ಉದ್ದೇಶಪೂರ್ವಕವಾಗಿ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವಂತೆ ಇದೆ.

ಬೆಂಗಳೂರು: ಕಳೆದ ಮಾ.15ರಂದು ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಲ್ಲಿನ ಕೊಳವೆ ಬಾವಿ ಟೆಂಡರ್ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಒಟ್ಟು 14,577 ಕೊಳವೆ ಬಾವಿ, 431ಕೋಟಿ ರೂ. ಮೊತ್ತದ ಯೋಜನೆಯಾಗಿದೆ. ನಾನು ಈ ಹಿಂದೆ ಹೇಳಿದಂತೆ ನೀರಾವರಿ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಈ ಟೆಂಡರ್ ಕರೆಯಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ 441 ಕೋಟಿ ಹಗರಣದಲ್ಲಿ ಕೆಲವು ಗುತ್ತಿಗೆದಾರರು ನಕಲಿ ಆದಾಯ ತೆರಿಗೆ ಹಾಗೂ ಕಾಮಗಾರಿಗಳ ದಾಖಲೆ ಸಲ್ಲಿಕೆ ಮಾಡಿದ್ದಾರೆ, ಟೆಂಡರ್ ಪರಿಶೀಲನಾ ಸಮಿತಿ ಪಾಲುದಾರಿಕೆಯಲ್ಲಿ ನೇರವಾಗಿ ಮಂತ್ರಿಗಳ ಅನುಮತಿ ಪಡೆದು ಅಕ್ರಮ ನಡೆದಿದೆ ಎಂದು ನಾನು ಈ ಹಿಂದೆ ಆರೋಪಿಸಿದ್ದೆ.

Contact Your\'s Advertisement; 9902492681

ನನ್ನ ಪ್ರಶ್ನೆ ಒಂದೇ ಕೆಲಸಕ್ಕೆ ಎರಡು ಬೇರೆ ದರ ಯಾಕೆ? ಹಿಂದುಳಿದ ವರ್ಗಗಳ ಇಲಾಖೆಯ ಯೋಜನೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 84 ಸಾವಿರ ರೂ. ವೆಚ್ಚವಾದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 1.93 ಲಕ್ಷ ರೂ. ವೆಚ್ಚವಾಗಿದೆ. ಈ ವ್ಯಾತ್ಯಾಸ ಯಾಕೆ? ಎಂಬುದು ನನ್ನ ಪ್ರಮುಖ ಪ್ರಶ್ನೆಯಾಗಿತ್ತು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಮಾ.31ರಂದು ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ತನಿಖೆಗೆ ಆದೇಶ ಹೊರಡಿಸುತ್ತಾರೆ. ಈ ಆದೇಶದಲ್ಲಿ ಈ ಪ್ರಕರಣದ ಬಗ್ಗೆ 15ದಿನಗಳ ಒಳಗಾಗಿ ತನಿಖೆ ಮುಗಿಸಿ ವರದಿ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮುಖ್ಯ ಇಂಜಿನಿಯರ್ ಗೆ ತಿಳಿಸಲಾಗುತ್ತದೆ.

ಏ.13ರಂದು ಪ್ರಧಾನ ಕಾರ್ಯದರ್ಶಿಗಳು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆದು ಎರಡು ಷರತ್ತು ಹಾಕುತ್ತಾರೆ. ತನಿಖೆಗೆ ಆದೇಶಿಸಿದ ನಂತರ ಕೆಲಸ ಮುಂದುವರಿಯಲಿ, ಲೋಪ ಇದ್ದರೆ ಬಿಲ್ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇದು ಸಾಮಾನ್ಯ ಪ್ರಜ್ಞೆಯೇ? ಅನರ್ಹರಿಗೆ ಕೆಲಸ ಕೊಟ್ಟಿರುವುದೇ ಅಕ್ರಮ ಎಂದು ನಾವು ಆರೋಪ ಮಾಡುತ್ತಿರುವಾಗ, ಆ ಕೆಲಸ ನಡೆಯಲಿ ಬಿಲ್ ಪಾವತಿಸುವುದಿಲ್ಲ ಎಂದರೆ ಹೇಗೆ ಸಾಧ್ಯ? ಬಿಲ್ ಪಾವತಿ ಮಾಡದಿದ್ದರೆ ಅವರು ನ್ಯಾಯಾಲಯಕ್ಕೆ ಹೋಗುತ್ತಾರೆ. ಕೆಲಸ ನಿಲ್ಲಿಸಿ ತನಿಖೆ ಮಾಡಲು ಸಮಸ್ಯೆ ಏನು?.

ತನಿಖೆ ಆದೇಶ ಆಗಿ ಒಂದು ತಿಂಗಳ ನಂತರ ಅಂದರೆ ಏ.25ರಂದು ಗ್ರಾಮೀಣಭಿವೃದ್ಧಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮುಖ್ಯ ಇಂಜಿನಿಯರ್ ಅವರು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು. ಜಲ್ ಜೀವನ್ ಮಿಷನ್ ಯೋಜನೆಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಾಗಿರುವುದರಿಂದ ಈ ಪ್ರಕರಣದ ತನಿಖೆಯನ್ನು ಮಾಡಲು ಬೇರೆ ತಾಂತ್ರಿಕ ಅಧಿಕಾರಿಯನ್ನು ನೇಮಿಸಬೇಕು ಎಂದು ಕೋರಿರುತ್ತಾರೆ.

ಇದನ್ನೂ ಓದಿ: ಮಂಗಿಹಾಳ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ

ಈ ಮಧ್ಯೆ ಮಾ.9ರಂದು ದೂರು ನಂತರ ಅಂಬೇಡ್ಕರ್ ಅಭಿವೃದ್ಧಿ ನಗಮದವರು ಆದಾಯ ತೆರಿಗೆ ಇಲಾಖೆ ವಾಣಿಜ್ಯ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಅದರಲ್ಲಿ ಗುತ್ತಿಗೆದಾರರು ಸಲ್ಲಿಸಿರುವ ವಾರ್ಷಿಕ ಆದಾಯ ಪ್ರಮಾಣಪತ್ರ ನೈಜ್ಯವೇ ಅಥವಾ ನಕಲಿಯೇ ಎಂದು ಪರಿಶೀಲಿಸಿ ಎಂದು ಕೇಳಿರುತ್ತಾರೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದವರು ಟೆಂಡರ್ ಪರಿಶೀಲನಾ ಸಮಿತಿಯಲ್ಲಿ ಮಾಡಬೇಕಾಗಿರುವ ಕೆಲಸವನ್ನು ಟೆಂಡರ್ ಕೊಟ್ಟು ಕೆಲಸ ಆರಂಭವಾದ ನಂತರ ಇವರು ಸಲ್ಲಿಸಿರುವ 22 ಪ್ರಮಾಣಪತ್ರಗಳ ನೈಜ್ಯತೆ ಪರಿಶೀಲನೆಗೆ ಮುಂದಾಗುತ್ತಾರೆ. ಈ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಬಂದಿಲ್ಲದಿದ್ದರೂ ಕೆಲಸ ಮಾತ್ರ ಮುಂದುವರಿಯುತ್ತಿದೆ.

ಈ ಪ್ರಕರಣದ ತನಿಖೆ ಬಗ್ಗೆ ಪ್ರಶ್ನೆ ಕೇಳಿದಾಗ ಇಲಾಖೆ ಉತ್ತರ ನೀಡಿದ್ದು, ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗೆ ತನಿಖೆಗೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಭುಗಿಲೇಳಲಿದೆ ಎಸ್‌ಟಿ ಮೀಸಲು ಹೋರಾಟ | ಮೇ.೨೦ ರಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ: ತಿಪ್ಪೇಸ್ವಾಮಿ

ಈ 40 ಪರ್ಸೆಂಟ್ ಸರ್ಕಾರ ಬೇರೆ ಹಗರಣ ಮುಚ್ಚಿದ ಹಾಗೆ ಇದನ್ನೇ ಮುಚ್ಚಲು ಪ್ರಯತ್ನಿಸುತ್ತಿದೆ. ಇದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 431 ಕೋಟಿ ಹಣವನ್ನು ನುಂಗುತ್ತಾರೆ ಎಂದರೆ ಇವರು ಯಾವ ಮಟ್ಟಕ್ಕೆ ಇಳಿದಿದ್ದಾರೆ. ಈ ಸರ್ಕಾರ ಭ್ರಷ್ಟಾಚಾರದ ಸೋಂಕಿಗೆ ತುತ್ತಾಗಿರುವ ಸರ್ಕಾರ.

ಅಧಿವೇಶನ ನಡೆಯುವ ಸಂದರ್ಭದಲ್ಲಿ ನಾನು ಸಚಿವಾಲಯಕ್ಕೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ಟೆಂಡರ್ ಪರಿಶೀಲನಾ ಸಮಿತಿಯ ನಡವಳಿಗಳು ಬಗ್ಗೆ ಪ್ರಶ್ನೆ ಕೇಳಿದ್ದೆ. ಅದಕ್ಕೆ ಅವರು ಮಾ.16ರಂದು ಉತ್ತರ ನೀಡಿದ್ದಾರೆ. ಈ ದಾಖಲೆ ಸರ್ಕಾರವೇ ನೀಡಿದ್ದು, ಈ ದಾಖಲೆಗಾಗಿ ಸರ್ಕಾರ ನನಗೆ ನೊಟೀಸ್ ಕೊಡಬಹುದು. ಸರ್ಕಾರದ ಉತ್ತರದಲ್ಲಿ ನೀಡಿರುವ ಮಾಹಿತಿ ಪ್ರಕಾರ ಟೆಂಡರ್ ಪರಿಶೀಲನಾ ಸಮಿತಿ ಪ್ರಕ್ರಿಯೆ ನೋಡಿದರೆ ಉದ್ದೇಶಪೂರ್ವಕವಾಗಿ ಕೆಲವು ಗುತ್ತಿಗೆದಾರರಿಗೆ ಲಾಭವಾಗುವಂತೆ ಮಾಡುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಬಿಜೆಪಿಯೇ ಭ್ರಷ್ಟಾಚಾರ- ಹಗರಣಗಳ ಗಂಗೋತ್ರಿ: ಡಾ. ಅಜಯ್ ಸಿಂಗ್ ತಿರುಗೇಟು

ಈ 40 ಪರ್ಸೆಂಟ್ ಸರ್ಕಾರದ ಜಾದು ಹೇಗಿದೆ ಎಂದರೆ ರಾಮನಗರದ ಯೋಜನೆಗೆ ಪ್ಯಾಕೇಜ್ 5 ಎಂದು ಕರೆದಿದ್ದು, ಶಕ್ತಿ ಬೋರ್ ವೆಲ್ ಎಂಬ ಗುತ್ತಿಗೆದಾರರು ಪ್ಯಾಕೇಜ್ 5 ಹಾಗೂ ಪ್ಯಾಕೇಜ್ 15ಗೆ ಮೊದಲ ಬಾರಿ ಅರ್ಹತೆ ಪಡೆಯುವುದಿಲ್ಲ. ಶಕ್ತಿ ಬೋರ್ ವೆಲ್ ನವರು ನಿಗದಿಯಷ್ಟು ಕೊಳವೆ ಬಾವಿ ಕೊರೆದಿಲ್ಲ ಹಾಗೂ ಇವರ ಮೊತ್ತವೂ ಸರಿಹೊಂದುವುದಿಲ್ಲ ಎಂದು ತಿರಸ್ಕೃತಗೊಂಡಿದ್ದು, ಒಂದು ತಿಂಗಳ ನಂತರ ಎರಡನೇ ಬಾರಿ ಅರ್ಜಿ ಹಾಕಿದಾಗ ಇವರು ಅರ್ಹತೆ ಪಡೆಯುತ್ತಾರೆ. ಕೇವಲ ಒಂದೇ ತಿಂಗಳಲ್ಲಿ ಇವರು ಹೇಗೆ ಅರ್ಹತೆ ಪಡೆದಿದ್ದಾರೆ ಎಂಬುದು ಆಶ್ಚರ್ಯ. ಇದೇ ರೀತಿ ಲಕ್ಷ್ಮಿ ವೆಂಕಟೇಶ್ವರ ಬೋರ್ ವೆಲ್, ಬಾಲಾಜಿ ಬೋರ್ ವೆಲ್ ಗುತ್ತಿಗೆದಾರರು ಮೊದಲ ಬಾರಿ ತಿರಸ್ಕೃತಗೊಂಡು ಒಂದೇ ತಿಂಗಳಲ್ಲಿ ಮತ್ತೆ ಅರ್ಹತೆ ಪಡೆದಿರುತ್ತಾರೆ. ಇವರಿಗೆ ಕೆಲಸದ ಪ್ರಮಾಣ ಪತ್ರ ಹೇಗೆ ಲಭ್ಯವಾಯಿತು? ಎಂದು ಯಾರಿಗೂ ಗೊತ್ತಿಲ್ಲ. ಇದು ನಕಲಿ ದಾಖಲೆಗಳಲ್ಲವೇ?

ಸದನದಲ್ಲಿ ಈ ಅಕ್ರಮದ ಬಗ್ಗೆ ಪ್ರಶ್ನೆ ಕೇಳಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದ ಸಚಿವರು ನಂತರ ತನಿಖೆಗೆ ಆದೇಶಿಸಿದ್ದಾರೆ. ಮಂತ್ರಿಗಳು, ಇಲಾಖೆ ಅಧಿಕಾರಿಗಳು ಇವರಿಂದ ಎಷ್ಟು ಕಮಿಷನ್ ಪಡೆದಿದ್ದಾರೆ? ಬಿಜೆಪಿಯ 40 ಪರ್ಸೆಂಟ್ ಮಾನದಂಡವಾಗಿ ನೋಡುವುದಾದರೆ 431 ಕೋಟಿ ಯೋಜನೆಯಲ್ಲಿ 173 ಕೋಟಿ ಹಗರಣ ಇದಾಗಿದ್ದು, ಯಾರಿಗೆಲ್ಲ ಎಷ್ಟೇಷ್ಟು ಕಿಕ್ ಬ್ಯಾಕ್ ಹೋಗಿದೆ?

ಇನ್ನು ಆದಾಯ ತೆರಿಗೆ ಪ್ರಮಾಣ ಪತ್ರವನ್ನು ಹೇಗೆ ನಕಲಿ ಮಾಡಿದ್ದಾರೆ ಎಂದು ನೋಡುವುದಾದರೆ, ಮಾರುತಿ ಬೋರ್ ವೆಲ್ ನವರು 405 ಬೋರ್ ವೆಲ್ ಕಾಮಗಾರಿ ಸಿಕ್ಕಿದ್ದು, ಇದರ ಅಂದಾಜು ವೆಚ್ಚ 10.78 ಕೋಟಿ. 2018-19ರಲ್ಲಿ ಇದೇ ಇಲಾಖೆಯಲ್ಲಿ ಬೇರೆ ಟೆಂಡರ್ ಗೆ ಅವರು ಸಲ್ಲಿಸಿದ್ದ ಆದಾಯ ತೆರಿಗೆ ದಾಖಲೆಯಲ್ಲಿ 1.54 ಕೋಟಿಯಷ್ಟು ಆದಾಯ ಇದೆ ಎಂದು ಸಲ್ಲಿಸಿರುತ್ತಾರೆ. ಕೇವಲ 2 ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲು ಹೇಗೆ ಸಾಧ್ಯ? ಅಧಿಕಾರಿಗಳಿಗೆ ಸಾಮಾನ್ಯ ಪ್ರಜ್ಞೆ ಇದ್ದಿದ್ದರೆ ತಮ್ಮದೇ ಇಲಾಖೆಯ ಕಳೆದ ವರ್ಷಗಳ ಯೋಜನೆಗಳಲ್ಲಿ ಇವರು ಸಲ್ಲಿಸಿರುವ ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿದ್ದರೆ ಈ ಗೊಂದಲಗಳೇ ಆಗುತ್ತಿರಲಿಲ್ಲ. ಆದರೆ ತಮ್ಮ ಜೇಬು ತುಂಬಿಸಿಕೊಳ್ಳು ಇದ್ಯಾವುದನ್ನು ಪರಿಶೀಲಿಸದೇ ಈ ಅಕ್ರಮ ಎಸಗಲಾಗಿದೆ.

ಇದನ್ನೂ ಓದಿ: ಅಲ್ಪಸಂಖ್ಯಾತ ಅಂಗನವಾಡಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಡಾ.ಉಮೇಶ ಜಾಧವ

ಲಕ್ಷ್ಮಿ ವೆಂಕಟೇಶ್ವರ ಬೋರ್ ವೆಲ್ಸ್ ಗೆ 118 ಬೋರ್ ವೆಲ್ ಗಳು ಸಿಕ್ಕಿದ್ದು ಟೆಂಡರ್ ಮೊತ್ತ 4.50 ಕೋಟಿ ರೂ. 2018-19ರಲ್ಲಿ ಇವರು ಸಲ್ಲಿಸಿರುವ ದಾಖಲೆಯಲ್ಲಿ 1.05 ಕೋಟಿ ಯಷ್ಟು ಆದಾಯವಿದ್ದರೆ, ಈ ಟೆಂಡರ್ ಗೆ ಸಲ್ಲಿಸಿರುವ ದಾಖಲೆಯಲ್ಲಿ 8.50 ಕೋಟಿಯಷ್ಟು ಆದಾಯವಿದೆ ಎಂದು ಹೇಳಿಕೊಳ್ಳಲಾಗಿದೆ.

ರೈತಬಂಧು ಬೋರ್ ವೆಲ್ ನವರಿಗೆ 47 ಬೋರ್ ವೆಲ್ಗಳನ್ನು 1.32 ಕೋಟಿ ರೂ. ಟೆಂಡರ್ ಮೊತ್ತವಾಗಿದೆ. ಇವರು 2018-19ರಲ್ಲಿ ಸಲ್ಲಿಸಿದ ಆದಾಯ ತೆರಿಗೆ ಪ್ರಮಾಣಪತ್ರದಲ್ಲಿ 4.93 ಕೋಟಿ ಆದಾಯ ತೋರಿಸಿದ್ದು, ಈ ಟೆಂಡರ್ ಪಡೆಯಲು ತಮ್ಮ ಆದಾಯವನ್ನು 1.92 ಕೋಟಿಗೆ ಇಳಿಸಿದ್ದಾರೆ. ಇದು ಹೇಗೆ ಸಾಧ್ಯ? ಎನ್.ಸಿ ಚೆನ್ನಕೇಶ್ವರ ಬೋರ್ ವೆಲ್ಸ್ ನವರಿಗೆ ಮೂರು ನಿಗಮಗಳಿಂದ 493 ಕೊಳವೆ ಬಾವಿಗಳ ಗುತ್ತಿಗೆ ಸಿಕ್ಕಿದ್ದು ಇದರ ಅಂದಾಜು ವೆಚ್ಚ 10.75 ಕೋಟಿ ರೂ. ಆಗಿದೆ. ಇವರು 2019-19ರಲ್ಲಿ ಸಲ್ಲಿಸಿರುವ ದಾಖಲೆ ಪ್ರಕಾರ ಇಲರ ಆದಾಯ 9.96 ಕೋಟಿ ಎಂದು ತಿಳಿಸಿದ್ದರು. ಈ ಬಾರಿ ಒಂದು ಕಡೆ 10.16 ಕೋಟಿ ಎಂದು ತೊರಿಸಿದರೆ, ಮತ್ತೊಂದು ಕಡೆ 16.30 ಕೋಟಿ ತೋರಿಸಿದ್ದಾರೆ.

ಇದನ್ನೂ ಓದಿ: ಕೂಡಲಗಿ ಗ್ರಾಮದಲ್ಲಿ ಪಂಪ್ ಹೌಸ್‌ಗೆ ಬೆಂಕಿ ವಸ್ತುಗಳು ಭಸ್ಮ

ವಿರಭದ್ರಪ್ಪ ಬೋರ್ ವೆಲ್ಸ್ ನವರಿಗೆ 1136 ಕೊಳವೆ ಬಾವಿಗಳನ್ನು ನೀಡಿದ್ದು, ಟೆಂಡರ್ ಮೊತ್ತ 47.52 ಕೋಟಿ ಆಗಿದೆ. ಇವರು ಅರ್ಹತೆ ಸಾಮರ್ಥ್ಯ ಇರುವುದು 13 ಕೋಟಿ ರೂ. ಮೊತ್ತ ಕಾಮಗಾರಿಗಳಿಗೆ. ಆದರೆ ಅವರಿಗೆ 47 ಕೋಟಿ ಮೊತ್ತದ ಕಾಮಗಾರಿ ಸಿಕ್ಕಿದೆ.

ಬಾಲಾಜಿ ಬೋರ್ ವೆಲ್ ನವರು 14 ಕೋಟಿ ಕಾಮಗಾರಿಗೆ ಮಾತ್ರ ಅರ್ಹತೆ ಹೊಂದಿದ್ದು, ಇವರಿಗೆ 24 ಕೋಟಿ ಮೊತ್ತದ ಕಾಮಗಾರಿ ನೀಡಲಾಗಿದೆ. ಮಾರುತಿ ರಾಕ್ ಡ್ರಿಲ್ಲರ್ ಅವರು 21 ಕೋಟಿ ಕಾಮಗಾರಿಗೆ ಅರ್ಹತೆ ಇದ್ದು, ಇವರಿಗೆ 55 ಕೋಟಿ ಮೊತ್ತದ ಕಾಮಗಾರಿ ಸಿಕ್ಕಿದೆ. ಇದು ಹೇಗೆ ಸಾಧ್ಯ? ಯಾವ ಆಧಾರದ ಮೇಲೆ ಇದನ್ನು ನೀಡಲಾಗಿದೆ? ಟೆಂಡರ್ ಪರಿಶೀಲನಾ ಸಮಿತಿ ಏನು ಕತ್ತೆ ಕಾಯುತ್ತಿತ್ತೇ? ಈ ಟೆಂಡರ್ ಗಳಿಗೆ ಅನುಮೋದನೆ ನೀಡುವಾಗ ಮಂತ್ರಿಗಳು ಕಣ್ಣು ಮುಚ್ಚಿಕೊಂಡು ಸಹಿ ಹಾಕಿದರೆ? ಅಥವಾ 40 ಪರ್ಸೆಂಟ್ ಕಮಿಷನ್ ಪಡೆದು ಸಹಿ ಮಾಡಿದರಾ? ಇನ್ನು ಬೋರ್ ವೆಲ್ ಕಾಮಗಾರಿಗಳಿಗೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸುವ ಪದ್ಧತಿ ಇದೆ.

ಅಂದರೆ ಕಾಮಗಾರಿಯಲ್ಲಿ ಯಾವ ಗುಣಮಟ್ಟದ ಕೊಳವೆಗಳನ್ನು ಬಳಸುತ್ತಾರೆ ಎಂಬುದನೆಲ್ಲಾ ಪರಿಶೀಲನೆ ಮಾಡಲಾಗುವುದು. ಆದರೆ ಈ ಯೋಜನೆಯಲ್ಲಿ ಈ ಪರಿಶೀಲನೆ ಮಾಡುವ ಸಮಿತಿಯೇ ನೇಮಕವಾಗಿಲ್ಲ. ಆದರೂ ಇವರು ಟೆಂಡರ್ ಪಡೆದು ಕೆಲಸ ಆರಂಭಿಸಿದ್ದಾರೆ. 14 ಸಾವಿರ ಕೊಳವೆ ಬಾವಿಗಳಲ್ಲಿ 3-4 ಸಾವಿರ ಕಳವೆ ಬಾವಿ ಕೊರೆದಿದ್ದಾರೆ. ಕೊಳವೆ ಬಾವಿ ಕೊರೆಯುವ ಮುನ್ನ ಹಾಗೂ ಕೆರೆದ ನಂತರ ಪರಿಶೀಲನೆ ಅಗತ್ಯವಿದ್ದು, ಮೂರನೇ ವ್ಯಕ್ತಿ ಪರಿಶೀಲನೆಗೆ ನೇಮಕವಾಗದೇ ಈ ಕೆಲಸ ಮಾಡಿರುವುದು ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಇದನ್ನೂ ಓದಿ: ಡಾ. ಸುನೀಲಕುಮಾರ ಹೆಚ್ ವಂಟಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನಕ್ಕೆ ಒತ್ತಾಯ

ಇನ್ನು ಈ ಪ್ರಕರಣದ ತನಿಖೆಯನ್ನು ರಸ್ತೆ ಅಭಿವೃದ್ಧಿ ಕಾರ್ಪೊರೇಷನ್ ಗೆ ವಹಿಸುತ್ತಾರೆ. ಇವರು ನಿನ್ನೆ ಸಚಿವಾಲಯದ ಕಾರ್ಯದರ್ಶಿಗಳಿಗೆ ಒಂದು ಪತ್ರ ಬರೆದಿದ್ದು, ಪ್ರಕರಣದ ತನಿಖೆ ಮಾಡಲು ಯಾವುದೇ ನಿಗಮಗಳು ಸರಿಯಾದ ದಾಖಲೆಗಳನ್ನು ಸಲ್ಲಿಸುತ್ತಿಲ್ಲ. ಆ ಮೂಲಕ ತನಿಖೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ನಿಗದಿತ ಅವಧಿಯಲ್ಲಿ ತನಿಖಾ ವರದಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಮುಖ ಪ್ರಶ್ನೆ

  1. ಹಿಂದುಳಿದ ವರ್ಗದ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 84 ಸಾವಿರ ವೆಚ್ಚ ತಗುಲಿದರೆ, ಸಮಾಜ ಕಲ್ಯಾಣ ಇಲಾಖೆ ಯೋಜನೆಯಲ್ಲಿ 1.92 ಲಕ್ಷ ವೆಚ್ಚ ತಗುಲುತ್ತಿರುವುದು ಏಕೆ?
  2. ತನಿಖೆ ನಡೆಯುತ್ತಿರುವಾಗ ಕಾಮಗಾರಿ ಸ್ಥಗಿತ ಮಾಡುತ್ತಿಲ್ಲವೇಕೆ? ಇಲ್ಲಿ ಅಕ್ರಮ ಕಂಡು ಬಂದರೆ ಏನು ಮಾಡುತ್ತೀರಾ?
  3. ಆದಾಯ ತೆರಿಗೆ ಪ್ರಮಾಣ ಪತ್ರದ ನೈಜ್ಯತೆ ವಿಚಾರವಾಗಿ ಆದಾಯ ಇಲಾಖೆಗೆ ಬರೆದ ಪತ್ರಕ್ಕೆ ಉತ್ತರ ಸಿಕ್ಕಿದೆಯೇ? ಸಿಕ್ಕಿದ್ದರೆ ಈ ಪ್ರಮಾಣ ಪತ್ರ ಅಸಲಿಯೋ ನಕಲಿಯೋ? ಈ ಮಾಹಿತಿ ಎಲ್ಲಿ?
  4. ಕಾಮಗಾರಿ ಪೂರ್ಣಗೊಳಿಸಿರುವ ಪ್ರಮಾಣ ಪತ್ರ ಹೇಗೆ ಸಿಕ್ಕಿದೆ? 100 ರೂ. ಮೊತ್ತದ ಅರ್ಹತೆ ಇರುವವರಿಗೆ 1000 ರೂ. ಮೊತ್ತದ ಕಾಮಗಾರಿ ನೀಡುತ್ತಿರುವುದೇಕೆ?
  5. ಈ ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಅಕ್ರಮದ ಆರೋಪ ಬಂದ ನೆತರವೂ ಯಾವುದೇ ಅಧಿಕಾರಿಗಳ ವಿಚಾರಣೆಯೂ ಆಗಿಲ್ಲ ಯಾಕೆ? ನಮ್ಮ ಬಳಿ ಇರುವ ಸರ್ಕಾರದ ಮಾಹಿತಿ, ಸರ್ಕಾರದ ಬಳಿಯೇ ಯಾಕಿಲ್ಲ?
  6. ಈ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಭರವಸೆ ಇಲ್ಲ. ಹೀಗಾಗಿ ಈ ಪ್ರಕರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು.
  7. ಕಳೆದ ಬಾರಿ ನಾನು ಆ ಆರೋಪ ಮಾಡಿದಾಗ ಮಾನ್ಯ ಸಮಾಜ ಕಲ್ಯಾಣ ಇಳಾಖೆ ಸಚಿವರು 0 ಕಮಿಷನ್ ಸರ್ಕಾರ ಎಂದಿದ್ದರು. ಆದರೆ ಅವರು ತನಿಖೆ ಮಾಡಿಸುತ್ತಿರುವ ರೀತಿ ನೋಡಿದರೆ ಅವರ ಮೇಲಿನ ನಂಬಿಕೆ ವಿಶ್ವಾಸ ಹೋಗಿದೆ. ಅವರ ನಡುವಳಿಗೆ ತಾವು ರಕ್ಷಣೆ ಪಡೆದು, ಬೇರೆಯವರನ್ನು ರಕ್ಷಣೆ ಮಾಡುವಂತೆ ಇದೆ.

ಇನ್ನು ರಾಜ್ಯ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ಬದಲಾವಣೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವಿಗ ನವ ಭಾರತದಲ್ಲಿದ್ದೇವೆ. ಈ ಭಾರತದಲ್ಲಿ ಗೋಡ್ಸೆ ದೇಶಭಕ್ತ, ಮಹಾತ್ಮಾ ಗಾಂಧಿ ದೇಶದ್ರೋಹಿ. ಭಗತ್ ಸಿಂಗ್ ದೇಶದ್ರೋಹಿ ಹೆಡೆಗವಾರ್ ಅವರು ದೇಶಭಕ್ತರು. ಟಿಪ್ಪು ದೇಶಭಕ್ತನಲ್ಲ.

ಇದನ್ನೂ ಓದಿ: ಬಿಜೆಪಿ ಪಕ್ಷದಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ ಏನೂ ಮಾಡಲು ಆಗುತ್ತಿಲ್ಲ: ಭೂಸನೂರ್

ಇದು ಈಗಿನ ನವ ಭಾರತ. ಟಿಪ್ಪು ಮೂರು ಬಾರಿ ಆಗ್ಲೋ ಮೈಸೂರು ಯುದ್ಧ ಮಾಡಿದ್ದಾರೆ. ಬ್ಯಾಟಲ್ ಆಫ್ ಬೆಂಗಳೂರು ಅವರಿಗೆ ತಿಳಿದಿಲ್ಲ. ಅವರಿಗೆ ಸರಿಯಾದ ಇತಿಹಾಸ ಗೊತ್ತಿಲ್ಲ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಬಾಗವಹಿಸಿಲ್ಲ, ಭಾರತದ ಇತಿಹಾಸದಲ್ಲೂ ಇಲ್ಲ. ಹೀಗಾಗಿ ಪಠ್ಯ ಪುಸ್ತಕಗಳಲ್ಲಿ ಕೇಸರಿಕರಣ ಮಾಡಿ ಇತಿಹಾಸ ಸೇರುವ ಪ್ರಯತ್ನ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ನವರು ನಮ್ಮ ರಾಷ್ಟ್ರ ಗೀತಿ, ರಾಷ್ಟ್ರಧ್ವಜದ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ. ಅವರು ನಮ್ಮ ಸಂವಿಧಾನ, ಬಾವುಟ ತಿರಸ್ಕರಿಸಿರುವ ಸಂಸ್ಥೆ. ಯುವಕರು ದಯಮಾಡಿ ಇತಿಹಾಸ ಓದಬೇಕು.

ಹೆಗಡೆವಾರ್ ಅವರ ಇತಿಹಾಸ ಓದಿ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಸಾಥ್ ಕೊಟ್ಟವರು ಯಾರು? ಸುಭಾಷ್ ಚಂದ್ರ ಬೋಸ್ ಅವರಿಗೆ ನೇತಾಜಿ ಎಂಬ ಬಿರುದು ಕೊಟ್ಟವರಾರು, ಗಾಂಧೀಜಿಗೆ ಮಹಾತ್ಮಾ, ರವೀಂದ್ರನಾಥ್ ಠಾಗೂರ್ ಅವರಿಗೆ ಗುರುದೇವ್ ಎಂದು ಬಿರುದು ಕೊಟ್ಟವರು ಯಾರು ಎಂದು ಗೊತ್ತು. ಆದರೆ ಸಾರ್ವಕರ್ ಅವರಿಗೆ ವೀರ್ ಎಂಬ ಬಿರುದು ಕೊಟ್ಟವರು ಯಾರು? ಭಕ್ತರನ್ನು, ಬಿಜೆಪಿಯವರನ್ನು ಕೇಳಿ ನೋಡಿ. ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದು ಸುಳ್ಳಾ? ಬಿಜೆಪಿಯವರು ಐಟಿ ಸೆಲ್, ವಾಟ್ಸಪ್ ಫೇಸ್ ಬುಕ್ ವಿಶ್ವವಿದ್ಯಾಲಯದಲ್ಲಿ ಏನು ಬರೆಯುತ್ತಾರೋ ಅದೇ ಸತ್ಯ ಎಂದು ಭಾವಿಸುತ್ತಾರೆ. ಸರ್ಕಾರದ ಪಠ್ಯಪುಸ್ತಕ ಬದಲಾವಣೆ ನಿರ್ಧಾರವನ್ನು ನಾನು ಖಂಡಿಸುತ್ತೇನೆ’ ಎಂದು ಕಿಡಿಕಾರಿದರು.

ಇದನ್ನೂ ಓದಿ: ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ಕಾರ್ಯಕಾರಿಣಿ ಸಭೆ

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here