ಕಲಬುರಗಿ: ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತಂತೆ ನಗರದ ಕೋಟನೂರು ಬಳಿ ಇರುವ ಜೇವರ್ಗಿ ರಸ್ತೆಯ ಶ್ರೀ ಗುರುಪಾದೇಶ್ವರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ವಿಜ್ಞಾನ ಪರಿಷತ್ ಮತ್ತು ಶ್ರೀ ಗುರುಪಾದೇಶ್ವರ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳು ಪಾಲ್ಗೊಂಡಿದ್ದರು. ಸ್ಪರ್ಧೆ ಸುಮಾರು ಎರಡು ತಾಸಿಗೂ ಮಿಕ್ಕಿ ನಡೆಯಿತು. ಮಕ್ಕಳು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು.
ನಂತರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿಯವರು ಮಾತನಾಡಿ, ಇಂದಿನ ಮಕ್ಕಳಿಗೆ ಪಟಾಕಿ ಸಿಡಿತದಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆ ಮಾಡದಿದ್ದರೆ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಎಂದರು.
ಹಸಿರು ಇದ್ದರೆ ಉಸಿರು ಎಂಬಂತೆ ಪರಿಸರ ಕಾಳಜಿ ಮುಖ್ಯವಾಗಿದ್ದು, ಇದಕ್ಕಾಗಿ ನಾವೆಲ್ಲರು ಮಣ್ಣಿನ ದೀಪಾವಳಿಗೆ ಹೆಚ್ಚಿನ ಒತ್ತು ಕೊಡಬೇಕು. ಪಟಾಕಿ ಸಿಡಿಸುವುದರಿಂದ ವಾಯು, ಜಲ, ಮಣ್ಣು, ಪರಿಸರ ಮಾಲೀನ್ಯ ಉಂಟಾಗುತ್ತದೆ ಎಂಬ ಅರಿವು ಇಟ್ಟುಕೊಂಡು ಹಬ್ಬ ಆಚರಿಸೋಣ ಎಂದು ಕಿವಿಮಾತು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ರಾಜ್ಯಾಧ್ಯಕ್ಷ ಗಿರೀಶ ಕಡ್ಲೇವಾಡ ಮಾತನಾಡಿ, ದೀಪಾವಳಿ ಹಬ್ಬಕ್ಕೆ ಭಾರತೀಯ ಸಂಸ್ಕøತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಎಲ್ಲರ ಬಾಳಲ್ಲೂ ಬೆಳಕು ತರುವ ಹಬ್ಬವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ, ಹಸಿರು ದೀಪಾವಳಿ ಆಚರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಇಡೀ ರಾಜ್ಯದಲ್ಲಿ ಮಾಲಿನ್ಯಯುಕ್ತ ನಗರಗಳಲ್ಲಿ ಕಲಬುರಗಿ ಮುಂಚೂಣಿ ಸ್ಥಾನದಲ್ಲಿದ್ದು, ಎಲ್ಲ ಮಾಲೀನ್ಯಗಳನ್ನು ನಿಯಂತ್ರಣಕ್ಕೆ ತಂದು ಪರಿಸರ ಸಂರಕ್ಷಣೆ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುಪಾದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಮಾತನಾಡಿ, ಕಡುಬಡತನ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಸದುದ್ದೇಶದಿಂದ ಈ ಶಿಕ್ಷನ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಯಾವುದೇ ಲಾಭ, ನಷ್ಟದ ದೃಷ್ಟಿ ಇಟ್ಟುಕೊಂಡು ಕಾಲೇಜು ಮುನ್ನಡೆಸುತ್ತಿಲ್ಲ. ಈಗಾಗಲೇ ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ, ನುರಿತ ಅಧ್ಯಾಪಕ ವರ್ಗ, ಉತ್ತಮ ಶೈಕ್ಷಣಿಕ ವಾತಾವರಣವಿದೆ. ಮುಂದಿನ ದಿನಗಳಲ್ಲಿ ಕಲಾ, ವಾಣಿಜ್ಯ ಕೋರ್ಸ್‍ಗಳನ್ನು ಆರಂಭಿಸಲಾಗುವುದು ಎಂದರು.
ವಿನುತಾ ಪ್ರಾರ್ಥಿಸಿದರು. ಚನ್ನಬಸಯ್ಯ ಗುರುವಿನ ನಿರೂಪಿಸಿದರು. ಉಪ ಪರಿಸರ ಅಧಿಕಾರಿ ಡಾ. ಆದಮ್ ಎಂ.ಪಟೇಲ್ ಸ್ವಾಗತಿಸಿದರು. ಗುರುಪಾದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗುರುಪ್ರಸಾದ ಎಂ. ಅಂಬಲಗಿ ವಂದಿಸಿದರು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ನಿರ್ದೇಶಕಿ ಮೋಹಿನಿ ಬೂದೂರ್, ಶಿಕ್ಷಕರಾದ ರಾಜೇಶ ನೀಲಹಳ್ಳಿ, ಸಿದ್ದಣ್ಣ ಎಸ್, ದೀಪಾ ಕುಲಕರ್ಣಿ, ಶರಣಮ್ಮ ಎಸ್.ಎ, ರಾಜೇಂದ್ರ ಕಲಶೆಟ್ಟಿ, ಶಹೀರಾ ಇಜಾಜ್, ಮಂಜುಳಾ ಎಸ್, ಕಲ್ಪನಾ ಹಿರೇಮಠ ಮತ್ತಿತರರಿದ್ದರು. ಮಹೇಶ ದೇವಣಿ, ರೂಪಾ ಸಣಮನಿ, ಸಿದ್ದು ಅವರು ನಿರ್ಣಾಯಕರಾಗಿ ಆಗಮಿಸಿದ್ದರು.