ಸುರಪುರ: ತಾಲೂಕಿನ ಬೊಮ್ಮನಳ್ಳಿ ಗ್ರಾಮದ (ಟ್ಯಾಂಕ್ ಫಿಲ್ಲಿಂಗ್) ಕೆರೆ ತುಂಬಿಸುವ ಕಾಮಗಾರಿ ಟೆಂಡರ್ ಸರಕಾರದ ನಿಯಮ ಪಾಲಿಸದೆ ನಡೆಸಲಾಗಿದ್ದು,ಕೂಡಲೇ ಮರು ಟೆಂಡರ್ ಕರೆಯುವಂತೆ ಕರ್ನಾಟಕ ಎಸ್‍ಸಿ/ಎಸ್‍ಟಿ ಗುತ್ತೆದಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕೋಬ ದೊರೆ ನೇತೃತ್ವದಲ್ಲಿ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ವೆಂಕೋಬ ದೊರೆ ಮಾತನಾಡಿ,ಕಾಮಗಾರಿಗೆ ಸಂಬಂಧಿಸಿದಂತೆ ಈ ಹಿಂದೆ ಸರಕಾರದ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗಿತ್ತು ಈ ಬಗ್ಗೆ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದಾಗ ಟೆಂಡರ್ ಸ್ಥಗಿತಗೊಳಿಸಲಾಗಿತ್ತು ಟೆಂಡರ್ ಸ್ಥಗಿತಗೊಳಿಸಿ ಐದು ತಿಂಗಳಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪುನ: ಟೆಂಡರ್ ಕರೆಯುತ್ತಿಲ್ಲ ಸರಕಾರದ ಆದೇಶದಂತೆ ಪುನ: ಟೆಂಡರ್ ಕರೆಯುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಟೆಂಡರ್ ಕರೆಯುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ತೋರಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಕಾಮಗಾರಿಯ ಪುನ: ಟೆಂಡರ್ ಕರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ವಿಳಂಬವಾದಲ್ಲಿ ರಸ್ತೆತಡೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಮನವಿ ಪತ್ರವನ್ನು ಹಸನಾಪುರ ಕ್ಯಾಂಪ್‍ನ ಕೆಬಿಜೆಎನ್‍ಎಲ್ ಉಪ ವಿಭಾಗ ಸಂಖ್ಯೆ 10ರ ಸಹಾಯಕ ಇಂಜಿನಿಯರ್‍ರವರಿಗೆ ಸಲ್ಲಿಸಲಾಯಿತು. ಕೇಶವನಾಯಕ, ಹಣಮಂತ್ರಾಯ,ದಾವಲಸಾಬ ಗೋಡಿಹಾಳ ಇತರರು ಭಾಗವಹಿಸಿದ್ದರು.