ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದಿಂದ ಕನ್ನಡ ರಾಜ್ಯೋತ್ಸವ

0
90

ಸೊಲ್ಲಾಪುರ : ಗಡಿಭಾಗದ ಕನ್ನಡಿಗರು ವರ್ಷ ವರ್ಷಗಳಿಂದ ಕನ್ನಡ ಭಾಷೆ ಉಳಿಸಿ-ಬೆಳೆಸುತ್ತಿದ್ದಾರೆ. ಅಲ್ಲದೆ ಕನ್ನಡ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದಾರೆ. ಈ ಭಾಗದ ಪ್ರತಿಯೊಂದು ಮನೆ-ಮನಗಳಲ್ಲಿ ಕನ್ನಡವನ್ನು ತುಂಬಿಕೊಂಡಿದ್ದಾರೆ. ಇವರೆಲ್ಲರೂ ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕು. ಹೀಗಾಗಿ ಕರ್ನಾಟಕ ಸರಕಾರವು ಗಡಿನಾಡು ಕನ್ನಡಿಗರಿಗೆ ವಿಶೇಷ ಮೀಸಲಾತಿಯನ್ನು ನೀಡಿ, ಉದ್ಯೋಗ ಒದಗಿಸಬೇಕು ಎಂದು ಬಾಲಗಾಂವ ಗುರುದೇವಾಶ್ರಮದ ಪೂಜ್ಯ ಅಮೃತಾನಂದ ಮಹಾಸ್ವಾಮಿಗಳು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಇವುಗಳ ಸಹಯೋಗದಲ್ಲಿ ಮಹಾರಾಷ್ಟ್ರ ಜತ್ತ ತಾಲ್ಲೂಕಿನ ಬಾಲಗಾಂವ ಗುರುದೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕನ್ನಡ ಭಾಷೆ ನಮ್ಮೆಲ್ಲರ ತಾಯಿಯ ಹೃದಯ ಭಾಷೆಯಾಗಿದ್ದು, ಅದು ನಮ್ಮೆಲ್ಲರ ಉಸಿರಾಗಿದೆ. ಅದನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕನ್ನಡಿಗರ ಹೊಣೆಗಾರಿಕೆಯಾಗಿದೆ. ಬೇರೆ ಭಾಷೆ ಕಲಿಯಲು ಯಾವ ಅಭ್ಯಂತರವಿಲ್ಲ, ಆದರೆ ನಮ್ಮ ತಾಯಿ ಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು. ನಾವು ಹೊರನಾಡಿನಲ್ಲಿದ್ದರು, ನಮ್ಮ ಹೃದಯ ಸದಾ ಕನ್ನಡವನ್ನೆ ಪೂಜಿಸುತ್ತದೆ. ಗಡಿಭಾಗದ ಕನ್ನಡಿಗರ ಏಳಿಗೆಗಾಗಿ ಎರಡು ಸರ್ಕಾರಗಳು ಮುಂದೆ ಬರಬೇಕು. ಮಹಾರಾಷ್ಟ್ರದ ನೆಲದಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಆದರ್ಶ ಕನ್ನಡ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಪೂಜ್ಯ ಅಮೃತಾನಂದ ಶ್ರೀಗಳು ಹೇಳಿದರು.

ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಕನ್ನಡ ಭಾಷಾ ಬಾಂಧವ್ಯ ಬೆಸೆಯುವ ಭಾಷೆಯಾಗಿದ್ದು, ಕನ್ನಡ ನುಡಿ ನಮ್ಮೇಲ್ಲರ ಹೃದಯದ ಭಾಷೆಯಾಗಿದೆ. ಆದ್ದರಿಂದ ಎಂದಿಗೂ ನಾವು ನಮ್ಮ ಭಾಷೆಯನ್ನು ಮರೆಯಬಾರದು. ಈ ಭಾಗದ ಕನ್ನಡಿಗರು ಕನ್ನಡ ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಲ್ಲಿಯ ಕನ್ನಡಿಗರು ಅನೇಕ ರೀತಿಯ ಸಮಸ್ಯೆಗಳ ಮಧ್ಯೆಯೂ ಕನ್ನಡತನವನ್ನು ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಕರ್ನಾಟಕ ಸರಕಾರ ಗಡಿಭಾಗದ ಕನ್ನಡಿಗರತ್ತ ಒಲವು ಹರಿಸಲಿ ಎಂದು ಹೇಳಿದರು.

ಕನ್ನಡ ಹೋರಾಟಗಾರ ಡಾ|| ಆರ್.ಕೆ.ಪಾಟೀಲ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಸರ್ಕಾರ ಸುಮಾರು ೬೭ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರದ ಕಣ್ಣಿಗೆ ಗಡಿಭಾಗದ ಕನ್ನಡಿಗರು ಕಾಣಲಿಲ್ಲವೇ..? ಇಂತಹ ಕರ್ನಾಟಕ ಸರ್ಕಾರದ ಮಲತಾಯಿ ಧೋರಣೆಯಿಂದ ನಿಜಕ್ಕೂ ಮಹಾರಾಷ್ಟ್ರದ ಕನ್ನಡಿಗರು ತುಂಬಾ ಅನ್ಯಾಯಕ್ಕೊಳಗಾಗಿದ್ದಾರೆ. ಕರ್ನಾಟಕ ಸರಕಾರದ ಪರ್ಯಾಯವಾಗಿ ಒಬ್ಬರಿಗೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ತುಂಬಾ ಸಂತೋಷ ತಂದಿದೆ. ಕನ್ನಡ ಪರ ಯಾವದೇ ಕಾರ್ಯಕ್ರಮಗಳಿಗೆ ತಾವು ಸಹಕರಿಸುವುದಾಗಿ ಹೇಳಿದರು.

ಪೂಜ್ಯ ಅಮೃತಾನಂದ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಹಿರಿಯ ಸಾಹಿತಿ ಗುರುಪಾದ ಕುಂಬಾರ ಹಾಗೂ ಡಾ. ಆರ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯೊಂದಿಗೆ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಡಗೀತೆಯೊಂದಿಗೆ ಕನ್ನಡ ಧ್ವಜಕ್ಕೆ ಗೌರವ ಅರ್ಪಿಸಲಾಯಿತು.

ಗಾಯಕ ಮಹೇಶ ಮೇತ್ರಿ ಹಾಗೂ ಗುರುರಾಜ್ ಮಠಪತಿ ಇವರಿಂದ ನಾಡಗೀತೆ ಮತ್ತು ಬಾಲಗಾಂವ ಶಾಲೆಯ ಮಕ್ಕಳಿಂದ ಕನ್ನಡ ಗೀತೆಗಳ ಹಾಗೂ ನೃತ್ಯ ಕಲಾ ಪ್ರದರ್ಶನ ಜರುಗಿತು. ತದನಂತರ ಮಹಾನಾಡಿನಿಂದ ಪ್ರಪ್ರಥಮ ಬಾರಿಗೆ ಝಿ-ಕನ್ನಡ ವಾಹಿನಿಯ ಸ.ರಿ.ಗ.ಮ.ಪ ಲಿಟಲ್ ಚಾಂಪ್ಸ್ ಸೀಜನ್-೧೯ಕ್ಕೆ ಆಯ್ಕೆಯಾದ ಅಕ್ಕಲಕೋಟ ತಾಲ್ಲೂಕಿನ ತೋಳನೂರ ಗ್ರಾಮದ ಕು. ರೇವಣಸಿದ್ಧ ಫುಲಾರಿಯವರಿಗೆ ಕನ್ನಡ ರಾಜ್ಯೋತ್ಸವ ನಿಮಿತ್ತ ಗೌರವಿಸಲಾಯಿತು.

ಚಿತ್ರಕಾರ ರವೀಂದ್ರ ಸತಾರಿಯವರು ಪೇನ್ಸಿಲಿಂದ ಬಿಡಿಸಿದ ಪೂಜ್ಯ ಸಿದ್ದೇಶ್ವರ ಅಪ್ಪಾಜಿ ಮತ್ತು ಪುಟರಾಜ ಗವಾಯಿಗಳ ಚಿತ್ರಗಳನ್ನು ಅನಾವರಣಗೊಳಿಸಲಾಯಿತು. ಹೊಸದಾಗಿ ವರ್ಗಾವಣೆಯಾಗಿ ಬಂದ ಕನ್ನಡ ಶಿಕ್ಷಕರ ಸ್ವಾಗತಿಸಿ ಸನ್ಮಾನಿಸಲಾಯಿತು.

ರಾಜಶೇಖರ್ ಉಮರಾಣಿಕರ, ಸಂಚಾಲಕ ಗಾಂಧಿ ಚೌಗುಲೆ, ಖರೋಷಿ ಗುರುಗಳು, ಬಸವರಾಜ ಧನಶೆಟ್ಟಿ, ಕವೇಕರ ಗುರುಗಳು, ಎಸ್.ಕೆ.ಬಿರಾಜದಾರ, ಬಸವರಾಜ ಗೋರೆ, ಎಮ್ ಎಸ್ ಬಿರಾದಾರ, ರಾಜಕುಮಾರ್ ಗೋಬ್ಬುರ, ಶರಣಪ್ಪ ಫುಲಾರಿ, ಶರಣು ಕೋಳಿ, ಹೀರೆಮಠ ಸರ್, ಧರೆಪ್ಪಾ ಕಟ್ಟಿಮನಿ, ಸಾಹಿತಿ ಮಲ್ಲಿಕಾರ್ಜುನ ಪಾಟೀಲ, ಹೊನಮೋರೆ ಸರ್, ಬಸವರಾಜ ಗುರವ, ವಾಸುದೇವ ದೇಸಾಯಿ, ಉಮೇಶ ಕೋಳಿ, ಸಂಗಣ್ಣ ಫತಾಟೆ, ಮಹಾಂತೇಶ ಪುಟಾಣಿ, ಗುರುಬಸು ಬಿರಾದಾರ, ಸಂತೋಷ ಪಾಟೀಲ ಸೇರಿದಂತೆ ಅಕ್ಕಲಕೋಟ ಹಾಗೂ ಜತ್ತ ತಾಲೂಕಿನ ವಿವಿಧ ಭಾಗಗಳಿಂದ ಅನೇಕ ಶಿಕ್ಷಕರು ಹಾಗೂ ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು. ಪ್ರಶಾಂತ ವಾಗೋಲಿ ನಿರೂಪಿಸಿದರೆ, ಗುರುಬಸು ವಾಗೋಲಿ ವಂದಿಸಿದರು.

ಭಾಷಾವಾದ ಬಂದಾಗ ಕೇವಲ ಬೆಳಗಾವಿ ಸಮಸ್ಯೆ ಮಾತ್ರ ಎರಡು ರಾಜ್ಯಗಳಿಗೆ ಕಾಣಿಸುತ್ತದೆ, ಆದರೆ ಸೊಲ್ಲಾಪುರ ಹಾಗು ಜತ್ತ ಕನ್ನಡಿಗರ ಕುರಿತು ಕಿಂಚಿತ್ತು ಗಮನ ಕೊಡುವದಿಲ್ಲ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಇವುಗಳ ಸಹಯೋಗದಲ್ಲಿ ಇಂದು ನನಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ತುಂಬಾ ಸಂತಸ ತಂದಿದೆ. ಈ ಪ್ರಶಸ್ತಿ ಸಮಸ್ತ ಮಹಾ ಕನ್ನಡಿಗರದ್ದಾಗಿದೆ. -ಗುರುಪಾದ ಕುಂಬಾರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜತ್ತ

ಎಲ್ಲರೂ ನಮ್ಮವರೆ ಎಂಬ ಭಾಷಾ ಸಾಮರಸ್ಯವನ್ನು ಮಹಾರಾಷ್ಟ್ರದ ಕನ್ನಡಿಗರಿಂದ ಕಲಿಯಬೇಕು. ಕನ್ನಡಮ್ಮನ ಮಡಿಲಿನಿಂದ ದೂರವಿದ್ದರೂ ಸದಾ ಕನ್ನಡಮ್ಮನನ್ನು ಆರಾಧಿಸುತ್ತಾ ಬಂದವರು. ಇಲ್ಲಿನ ಕನ್ನಡಿಗರು ಎಂದಿಗೂ ಮರಾಠಿ ಭಾಷೆಯನ್ನು ಹಿಯಾಳಿಸುವುದಿಲ್ಲ. ಹೊರನಾಡಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲು ಕರ್ನಾಟಕ ಸರ್ಕಾರ ಪ್ರತಿವರ್ಷ ಅನುದಾನ ನೀಡಬೇಕು. ಇಲ್ಲಿಯ ಕನ್ನಡಿಗರನ್ನು ಒಳನಾಡಿನ ಕನ್ನಡಿಗರಂತೆ ಪರಿಗಣಿಸಬೇಕು. ಅಲ್ಲದೆ ಕಲೆ, ಸಾಹಿತ್ಯ ಪ್ರೋತ್ಸಾಹದ ಜೊತೆಗೆ ಉದ್ಯೋಗ ಭದ್ರತೆ ಕೊಡಬೇಕು. ಮುಂದಿನ ದಿನಗಳಲ್ಲಿ ವಿಶೇಷ ಮೀಸಲಾತಿಗಾಗಿ ಕರ್ನಾಟಕ ವಿದಾನಸೌಧದವರೆಗೆ ಶ್ರೀಗಳ ನೇತೃತ್ದಲ್ಲಿ ಪಾದಯಾತ್ರೆ ಹಮ್ಮಿಕೋಳ್ಳಲಾಗುವುದು. – ಸೋಮಶೇಖರ್ ಜಮಶೆಟ್ಟಿ, ಅಧ್ಯಕ್ಷರು, ಕಸಾಪ ಮಹಾರಾಷ್ಟ್ರ ಘಟಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here