ಕಲಬುರಗಿ: ಈಗಾಗಲೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಶಿಕ್ಷಕರ ನೇಮಕಾತಿ ಪಟ್ಟಿಯಲ್ಲಿರುವ ಹಾಲಿ ಶಿಕ್ಷಕರ ಮರು ನೇಮಕವನ್ನು ರದ್ದುಪಡಿಸಬೇಕು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಲ್ಯಾಣ ರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ನಿರುದ್ಯೋಗ ತಾಂಡವವಾಡುತ್ತಿದ್ದು , ಆ ಕಾರಣಕ್ಕಾಗಿ ನಮ್ಮ ಭಾಗದ ನಾಯಕರು ಹೋರಾಡಿ 371 (ರಿ) ಜಾರಿಗೆ ತಂದರೂ ನಿರುದ್ಯೋಗ ನಿಂತಿಲ್ಲ. ಆದ್ದರಿಂದ ಈಗಾಗಲೇ ಕರ್ನಾಟಕ ಸರಕಾರ ಪ್ರಕಟಿಸಿದ 2022 ನೇ ಸಾಲಿನ ಪದವೀಧರ ಶಿಕ್ಷಕರ ನೇಮಕಾತಿ ಫಲಿತಾಂಶದಲ್ಲಿ ಕಲ್ಯಾಣ ರ್ನಾಟಕದ ಎಲ್ಲ ಜಿಲ್ಲೆಗಳು ಒಳಗೊಂಡು ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕರ ನೇಮಕಾತಿ ಫಲಿತಾಂಶದಲ್ಲಿ ಈಗಾಗಲೇ ಹಾಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವವರು ಮತ್ತೆ ಮರು ಪರೀಕ್ಷೆ ಬರೆದು ನೇಮಕಾತಿ ಪಟ್ಟಿಯಲ್ಲಿದ್ದಾರೆ.
ಹಾಗಾಗಿ ಅವರು ಒಂದು ವೇಳೆ ಮತ್ತೆ ಶಿಕ್ಷಕರಾಗಿ ನೇಮಕವಾಗಿ ಬೇರೆ ಜಿಲ್ಲೆಗಳಿಗೆ ಹೋದರೆ, ಅವರ ಆ ಹಿಂದಿನ ಶಿಕ್ಷಕರ ಹುದ್ದೆ ಆ ಜಿಲ್ಲೆಯಲ್ಲಿ ಖಾಲಿ ಉಳಿದು, ಮತ್ತೆ ಶಿಕ್ಷಕರ ಕೊರತೆ ಉಂಟಾಗುವ ಮೂಲಕ, ಆ ಹುದ್ದೆ ಯಾರಿಗೂ ಸಿಗುವುದಿಲ್ಲ. ಈ ಕಾರಣಕ್ಕಾಗಿ ಈಗಾಗಲೇ ಶಿಕ್ಷಕರಾಗಿ ಸೇವೆಸಲ್ಲಿಸುವವರನ್ನು ಅದೇ ಜಿಲ್ಲೆಯಲ್ಲಿ ಅವರನ್ನು ಮುಂದುವರಿಸುವಂತೆ ಆದೇಶ ಮಾಡಬೇಕು, ನೇಮಕಾತಿ ಪಟ್ಟಿಯಲ್ಲಿರುವ ಹಾಲಿ ಶಿಕ್ಷಕರ ಕುಂದುಕೊರತೆಗಳನ್ನು ಗಮನಿಸಿ ಕಾನೂನು ಬದ್ಧವಾಗಿ ವರ್ಗಾವಣೆ ಮಾಡುವುದರ ಮೂಲಕ ನಮ್ಮ ಕಲ್ಯಾಣ ಕರ್ನಾಟಕ ಒಳಗೊಂಡು ರಾಜ್ಯದ ನಿರುದ್ಯೋಗ ನಿವಾರಣೆಗೆ ಮುಂದಾಗಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ, ರಾಜ್ಯ ಉಪಾಧ್ಯಕ್ಷ ಉದಯಕುಮಾರ ಖಣಗೆ, ಜಿಲ್ಲಾಧ್ಯಕ್ಷ ಬಾಬು ಮದನಕರ, ಉಪಾಧ್ಯಕ್ಷ ಅನಿಲ ಕಪನೂರ, ಸಂಘಟಕ ಜೈಭೀಮ ಮಾಳಗೆ, ಪ್ರವೀಣ ಖೇಮನ, ಮಹೇಶ ಮಾನೆ, ರಾಣೇಸ ಸಾವಳಗಿ, ಪಿಂಟು ಬೋಧನ ಇತರರಿದ್ದರು.