ನಮ್ಮ ಸಹಕಾರ ಸಂಘವು ಆರ್ಥಿಕ ಭದ್ರತೆ ಹೊಂದಿದೆ: ಡಾ. ಸುರೇಶ ಸಜ್ಜನ್

0
15

ಸುರಪುರ : ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘವು ಸರ್ವ ಸದಸ್ಯರ ಸಹಕಾರದೊಂದಿಗೆ ಷೇರು ಬಂಡವಾಳ ಮತ್ತು ಠೇವಣಿಗಳೊಂದಿಗೆ ಆರ್ಥಿಕವಾಗಿ ಭದ್ರತೆ ಹೊಂದಿದೆ ಎಂದು ಸಂಘದ ಅಧ್ಯಕ್ಷ ಡಾ.ಸುರೇಶ್ ಸಜ್ಜನ್ ಮಾತನಾಡಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಬಸವೇಶ್ವರ ಪತ್ತಿನ ಸಹಕಾರ ಸಂಘದ 27ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ಸಂಘವು 3219 ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ ಹಾಗೂ ಠೇವಣಿಗಳನ್ನು ಹೆಚ್ಚಿಸಿಕೊಂಡು ಸರ್ವ ಸದಸ್ಯರ ಸಹಕಾರದೊಂದಿಗೆ 2021-22ನೇ ಸಾಲಿನಲ್ಲಿ ರೂ.83,82,539 ಲಾಭ ಗಳಿಸಿದ್ದು ಎಲ್ಲಾ ವ್ಯವಹಾರವು ಸುಭದ್ರವಾಗಿ ಮುನ್ನುಗ್ಗುತ್ತಿದೆ ಇದಕ್ಕೆ ನಮ್ಮ ಹೆಮ್ಮೆಯ ಸದಸ್ಯರು ಕಾರಣ ಎಂದರು.

Contact Your\'s Advertisement; 9902492681

ಸಂಘದಲ್ಲಿ ಮೇ ತಿಂಗಳಿನಿಂದ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹುಣಸಗಿ, ಕೆಂಭಾವಿ, ಕಕ್ಕೇರಾ, ಕೊಡೇಕಲ್‍ಗಳಲ್ಲಿ ಶಾಖೆಗಳನ್ನು ಹೊಂದಿದ್ದು ಅಲ್ಲಿಯೂ ವ್ಯವಹಾರಗಳು ಸುಗಮವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗುತ್ತಿವೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಶ್ರಮದಿಂದ ನಿರೀಕ್ಷಿತ ಲಾಭವನ್ನು ಕಂಡು ಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಶಹಾಪೂರ ತಾಲೂಕಿನ ಸಗರ ಗ್ರಾಮದಲ್ಲಿ ಹಾಗೂ ವಡಿಗೇರಾ ಪಟ್ಟಣದಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಂಗಂಪೇಟೆಯ ವೀರಶೈವ ಲಿಂಗಾಯತ ಸಮಿತಿಯ ಕಲ್ಯಾಣ ಮಂಟಪದ ಮುಖ್ಯ ದ್ವಾರದ ಮುಂದೆ ಶೀಘ್ರವೇ ಬಸವೇಶ್ವರರ ಪಂಚ ಲೋಹದ ಪುತ್ಥಳಿ ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಸರ್ವ ಸದಸ್ಯರಿಗೆ ಸಂಘದಿಂದ ಬರಬೇಕಾದ ರೂ.38,49,357 ಡಿವ್ಹಿಡೆಂಡ್ ಹಣವನ್ನು ದೇಣಿಗೆ ರೂಪದಲ್ಲಿ ಈ ಧಾರ್ಮಿಕ ಕೆಲಸಕ್ಕಾಗಿ ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ ಇದಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಮನೋಹರ ಜಾಲಹಳ್ಳಿ, ನಿರ್ದೇಶಕರಾದ ವೀರಪ್ಪ ಅವಂಟಿ, ಹೆಚ್.ಸಿ.ಪಾಟೀಲ್, ರವೀಂದ್ರ ಅಂಗಡಿ, ನಂದಯ್ಯಸ್ವಾಮಿ ಮಠಪತಿ, ಸೂಗೂರೇಶ ವಾರದ, ವಿಜಯಕುಮಾರ ಬಂಡೋಳಿ, ಜಯಲಲಿತಾ ಪಾಟೀಲ್, ಬಸವರಾಜ ಬೂದಿಹಾಳ, ಸಂಘದ ಉಪ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರು, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಗೌಡ ದೇಸಾಯಿ ಕಿರದಳ್ಳಿ, ಪ್ರಮುಖರಾದ ಬಸವಲಿಂಗ ಪಾಟೀಲ್, ಬಸವರಾಜ ನಿಷ್ಠಿ ದೇಶಮುಖ ಸೇರಿ ಇತರರು ಇದ್ದರು. ನಿರ್ದೇಶಕರಾದ ವಿಶ್ವರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿದರು. ವ್ಯವಸ್ಥಾಪಕಿ ಅನ್ನಪೂರ್ಣ ಜಕ್ಕರೆಡ್ಡಿ ಸ್ವಾಗತಿಸಿದರು. ನಿರ್ದೇಶಕ ಡಿ.ಸಿ.ಪಾಟೀಲ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here