ಹಸಿಬರಗಾಲ ಪರಿಹಾರ ಘೋಷಣೆಗೆ ಆಗ್ರಹಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ

0
96

ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಹಸಿ ಬರಗಾಲ ಘೋಷಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಗರದ ಬಸವೇಶ್ವರ ವೃತ್ತದಿಂದ ನೆಹರು ವೃತ್ತದವರೆಗ  ಪ್ರತಿಭಟನಾ ಪ್ರದರ್ಶನ ಮಾಡಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಅತಿವೃಷ್ಟಿ ಮಳೆಯಿಂದ ಪ್ರಕೃತಿ ವಿಕೋಪ ಸಂಭವಿಸಿದ್ದು, ಸರ್ಕಾರ ಕೂಡಲೇ ಹಸಿ ಬರಗಾಲ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ರೈತರು ಸಿಕ್ಕಾಪಟ್ಟೆ ಲಾಗುವಡಿ ಮಾಡಿ ಮುಂಗಾರು ಬಿತ್ತನೆ ಮಾಡಿದ್ದಾರೆ. ಬೀಜ ಮತ್ತು ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ತೊಗರಿಯ ನಾಡಿನಲ್ಲಿ ವಾಣಿಜ್ಯ ಬೆಳೆಗಳಾದ ತೊಗರಿ ಬೆಳೆ, ಹೆಸರು, ಉದ್ದು, ಸೋಯಾ, ಎಳ್ಳು, ಸಜ್ಜೆ, ಹೈಬ್ರೀಡ್ ಜೋಳ, ಹತ್ತಿ ಬೆಳೆಗಳು ರೈತರ ರೊಕ್ಕದ ಮಾಲು ಸಂಪೂರ್ಣ ಹಾನಿಯಾಗಿದೆ. ಈ ವರ್ಷ ಧಾರಾಕಾರವಾಗಿ ಸುರಿದ ಅತಿವೃಷ್ಟಿ ಮಳೆಯಿಂದ ಬೆಳೆ ಹಾನಿಯಾಗಿದೆ. ರೊಕ್ಕದ ಮಾಲು ಇಲ್ಲದಂತಾಗಿದೆ.

Contact Your\'s Advertisement; 9902492681

ಮುಂದಿನ ಹಿಂಗಾರು ಬೆಳೆಗಳಿಗೆ ಭೂಮಿ ಹದ ಮಾಡಲು, ಕಸ ತೆಗೆಯಲು, ತೊಗರಿಗೆ ಎಣ್ಣೆ ಹೊಡೆಯಲು ಲಾಗುವಾಡಿ ಮಾಡಲು ಆಸರೆಯಾಗುತ್ತಿದ್ದ ರೈತರಿಗೆ ರೊಕ್ಕದ ಮಾಲು ಕೈಕೊಟ್ಟಂತಾಗಿದೆ. ಹೀಗಾಗಿ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ. ಸತತವಾಗಿ ಮಳೆ ಸುರಿದರೂ ಸಹ ಸರ್ಕಾರವು ಕಣ್ಣು ತೆರೆದು ರೈತರ ಕಡೆಗೆ ನೋಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಈ ಕುರಿತು ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಜಿಲ್ಲೆಯಲ್ಲಿ ಭತ್ತ 478 ಹೆಕ್ಟರ್, ಜೋಳ 405 ಹೆಕ್ಟೆರ್, ಮೆಕ್ಕೆಜೋಳ 1194, ಸಜ್ಜೆ 1352, ಸಿರಿಧಾನ್ಯ 104, ತೊಗರಿ 480983, ಉದ್ದು 27221, ಹೆಸರು 46922, ಅವರೆ 17, ಅಲಸಂದಿ 41, ಶೇಂಗಾ 293, ಸೋಯಾ 37326 ಹೆಕ್ಟೇರ್‍ಗಳಲ್ಲಿ ಬಿತ್ತನೆಯಾಗಿದೆ. 39 ದಿನಗಳ ಕಾಲ ಸತತವಾಗಿ ಧಾರಾಕಾರ ಮಳೆ ಸುರಿದು ಬೆಳೆ ನಷ್ಟವಾದರೂ ಇಲ್ಲಿಯವರೆಗೆ ಬೆಳೆ ಸಮೀಕ್ಷೆ ಮಾಡದೇ ರೈತರಿಗೆ ಅನ್ಯಾಯ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮತ್ತು ಹಿಂಗಾರು ಬೆಳೆ ಬಿತ್ತಲು ಸಾಲ ಸೂಲ ಮಾಡಿ ಜಮೀನು ಸ್ವಚ್ಛ ಮಾಡಿ ಹಿಂಗಾರು ಬೆಳೆ ಬಿತ್ತಲು ತಯಾರಿ ಮಾಡುವ ಚಿಂತಾಜನಕವಾದ ರೈತರ ನೆರವಿಗೆ ಧಾವಿಸದೇ ಮೀನಾಮೇಷ ಎಣಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲೆಯನ್ನು ಹಸಿ ಬರಗಾಲವೆಂದು ಘೋಷಿಸುವಂತೆ, ಬೆಳೆಗಳಿಗೆ ಪ್ರತಿ ಎಕರೆಗೆ 25000ರೂ.ಗಳ ಪರಿಹಾರ ಕೊಡುವಂತೆ, ರೈತರ ಸಾಲ ಮನ್ನಾ ಮಾಡುವಂತೆ, ರಸಗೊಬ್ಬರ ಮತ್ತು ಔಷಧಿ ಬೆಲೆ ಏರಿಕೆ ಕೈಬಿಡುವಂತೆ, ಗೊಬ್ಬರದ ಕೊರತೆ ಎದ್ದು ಕಾಣುತ್ತಿದ್ದು, ತಕ್ಷಣವೇ ಎಲ್ಲ ರೈತರಿಗೆ ಸಾಕಾಗುವಷ್ಟು ರಸಗೊಬ್ಬರ ಕೊಡುವಂತೆ, ಬೆಳೆ ನಷ್ಟವಾದ ಬೆಳೆಗಳಿಗೆ ಪೂರ್ಣ ಪ್ರಮಾಣದ ಬೆಳೆ ವಿಮೆ ಮಂಜೂರು ಮಾಡುವಂತೆ, ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಮತ್ತು ಬಸವನ ಹುಳುಗಳು, ಶಂಕದ ಹುಳುಗಳು ಮೊಳಕೆ ತಿಂದು ಹಾನಿಯಾದ ಬೆಳೆಗಳಿಗೂ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರ ಕೊಡುವಂತೆ, ಹಿಂಗಾರು ಬಿತ್ತನೆಗಾಗಿ ಬೀಜ, ರಸಗೊಬ್ಬರದ ಸಹಾಯಧನ ಹೆಚ್ಚಿಸುವಂತೆ ಅವರು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಪ್ಪ ಮುದ್ದಾ, ಸಾಯಿಬಣ್ಣ ಗುಡುಬಾ, ರಾಯಪ್ಪ ಹುರಮುಂಜಿ, ವೀರಯ್ಯಸ್ವಾಮಿ ತರನಳ್ಳಿ, ವಿಶ್ವರಾಜ ಫಿರೋಜಾಬಾದ, ಮಹಾದೇವ ತರನಳ್ಳಿ,ಮಲ್ಲಣ್ಣ ಕಾರೊಳ್ಳಿ,ನಾಗಪ್ಪ ರಾಯಚೂರಕರ್ ಮುಂತಾದವವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here