ಕಾಳಗಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದ್ದು, ಮದ್ಯ ವ್ಯವಸನಿಗಳು ಅಮಲಿನಲ್ಲಿಯೇ ನಿತ್ಯ ಕಾಲಕಳೆಯುವಂತಾಗಿದೆ. ಮಕ್ಕಳು, ಮಹಿಳೆಯರು, ವೃದ್ಧ ತಂದೆ-ತಾಯಂದಿರು ಅಕ್ರಮ ಮದ್ಯಮಾರಾಟಗಾರರಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ದೂರಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಾಯಿ ಕೊಡೆಗಳಂತೆ ಎಲ್ಲಿ ಬೇಕೆಂದರಲ್ಲಿ ಅಕ್ರಮ ಮದ್ಯದ ಅಂಡಿಗಳು ತಲೆ ಎತ್ತಿವೆ. ಪಾನ್, ಬೀಡಾ ಅಂಗಡಿ, ಹೋಟೆಲ್, ಕ್ರೋಲ್ಡ್‌ಡ್ರಿಂಕ್ಸ್ ಅಂಗಡಿ ಸೇರಿದಂತೆ ಇತರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ಹಲವು ಬಾರಿ ಪ್ರತಿಭಟನೆ ಮನವಿ ಮಾಡಿದರೂ ಅಕ್ರಮ ಮದ್ಯ ಮಾರಾಟ ಸ್ಥಗಿತಗೊಂಡಿಲ್ಲ.
ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜಾಬೀನ್ ಆರೋಪಿಸಿದ್ದಾರೆ.
ಅಕ್ರಮ ಮದ್ಯ ಮಾರಾಟದ ದಂಧೆ ಹಳ್ಳಿಗಳಲ್ಲಿ ಮಾತ್ರವಲ್ಲದೆ ಪಟ್ಟಣ ಪ್ರದೇಶದ ಪ್ರತಿ ಡಾಬಾದಲ್ಲೂ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಎಂದಿದ್ದಾರೆ.
ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.