ಶಹಾಬಾದ: ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಅವರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ, ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಮಾಜದ ಮುಖಂಡರ ವತಿಯಿಂದ ಮಂಗಳವಾರ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಮುಖಾಂತರ ಜಿಲ್ಲಾ ಎಸ್‌ಪಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗಿರೀಶ ಕಂಬಾನೂರ ಅವರ ರಾಜಕೀಯ ಏಳಿಗೆ ಸಹಿಸದೇ ಅವರ ಕುಟುಂಬದ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿವೆ. ಈ ಹಿಂದೆಯೇ ಗಿರೀಶ ಕಂಬಾನೂರ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.ಆದರೆ ಅದೃಷ್ಟವಶ ಬದುಕುಳಿದರು. ಅಲ್ಲದೇ ಅವರ ಸಹೋದರ ಸತೀಶ ಕಂಬಾನೂರ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.
ಮತ್ತೆ ಅವರಿಗೆ ಕೊಲೆ ಮಾಡುವ ಬೆದರಿಕೆಗಳು ಬಂದಿದ್ದವು.ಆಗ ಪೊಲೀಸ್ ಇಲಾಖೆಗೂ ತಿಳಿಸಲಾಗಿತ್ತು.ಆದರೂ ಪೊಲೀಸ್ ಅವರಿಗೆ ಯಾವುದೇ ರಕ್ಷಣೆ ನೀಡಲಿಲ್ಲ. ಅಲ್ಲದೇ ದುಷ್ಕರ್ಮಿಗಳ ಮೇಲೆ ನಿಗಾ ಇಡಲಿಲ್ಲ.ಕೊನೆಗೆ ಗಿರೀಶ ಕಂಬಾನೂರ ಅವರನ್ನು ಹಾಡುಹಗಲೇ ರೇಲ್ವೆ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ಬೀಕರ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯವಾದುದು. ಕೂಡಲೇ ಕೊಲೆಗಡುಕರನ್ನು ಬಂಧಿಸಬೇಕು.ಅಲ್ಲದೇ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಾ.ಎಮ್.ಎ.ರಶೀದ, ಕೃಷಪ್ಪ ಕರಣಿಕ, ಬಸವರಾಜ ಮಯೂರ, ಮಹಾದೇವ ನಾಲವಾರಕರ್, ತಿಪ್ಪಣ್ಣ ಧನ್ನೇಕರ, ಸಂತೋಷ ಬಂಡೇರ್, ಲಕ್ಷ್ಮಣ ತರನಳ್ಳಿ, ಮೀರ ಅಲಿ ನಾಗೂರೆ, ಮಲ್ಲಣ್ಣ ಕಾರೋಳ್ಳಿ, ಪ್ರವೀಣ ರಾಮಕೋಟೆ, ಹಣಮಂತ ಸಾಲಿ ಇನ್ನಿತರರು ಉಪಸ್ಥಿತರಿದ್ದರು.