ಕಲಬುರಗಿ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ಈ ಹಿಂದೆ ಇದ್ದ ಪಠ್ಯ ಪುಸ್ತಕಗಳನ್ನು ಮುಂದುವರಿಸುವಂತೆ ಆಗ್ರಹಿಸಿ ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ವಿವಿಯ ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಪಠ್ಯ ಪುಸ್ತಕಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಬಲ್ಲ ಸಾಧನಗಳಾಗಿರುವುದರಿಂದ ಉದಾತ್ತರು, ವಿಶಾಲ ಮನಸ್ಥಿತಿವುಳ್ಳವರು ಜಾತಿ, ಧರ್ಮ, ಮತ, ಪಂಥವನ್ನು ಮೀರಿದ ವಸ್ತುನಿಷ್ಠ ಆಲೋಚನೆಯುಳ್ಳ ತಜ್ಞರನ್ನು ನೇಮಿಸಬೇಕಗಿದ್ದ ಬಿಜೆಪಿ ಸರ್ಕಾರ ಮನುವಾದಿ ಸಿದ್ಧಾಂತದ ಹಿನ್ನೆಲೆಯಿರುವ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯನ್ನು ಆ ಸ್ಥಾನಕ್ಕೆ ಕೂಡಿಸಿರುವುದು ಮತ್ತು ಆ ಮೂಲಕ ಮತ್ತೆ ವಾರ್ಣಾಶ್ರಮ ಪದ್ಧತಿ ಹೇರುವ ಹುನ್ನಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭಾರತಿಯ ಯುವ ಸೈನ್ಯಕ್ಕೆ ಸೋನುಬಾಯಿ, ಗಣೇಶ ಮೇಳಕುಂದ ಆಯ್ಕೆ
ವರ್ಷಗಳು ಕಳೆದರೂ ಇನ್ನೂ ಕಾಲೇಜು ವಿದ್ಯಾರ್ಥಿಗಳಿಗೆ, ವಿವಿ ಸಂಶೋಧಕರಿಗೆ ಸ್ಕಾಲರ್‌ಶಿಪ್ ಮತ್ತು ಫೆಲೋಶಿಪ್ ನೀಡಿಲ್ಲ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ಸರ್ಕಾರ, ಅಮಾಯಕ ಮುಗ್ಧ ಮಕ್ಕಳು ಓದುವ ಪಠ್ಯಗಳಲ್ಲಿ ತಮ್ಮ ಮನುವಾದಿ ಸಿದ್ಧಾಂತವನ್ನು ತುಂಬಲು ತೋರುತ್ತಿರುವ ಸರ್ಕಾರದ ನಡೆ ನಿಜಕ್ಕೂ ನಾಚಿಕೆಗೇಡು ಎಂದು ಟೀಕಿಸಿದರು. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪುಸ್ತಕ ಮುಂದುವರಿಸಬೇಕು ಇಲ್ಲದಿದ್ದಲ್ಲಿ ನೂತನವಾಗಿ ಶಿಕ್ಷಣ ತಜ್ಞರನ್ನು ನೇಮಿಸಿ ಹೊಸ ಪಠ್ಯ ಪುಸ್ತಕ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.
ಸುನಿಲ ಮಾರುತಿ ಮಾನ್ಪಡೆ, ಮೈಲಾರಿ ದೊಡ್ಡಮನಿ, ಡಾ. ಅನಿಲ್ ಟೇಂಗಳಿ, ಬಾಬುರಾವ ಬೀಳಗಿ ಸೇರಿದಂತೆ ಹಲವಾರು ಸ್ನಾತಕ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಮಕೇ ವಾಸ್ತೆ ದುರಸ್ತಿ ಕಾರ್ಯ