ಕಲಬುರಗಿ: ಪ್ರತಿಯೊಬ್ಬರು ಕಾಯಕ ಯಾವುದೇ ಇರಲಿ, ಅದನ್ನು ಭಕ್ತ್ತಿ, ಶೃದ್ಧೆಯಿಂದ ಮಾಡುವುದು, ಅದರ ಪ್ರತಿಫಲ ತನಗಷ್ಟೇ ಅಲ್ಲದೆ ಸಮಾಜಕ್ಕೆ ದಾಸೋಹ ರೂಪದಲ್ಲಿ ನೀಡುವ ಸಂಸ್ಕೃತಿಯಿಂದ ಜೀವನ ಅರ್ಥಪೂರ್ಣ, ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ. ಇಂತಹ ಜೀವನವನ್ನು ಶರಣಜೀವಿ ಲಿಂ.ಗಳಗಂಪ್ಪ ಪಾಟೀಲ ಅವರು ಸಾಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ, ಜೆ.ಆರ್. ನಗರ ಹನುಮಾನ ದೇವಸ್ಥಾನದ ಆವರಣದಲ್ಲಿ ಶರಣಜೀವಿ ಲಿಂ.ಡಾ. ಗಳಂಗಪ್ಪ ಪಾಟೀಲ ಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್‌ನ ಉತ್ತರ ವಲಯದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಲಾಗಿದ್ದ ’ಕಾಯಕ-ದಾಸೋಹ’ ಕುರಿತು ವಿಶೇಷ ಉಪನ್ಯಾಸ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐವರು ಮಹನೀಯರಿಗೆ ’ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡು-ನುಡಿ ಸೇವೆಗೆ ಸದಾ ಸಿದ್ದನಿದ್ದೇನೆ. ಇದಕ್ಕೆ ವಿಶೇಷವಾಗಿ ಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ. ನಮ್ಮ ಪರಿಷತ್ ವತಿಯಿಂದ ದತ್ತಿ ಉಪನ್ಯಾಸಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತದೆ. ಕಾಯಕ-ದಾಸೋಹವು ಲಿಂ.ಗಳಂಗಪ್ಪ ಪಾಟೀಲ ಅವರ ಉಸಿರಾಗಿತ್ತು. ಸಮಾಜಮುಖಿ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರ್ತಿಸಿ, ಪ್ರೋತ್ಸಾಹಿಸುವುದು ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕ ಶಿವರಂಜನ ಸತ್ಯಂಪೇಟೆ, ಕಾಯಕ-ದಾಸೋಹ ಬಸವಾದಿ ಶರಣರು ನೀಡಿದ ಅಮೋಗವಾದ ಕೊಡುಗೆಗಳು. ಸತ್ಯ ಶುದ್ಧವಾದ ಕಾಯಕ ಮಾಡಿ, ಸತ್ಕಾರ್ಯಗಳಿಗೆ ದಾಸೋಹಗೈಯುವ ಪರಿಕಲ್ಪನೆ ಅದರಲ್ಲಿ ಅಡಗಿದೆ ಎಂದು ಶರಣರ ವಚನಗಳ ಮೂಲಕ ವಿವರಿಸಿದರು.
ಮಹಾನಗರ ಪಾಲಿಕೆ ಸದಸ್ಯರುಗಳಾದ ಶಿವಾನಂದ ಪಿಸ್ತಿ, ಸಚಿನ್ ಕಡಗಂಚಿ, ಪ್ರಮುಖರಾದ ಉಮೇಶ ಪಾಟೀಲ, ಡಾ.ರಾಜಕುಮಾರ ಪಾಟೀಲ, ಬಸವರಾಜ ವಾಲಿ, ಸಿದ್ದರಾಮ ಸಂಗೋಳಗಿ, ಶಿವರಾಜ ಅಂಡಗಿ, ಡಾ.ಶರಣರಾಜ ಚಪ್ಪರಬಂದಿ, ಪ್ರಭುಲಿಂಗ ಮೂಲಗೆ, ನಾಗೇಶ ತಿಮಾಜಿ ಬೆಳಮಗಿ ವೇದಿಕೆ ಮೇಲಿದ್ದರು.
ನಾಗೇಂದ್ರಪ್ಪ ಮಾಡ್ಯಾಳ್ ಪ್ರಾರ್ಥಿಸಿದರು. ಬಸವರಾಜ ಹೆಳವರ ಯಾಳಗಿ ಸ್ವಾಗತಿಸಿದರು. ಶಿವಲಿಂಗಪ್ಪ ಟೆಂಗಳಿ ನಿರೂಪಿಸಿದರು. ಶಿವಯ್ಯ ಎಸ್.ಮಠಪತಿ ವಂದಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲ್ಯಾಣಕುಮಾರ ಶೀಲವಂತ, ದಾಕ್ಷಾಯಣಿ ಬಳಬಟ್ಟಿಮಠ, ಎಚ್.ಬಿ.ಪಾಟೀಲ, ಜಗದೀಶ ಮರಪಳ್ಳಿ, ಶಿವಯ್ಯ ಎಸ್.ಮಠಪತಿ ಅವರಿಗೆ ’ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿದ ಕಸಾಪ ಉತ್ತರ ವಲಯ ಸಂಚಾಲಕ ನವಾಬ ಖಾನ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.