ಕಲಬುರಗಿ: ನಾಡಿನ ಹಿರಿಯ ಚಿಂತಕ, ವಿದ್ವಾಂಸ, ಪ್ರಗತಿಪರ ಹೋರಾಟಗಾರರಾಗಿದ್ದ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಅಸುನೀಗಿದ್ದು, ಇಂದು ಕಲಬುರಗಿಯ ಪ್ರಗತಿಪರ ಚಿಂತಕರು, ಸಮುದಾಯ ಕಾರ್ಯಕರ್ತರು, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರು ಸದಸ್ಯರೆಲ್ಲರೂ ಒಟ್ಟುಗೂಡಿ ಶೃದ್ಧಾಂಜಲಿ ಸಲ್ಲಿಸಿದರು.
ನಗರದ ಡಾ. ಪ್ರಭು ಖಾನಾಪುರೆಯವರ ನಿವಾಸದ ಸಭಾಂಗಣದಲ್ಲಿ ಸಭೆ ಸೇರಿದ ಡಾ.ಶರಣಪ್ಪ ಸೈದಾಪೂರ, ಡಾ.ಮೀನಾಕ್ಷಿ ಬಾಳಿ, ಡಾ.ಶ್ರೀಶೈಲ ಘೂಳಿ, ಕೆ.ನೀಲಾ, ಕೋದಂಡರಾಮಪ್ಪ, ಶಿವಶರಣಪ್ಪ ಮುಳೆಗಾಂವ, ನಾಗೇಂದ್ರಪ್ಪ ಅವರಾದ, ಶರಣಬಸಪ್ಪ ಪಾಟೀಲ್, ರೇವಣಸಿದ್ದಪ್ಪ ಕಲಬುರಗಿ, ಪ್ರೇಮಾನಂದ ಚುಂಚೋಳಿಕರ್, ರವೀಂದ್ರ ರುದ್ರವಾಡಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಗೇಂದ್ರಪ್ಪ ಅವರಾದ, ಶಿವಶರಣಪ್ಪ ಮುಳೆಗಾಂವ, ಕೆ.ನೀಲಾ ಅವರು ಮಾತನಾಡಿ ಪ್ರೊ.ಗಂಗಾಧರ ಮೂರ್ತಿಯವರ ಬದುಕು, ಸಾಧನೆಗಳನ್ನು ಮೆಲುಕು ಹಾಕಿದರು. ಗೌರಿಬಿದನೂರಿನ ವಿದುರಾಶ್ವಥದಲ್ಲಿ ಸ್ವಾತಂತ್ರ್ಯ ಸ್ಮಾರಕ ರೂಪಿಸುವಲ್ಲಿನ ಅವರ ಬದ್ಧತೆ, ನಾಡಿನ ಪ್ರಗತಿಪರ ಹೋರಾಟಗಳು, ವೈಚಾರಿಕ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಚಳುವಳಿಗಳು, ದಲಿತಪರ ಹೋರಾಟಗಳನ್ನು ಕಟ್ಟುವಲ್ಲಿ ಮತ್ತು ಮುನ್ನಡೆಸುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿ ಸ್ಮರಿಸಿದರು.