ಕಲಬುರಗಿ: ಬದುಕಿಗೆ ಬೆಲೆ ಕೊಟ್ಟ ಬಸವಾದಿ ಶರಣರು ಬದುಕನ್ನು ಸ್ವೀಕರಿಸುವ ಕ್ರಮವನ್ನು ಕಲಿಸುವ ಮೂಲಕ ಮಾನವ ಬದುಕಿಗೆ ಘನತೆ ತಂದು ಕೊಟ್ಟರು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇವುಗಳ ಆಶ್ರಯದಲ್ಲಿ ನಗರದ ಸಾರ್ವಜನಿಕ ಉದ್ಯನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವಭೂಮಿ ಯಾತ್ರೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಮೆಟ್ಟಿದ ಧರೆ ಪಾವನ ಎನ್ನುವಂತೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ 17ನೇ ಶತಮಾನದಲ್ಲಿ ಶರಣಬಸವೇಶ್ವರರು ಸಹ ಶರಣರು ಹಾಕಿಕೊಟ್ಟ ಮಾರ್ಗದದಲ್ಲಿ ಮುನ್ನಡೆಯುವ ಮೂಲಕ ದಾಸೋಹಮೂರ್ತಿಯಾಗಿ ಕೀರ್ತಿ ಸಂಪಾದಿಸಿದ್ದಾರೆ ಎಂದು ತಿಳಿಸಿದರು.
ವಚನ ಸಾಹಿತ್ಯ ಮತ್ತು ವೈಚಾರಿಕತೆ ವಿಷಯ ಕುರಿತು ಶರಣ ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅನುಭಾವ ನೀಡಿ, ಕಾಯಕ-ದಾಸೋಹ ಸಿದ್ಧಾಂತದ ತಳಹದಿಯ ಮೇಲೆ ನಿಂತಿರುವ ವಚನ ಸಾಹಿತ್ಯ ವೈಚಾರಿಕ ಮತ್ತು ವೈಜ್ಞಾನಿಕ ವಿಚಾರಗಳಿಂದ ಕೂಡಿರುವುದರಿಂದ ಇಂದಿಗೂ ಪ್ರಸ್ತುತ ಎನಿಸುತ್ತವೆ ಎಂದರು.
ಸಮಜವನ್ನು ಮುಖ್ಯವಾಗಿಟ್ಟುಕೊಂಡು ರಚಿತವಾದ ವಚನಗಳು ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ನಿವಾರಿಸುವಲ್ಲಿ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತವೆ. ವಚನ ಸಾಹಿತ್ಯದ ಸವಾಲುಗಳುನ್ನು ಎದುರಿಸಲು ವಿಜ್ಞಾನಕ್ಕೆ ಈವರೆಗೆ ಆಗಿಲ್ಲ ಎನ್ನುವುದು ವಚನ ಸಾಹಿತ್ಯದ ಹೆಚ್ಚುಗಾರಿಕೆಯಾಗಿದೆ. ವೈಚಾರಿಕತೆಯೇ ವಚನ ಸಾಹಿತ್ಯದ ಮೂಲದ್ರವ್ಯ ಎಂದು ಹೇಳಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಮುಖ್ಯ ಅತಿಥಿಯಾಗಿದ್ದರು. ಶರಣ ವಿಚಾರ ವಾಹಿನಿ ಸಂಸ್ಥೆಯ ಅಧ್ಯಕ್ಷ ಆಯ್.ಆರ್. ಮಠಪತಿ ಪ್ರಾಸ್ತವಿಕ ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ ವೇದಿಕೆಯಲ್ಲಿದ್ದರು. ಸಿದ್ಧರಾಮ ಯಳವಂತಗಿ ನಿರೂಪಿಸಿದರು. ಶರಣಬಸವ ಕಲ್ಲಾ ಸ್ವಾಗತಿಸಿದರು. ಸತೀಶ ಸಜ್ಜನ ವಂದಿಸಿದರು.
ಹಣಮಂತರಾಯ ಕುಸನೂರ, ಧನರಾಜ ತಾಂಬೋಳೆ, ಬಸವರಾಜ ಮೊರಬದ, ಅಯ್ಯನಗೌಡ ಪಾಟೀಲ, ಅಯ್ಯಣ್ಣ ನಂದಿ, ಸಂಗಣ್ಣ ಗುಳಗಿ, ವಿನೋದ ಜನೇವೆರಿ, ಬಿ.ಎಚ್. ನಿರಗುಡಿ, ಡಾ. ಶರಣಬಸವ ವಡ್ಡನಕೇರಿ, ಶಿವಶರಣಪ್ಪ ದೇಗಾಂವ, ಅಂಬಾರಾಯ ಬಿರಾದಾರ ಸೇರಿದಂತೆ 1,00ಕ್ಕೂ ಹೆಚ್ಚು ಜನ ಸಮಾರಂಭದಲ್ಲಿ ಭಾಗವಹಿಸಿದ್ದರು.
33 ವರ್ಷಗಳ ಹಿಂದೆ ಹುಟ್ಟುಹಾಕಿರುವ ಶರಣ ವಿಚಾರ ವಾಹಿನಿ ಸಂಸ್ಥೆ ಮೂಲಕ ಹಲವು ಸಮಾಜಮುಖಿ ಹಾಗೂ ಬಸವಮುಖಿ ಕೆಲಸಗಳನ್ನು ಮಾಡಲಾಗಿದೆ. ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಬಸವಭೂಮಿ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ಬಸವಣ್ಣನವರಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳ ದರ್ಶನ ಇದರ ಮುಖ್ಯ ಉದ್ದೇಶ. ಬಸವನ ಬಾಗೇವಾಡಿಯಿಂದ ಯಾತ್ರೆಗೆ ಚಾಲನೆ ದೊರೆತಿದೆ. ಒಟ್ಟು 1,000 ಜನ ಇಲ್ಲಿಗೆ ಬಂದಿದ್ದೇವೆ. ಹರಳಯ್ಯ-ಕಲ್ಯಾಣಮ್ಮನವರು ತಮ್ಮ ತೊಡೆಯ ಚರ್ಮದಿಂದ ತಯಾರಿಸಿದ ಸೇಡಂ ತಾಲ್ಲೂಕಿನ ಬಿಜನಳ್ಳಿಯಲ್ಲಿರುವ ಪಾದುಕೆಗಳ ದರ್ಶನ ಮಾಡಿಕೊಂಡು ಬಸವಕಲ್ಯಾಣಕ್ಕೆ ಯಾತ್ರೆ ತಲುಪಲಿದೆ. -ಆಯ್.ಆರ್. ಮಠಪತಿ, ಅಧ್ಯಕ್ಷರು, ಶರಣ ವಿಚಾರ ವಾಹಿನಿ, ಹಾರೋಗೇರಿ.