ಸುರಪರು:ನಗರಸಭೆ ವ್ಯಾಪ್ತಿಯ ಸರ್ವೇ ನಂಬರ್ 23 ರಲ್ಲಿಯ ಹಿಸ್ಸಾ 3/7ರಲ್ಲಿಯ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿದ್ದು ಕೂಡಲೇ ರದ್ದುಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ನಗರಸಭೆಗೆ ಒತ್ತಾಯಿಸಿದರು.
ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿ,ಸರ್ವೇ ನಂಬರ್ 23ರ 3/7ರ ಹಿಸ್ಸಾದಲ್ಲಿನ 27 ಗುಂಟೆ ಜಾಗದಲ್ಲಿ ದಲಿತ ಸಮುದಾಯದ ಕುಟುಂಬವೊಂದು ನೂರಾರು ವರ್ಷಗಳಿಂದ ಈ ಜಾಗದಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದು,ಈಗ ಖಾಸಗಿ ವ್ಯಕ್ತಿಯೊಬ್ಬರು ಈ ಜಾಗವನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿದ್ದು ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದರು.
ಅಲ್ಲದೆ ಜಾಗ ಖಾಲಿ ಮಾಡಿ ಇಲ್ಲವಾದಲ್ಲಿ ಜೆಸಿಬಿ ಯಂತ್ರದಿಂದ ಮನೆ ತೆರವುಗೊಳಿಸುವುದಾಗಿ ಬೆದರಿಕೆ ಹಾಕಲಾಗಿದೆ.ಆದ್ದರಿಂದ ಈ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಭೂ ಕಬಳಿಕೆದಾರರ ಹೆಸರಲ್ಲಿ ಸರ್ವೇ ನಂಬರ್ 23ರ ಜಾಗ ಮುಟೇಷನ್ ರದ್ದು ಮಾಡಬೇಕು ಇಲ್ಲವಾದಲ್ಲಿ ಎಲ್ಲಾ ಸಂಘಟನೆಗಳ ಬೆಂಬಲದೊಂದಿಗೆ ನಗರಸಭೆ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ನಗರಸಭೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ಕಚೇರಿಯ ಲೆಕ್ಕಾಧಿಕಾರಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಭೀಮರಾಯ ಹುಲಕಲ್,ಸಂಘಟನಾ ಸಂಚಾಲಕ ತಿಪ್ಪಣ್ಣ ಪಾಟೀಲ್,ರಘುನಂದನ್ ತೇಲ್ಕರ್,ವಿನೋದ ಜೇವರ್ಗಿ,ಮಧು,ಶಾಂತಪ್ಪ ದೊಡ್ಮನಿ,ಸದ್ದಾಂ ಭಾಗವಾನ,ಶಿವಪುತ್ರ ಅವಲೋರ್,ಯಮುನೇಶ,ಮಹೆಬೂಬ ಸೇರಿದಂತೆ ಅನೇಕರಿದ್ದರು.