ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಯಾರು ಇಲ್ಲದ ಸಂದರ್ಭದಲ್ಲಿ, ಪಕ್ಷ ನೆಲ ಕಚ್ಚಿರುವ ವೇಳೆ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಕೂರಿಸಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.
ಪಕ್ಷ ಸದೃಢವಾಗಿದ್ದಾಗಲೇ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಒಂದು ವರ್ಗದ ಮತಗಳು ಪರಿವರ್ತನೆ ಆಗುತ್ತವೆ ಅಂತ ಲೆಕ್ಕಾಚಾರದಲ್ಲಿದ್ಧಾರೆ. ಮುಂದೆ ಅವರಿಗೆ ಏನು ಪ್ರಾಮುಖ್ಯತೆ ಸಿಗುತ್ತದೆ ಅನ್ನೋದು ಮುಖ್ಯ ಅಲ್ಲವೇ? ಅವರು ಅಧ್ಯಕ್ಷರಾಗುವುದರಿಂದ ಏನು ಪ್ರಭಾವ ಬೀರುತ್ತದೆ ಎಂಬುದನ್ನು ಈಗಲೇ ಚರ್ಚೆ ಮಾಡೋದು ಬೇಡ. ಏನೆಂಬುದು ಇನ್ನ ಆರು ತಿಂಗಳು ಇದ್ದಾಗ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ: ಭಾರತ್ ಜೋಡೋ ಯಾಕೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸುಮ್ಮನೆ ಹೋಗ್ತಿದ್ದಾರೆ ಎಂದು ಜನ ಹೇಳ್ತಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆ ನೋಡಿದರೆ ಭಾರತ್ ಜೋಡೋಗಿಂತ ಕಾಂಗ್ರೆಸ್ ಜೋಡೋ ಮಾಡುವ ರೀತಿ ಇದೆ. ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗಿ ಅಂತ ಪದೇ ಪದೇ ಹೇಳ್ತಿದ್ದಾರೆ.ಈ ಪಾದಯಾತ್ರೆ ಮೇಲೆ ಚುನಾವಣೆ ನಡೆಯಲ್ಲ ಎಂದು ವ್ಯಂಗ್ಯವಾಡಿದರು.