ಕಲಬುರಗಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳಾಗಿದ್ದ 11 ಜನರನ್ನು ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಿದ ಬಿಜೆಪಿ ಸರಕಾರದ ಜನದ್ರೋಹಿ ನಡೆಯನ್ನು ಖಂಡಿಸಿ ಮತ್ತು 11 ಜನ ಅಪರಾಧಿಗಳನ್ನು ಪುನಃ ಬಂಧಿಸಿ ಜೈಲಿಗಟ್ಟಬೇಕೆಂದು ಆಗ್ರಹಿಸಿ ನಗರದ ತಿಮ್ಮಾಪುರಿ ವೃತ್ತದಲ್ಲಿ ಅನೇಕ ಸಂಘಟನೆಗಳ ಮೂಲಕ ಪ್ರತಿಭಟನೆ ಜರುಗಿತು.
ಐದು ತಿಂಗಳ ಗರ್ಭಿಣಿಯ ಮೇಲೆ 22 ಬಾರಿ ಅತ್ಯಾಚಾರ ಮಾಡಿ, ಅವಳ ಮೂರು ವರ್ಷದ ಮಗುವನ್ನು ಕಲ್ಲಿಗೆ ಜಜ್ಜಿ ಕೊಲೆಗೈದ, ಅವಳ ಕುಟುಂಬಸ್ತರನ್ನು ಕೊಚ್ವಿ ಕೊಲೆಗೈದವರನ್ನು ಸುಪ್ರಿಂ ಕೋರ್ಟ್ ಜೀವಾವಧಿ ಶಿಕ್ಷೆಗೆ ಗುರಿ ಮಾಡಿತ್ತು. ರೇಪಿಸ್ಟ್, ಭ್ರಷ್ಟಾಚಾರಿ ಮತ್ತು ಕೊಲೆಗಡುಕರನ್ನು ಬಿಡುಗಡೆ ಮಾಡಬಾರದೆಂಬುದು ಕೇಂದ್ರ ಸರಕಾರದ ತೀರ್ಪು ಇದ್ದಾಗಲೂ ಗುಜರಾತ್ ನ ಬಿಜೆಪಿ ಸರಕಾರವು ಈ ಕ್ರೂರ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ಅತ್ಯಂತ ಖಂಡನೀಯವಾಗಿದೆ ಎಂದು ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ ನೀಲಾ ಹೇಳಿದರು.
ದುರುಳರಿಗೆ ಕೊಲೆಗಾರರಿಗೆ ಅತ್ಯಾಚಾರಿಗಳಿಗೆ ಅಮೃತ ಕೊಟ್ಟು ಸನ್ಮಾನಿಸಿ, ಮಹಿಳೆಯರಿಗೆ ವಿಷವನ್ನು ಕೊಟ್ಟ ಬಿಜೆಪಿ ಸರಕಾರವು ಜನದ್ರೋಹಿ ಸರಕಾರವಾಗಿದೆ ಈವರೆಗೆ ಪ್ರದಾನಿ ಈ ಕ್ರಮ ಖಂಡಿಸಿಲ್ಲ. ಅಂದರೆ ಸಮರ್ಥಿಸುತ್ತಿದ್ದಾರೆ ಅಂತಲೇ ಅರ್ಥವಾಗಿದೆ. ಜಗತ್ತಿನ ಮುಂದೆ ಭಾರತವನ್ನು ತಲೆ ತಗ್ಗಿಸುವಂತೆ ಮಾಡುತ್ತಿರುವ ಕೇಂದ್ರ ಸರಕಾರ ಮತ್ತು ಬಿಜೆಪಿಗೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಸಾವಿತ್ರಿಬಾಯಿ ಫುಲೆ ಸಂಘ ಮತ್ತು ಸ್ಲಂ ಜನಾಂದೋಲನದ ರೇಣುಕ ಸರಡಗಿ, , ಜಗದೇವಿ ನೂಲಕರ್, ಶಹನಾಜ್ ಅಖ್ತರ್, ರಾಫಿಯಾ ಸಿರಿನ್, ಸಂಗಮ ಸಂಸ್ಥೆಯ ಬೀರಲಿಂಗ, ಗುಲಾಬೋ, ಅಖಿಲ ಭಾರತ ಮಹಿಳಾ ಒಕ್ಕೂಟದ ಪದ್ಮಾ ಪಾಟಿಲ್, ಹೀನಾ ಶೇಕ್ ಮತ್ತು ಗೌರಮ್ಮ ಸೇರಿದಂತೆ ಮುಂತಾದವರು ಭಾಗವಹಿಸಿದರು.