-ಮಡಿವಾಳಪ್ಪ ಹೇರೂರ
ವಾಡಿ: ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಬಳಕೆ ಮಾಡುವ ಮೂಲಕ ವಾತಾವರಣ ಗಬ್ಬೆಬ್ಬಿಸಿದ ಸ್ಥಳವನ್ನು, ಅರೆಪ್ರಜ್ಞಾವಂತ ಹುಚ್ಚನೊಬ್ಬ ದಿನವಿಡೀ ಶುಚಿಗೊಳಿಸುವ ಮೂಲಕ ಬುದ್ದಿವಂತ ನಾಗರಿಕರು ನಾಚಿಕೊಳ್ಳುವಂತ ಕಾರ್ಯ ಮಾಡಿ ಗಮನ ಸೆಳೆದಿದ್ದಾನೆ.
ಕಳೆದ ಕೆಲ ದಿನಗಳಿಂದ ವಾಡಿ ಪಟ್ಟಣದ ಬೀದಿಗಳಲ್ಲಿ ಮತ್ತು ಬಡಾವಣೆಗಳ ಗಲ್ಲಿ ರಸ್ತೆಗಳಲ್ಲಿ ಕಾಣಸಿಗುತ್ತಿರುವ ಅಪರಿಚಿತ ಅರೆಪ್ರಜ್ಞಾವಂತ ವ್ಯಕ್ತಿಯೋರ್ವ ನೋಡಲು ಭಿಕ್ಷುಕನಂತಿದ್ದರೂ ಆತ ಮಾಡುವ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ರಸ್ತೆಯಲ್ಲಿ ಒಂದು ಕಸದ ತುಂಡು ಕಂಡರೂ ಆತ ಸಹಿಸುವುದಿಲ್ಲ. ಮಣ್ಣು, ಕಲ್ಲು, ಕಾಗದ, ಗಾಜು, ಪ್ಲಾಸ್ಟಿಕ್ ಹೀಗೆ ಯಾವೂದೇ ತ್ಯಾಜ್ಯ ರಸ್ತೆಯಲ್ಲಿ ಬಿದ್ದು ಬೀದಿ ಅಂದಗೆಡಿಸುವಂತಿದ್ದರೆ ಕ್ಷಣವೂ ತಡಮಾಡದೆ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಕ್ತಿತ್ವ ಆತನದ್ದು.
ಕೊಳೆಯಾದ ಜಾಗ ಶುಚಿಯಾಗುವ ವರೆಗೂ ಆತ ಅಲ್ಲಿಂದ ಕದಲುವುದಿಲ್ಲ. ಕೈಯಲ್ಲಿನ ಚೀಲದಲ್ಲಿ ಗುಟಗಾ ಪ್ಯಾಕೇಟ್ ಕಸ, ಕುರುಕಲು ತಿಂಡಿಗಳ ಪ್ಯಾಕೇಟ್, ಸಿಗರೇಟ್ ಪೊಟ್ಟಣ ಸೇರಿದಂತೆ ಕಣ್ಣಿಗೆ ಕಾಣುವ ಎಲ್ಲಾ ಕಸವನ್ನೂ ಕೈಚೀಲದಲ್ಲಿ ತುಂಬಿ ಒಂದೆಡೆ ಗುಡ್ಡೆಹಾಕಿ ಬೆಂಕಿ ಹಚ್ಚುತ್ತಾನೆ. ಈತನ ಕಾರ್ಯ ನೋಡಿ ನೆರವಿಗೆ ಬರಬೇಕಾದ ಜನರು, ಹುಚ್ಚನೆಂದು ಮೂದಲಿಸಿ ಮುಂದೆ ಹೆಜ್ಜೆ ಹಾಕುತ್ತಾರೆ. ಹುಚ್ಚ ಮಾಡಿದ್ದು ಗೌರವ ತರುವ ಕಾರ್ಯವಾದರೆ, ಜನರ ಪ್ರತಿಕ್ರಿಯೆ ಮಾತ್ರ ಅನಾಗರಿಕತನದ್ದು.
ಬುಧವಾರ ಪಟ್ಟಣದ ಪುರಸಭೆ ಕಚೇರಿ ಪಕ್ಕದಲ್ಲಿರುವ ಪಾಳು ಕಟ್ಟಡದ ತ್ಯಾಜ್ಯಯುಕ್ತ ಮತ್ತು ಸಾರ್ವಜನಿಕರು ಮೂತ್ರ ವಿಸರ್ಜಿಸುವ ಸ್ಥಳವನ್ನು ಕಂಡ ಈ ಅರೆಪ್ರಜ್ಞಾವಂತ ವ್ಯಕ್ತಿ, ಘನತ್ಯಾಜ್ಯ ಮತ್ತು ದುರ್ಗಂಧದಿಂದ ಕೂಡಿದ್ದ ಪರಿಸರವನ್ನು ಶುಚಿಗೊಳಿಸಿ ಪುರಸಭೆ ಸಿಬ್ಬಂದಿಗಳೇ ಬೆರಗುಗೊಳ್ಳುವಂತೆ ಮಾಡಿದ ಪ್ರಸಂಗ ನಡೆದಿದೆ. ಈತನ ಕಾರ್ಯ ನೋಡಿ ಕೆಲವರು ಹತ್ತಿರದಿಂದ ಮಾತನಾಡಿಸಿದ್ದಾರೆ. ರಸ್ತೆ ಸ್ವಚ್ಚಗೊಳಿಸುತ್ತಿರುವುದೇಕೆ? ಯಾರು ನೀನು? ಎಂದು ಕೇಳಿದ್ದಾರೆ. ನಾನು ತಾಂಡೂರ ಮೂಲದವನ್ನು.
ನನ್ನ ಹೆಸರು ಮುಗೆಪ್ಪ. ರಸ್ತೆ ಮೇಲೆ ಕಸ ಬಿದ್ದಿರುವುದನ್ನು ನೋಡಲು ನನ್ನಿಂದ ಆಗುವುದಿಲ್ಲ. ಜನರು ಇಲ್ಲಿ ರಸ್ತೆ ಬದಿಯಲ್ಲಿ ನಿಂತು ಮೂತ್ರ ಮಾಡುತ್ತಿದ್ದನ್ನು ಕಂಡೆ. ವಿಪರೀತ ದುರ್ನಾತ ಹರಡುತ್ತಿತ್ತು. ಹಾಗಾಗಿ ಜಾಗ ಸ್ವಚ್ಚ ಮಾಡಲು ಮುಂದಾದೆ. ಈಗಾಗಲೇ ನಾನು ಮುಂಬೈಯಲ್ಲೂ ಬೀದಿ ಗುಡಿಸಿದ್ದೇನೆ. ನಾನು ಎಲ್ಲಿಯೇ ಹೋದರೂ ಕಣ್ಣಿಗೆ ಕಾಣುವ ಗಲೀಜು ಸ್ಥಳವನ್ನು ಸ್ವಚ್ಚಮಾಡದೇ ಮುಂದೆ ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾನೆ.
ತುತ್ತು ಅನ್ನಕ್ಕೂ ಭಿಕ್ಷೆ ಬೇಡಬೇಕಾದ ಸ್ಥಿತಿ ಈತನದ್ದು. ಮಸಿ ಮೆತ್ತಿದ ಹರಕು ಬಟ್ಟೆ ತೊಟ್ಟ ಈ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡುವ ಕಾರ್ಯ ಮಾತ್ರ ಸ್ವಚ್ಚತೆಯ ಕುರಿತು ಬೊಗಳೆ ಭಾಷಣ ಬಿಗಿಯುವವರನ್ನು ಬಡಿದೆಚ್ಚರಿಸುತ್ತದೆ.