ವಿಮೋಚನಾ ಹೋರಾಟಗಾರರ ಸ್ಮರಣೆ ಅಗತ್ಯ: ಮುನ್ನೂರು

0
12

ಕಲಬುರಗಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆಗಸ್ಟ್ 15, 1947 ರಂದು. ಮೊದಲು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ಮತ್ತು ಅವರ ಅಧೀನದಲ್ಲಿದ್ದ ಕೆಲವು ರಾಜ್ಯಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ತಡವಾಗಿ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅಭಿಪ್ರಾಯ ಪಟ್ಟರು.

ನಗರದ ಸರಕಾರಿ ಕನ್ಯಾ ಪ.ಪೂ. ಕಾಲೇಜಿನಲ್ಲಿ ಜಿಲ್ಲಾಡಳಿತ, ಪ.ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಮೋಚನಾ ಹೋರಾಟದ ಚಿಂತನ- ಮಂಥನ ಉಪನ್ಯಾಸ ಮಾಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಅವಿಭಜಿತ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತದಲ್ಲಿ ಬಹುತೇಕ ಚಿಕ್ಕ ಚಿಕ್ಕ ರಾಜ್ಯಗಳು, ಸಂಸ್ಥಾನಗಳಿದ್ದವು. ಬ್ರಿಟಿಷ ಸರ್ಕಾರ ಈ ಎಲ್ಲಾ ರಾಜ್ಯ, ಸಂಸ್ಥಾನಗಳಿಗೆ ಹೊಸದಾಗಿ ರಚಿಸಲ್ಪಡುವ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು ಅಥವಾ ಸ್ವತಂತ್ರವಾಗಿ ಇರಲು ಆಯ್ಕೆಗಳನ್ನು ಕೊಟ್ಟಿತ್ತು.

ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳು ಅವತ್ತಿನ ದಿನದಿಂದ ಭಾರತಕ್ಕೆ/ ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟವು. ಕೆಲವು ಸಂಸ್ಥಾನಗಳು ಮೊದಮೊದಲು ಭಾರತದಲ್ಲಿ ವಿಲೀನವಾಗಲು ಒಪ್ಪದಿದ್ದರು ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ರಾಜಕೀಯ ಮುತ್ಸದ್ದಿತನ ಮತ್ತು ಚಾಣಾಕ್ಷತನದಿಂದ ನಂತರ ಒಪ್ಪಿದರು. ಅವುಗಳಲ್ಲಿ ಕೊಚ್ಚಿ, ತಿರುವನಂತಪುರ, ಭೋಪಾಲ್, ಗುಜರಾತಿನಲ್ಲಿ ಬರುವ ಕೆಲವು ಚಿಕ್ಕ ಚಿಕ್ಕ ರಾಜ್ಯಗಳು.

ಆದರೆ ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಜುನಾಗಢ ಈ ಮೂರು ರಾಜ್ಯಗಳು ಭಾರತಕ್ಕೆ ಸೇರಲು ಒಪ್ಪಲಿಲ್ಲ.ಕರ್ನಾಟಕದ ಹೈದರಾಬಾದ್ ಕರ್ನಾಟಕ ಪ್ರದೇಶಗಳನ್ನೊಳಗೊಂಡ ರಾಜ್ಯವಾಗಿತ್ತು. ಹೈದರಾಬಾದ್ ರಾಜ್ಯ ಬಹುಸಂಖ್ಯಾತ ಹಿಂದೂಗಳನ್ನು ಹೊಂದಿದ್ದರು ಮುಸ್ಲಿಮ್ ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಮತ್ತು ಹೈದರಾಬಾದಿನ ನಿಜಾಮ ಮೊದಮೊದಲು ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿಕೊಂಡಿದ್ದರು ಕೂಡ ಮುಸ್ಲಿಮ್ ಲೀಗ್/ ಪಾಕಿಸ್ತಾನದ ಬೆಂಬಲ ನಂತರ ಸಿಗುತ್ತಿತ್ತು. ನಿಜಾಮರ ಕುತಂತ್ರದ ಬಗ್ಗೆ ಅರಿತಿದ್ದ ವಲ್ಲಭಭಾಯಿ ಪಟೇಲರು ಈ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಕಾರ್ಯತಂತ್ರ ರೂಪಿಸಿದರು.

ತುಂಬಾ ಜನ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ಅದರಲ್ಲಿ ಸರದಾರ ಶರಣಗೌಡ ಇನಾಮದಾರ್, ಸ್ವಾಮಿ ರಾಮನಂದ ತೀರ್ಥರು, ಚಂದ್ರಶೇಖರ ಪಾಟೀಲ್, ನೀಲಕಂಠರಾವ್ ಪಾಟೀಲ್ ಪ್ರಮುಖರು. ಹಲವಾರು ಸಾಮಾನ್ಯ ಜನರು ತಮ್ಮ ಪ್ರಾಣವನ್ನು ನೀಡಿದ್ದಾರೆ.

ರಜಾಕಾರರ ಕಿರುಕುಳ ತಾಳದೆ ಕೆಲವರು ಊರು ತ್ಯಜಿಸಿದರು. ಎಲ್ಲ ಮಾತುಕತೆಗಳು, ರಾಜತಾಂತ್ರಿಕ ಒತ್ತಡ, ಷರತ್ತುಗಳಿಗೆ ನಿಜಾಮ ಒಪ್ಪದಿದ್ದಾಗ ಆಗಿನ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತೀಯ ಸೇನೆಗೆ ಆದೇಶ ಕೊಟ್ಟು ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್ ಅನ್ನು ಭಾರತದಲ್ಲಿ 17ನೇ ಸಪ್ಟೆಂಬರ್ 1948 ರಂದು ಹೈದರಾಬಾದಿನ ನಿಜಾಮ ಶರಣಾದ ನಂತರ ಭಾರತದೊಂದಿಗೆ ವಿಲೀನ ಮಾಡಿಲಾಯಿತು ಎಂದು ಉಪನ್ಯಾಸದಲ್ಲಿ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ್, ಪ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ವೇದಮೂರ್ತಿ, ಒಕ್ಕೂಟದ ಕಾನೂನು ಸಲಹೆಗಾರರಾದ ಗುರುರಾಜ ತಿಳಗುಳ, ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಅತಿಥಿಯಾಗಿ ಸಚಿನ್ ಫರತಾಬಾದ್ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಯಶ್ವಂತ ಸೂರ್ಯವಂಶಿ ವಹಿಸಿದ್ದರು. ಅಧ್ಯಕ್ಷ ಮಂಜುನಾಥ ನಾಲವಾರಕರ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಜಗದೇವಿ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here