ನ.14ರಂದು ಅಖಿಲ ಭಾರತ 69ನೇ ಸಹಕಾರ ಸಪ್ತಾಹ ಉದ್ಘಾಟನೆ

0
27

ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಇದೇ ನವೆಂಬರ್ 14ರಂದು ಬೆಳಗ್ಗೆ 11.15ಕ್ಕೆ ಅಖಿಲ ಭಾರತ 69ನೇ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸೇಡಂ ಶಾಸಕ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

Contact Your\'s Advertisement; 9902492681

ರಾಜ್ಯದ  ಸಹಕಾರಿ ಸಂಘಗಳ ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕು ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು, ರಾಜ್ಯ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನಿತರ ಪ್ರಮುಖರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಳ್ಳಾರಿ ಮತ್ತು ಕಲಬುರಗಿ ಜಿಲ್ಲಾ ಹಾಲು ಒಕ್ಕೂಟ ಮಹಾಮಂಡಳಕ್ಕೂ ಆಹ್ವಾನ ನೀಡಲಾಗಿದೆ‌. ಜೊತೆಗೆ ಆರು ಜಿಲ್ಲೆಗಳ ಸಹಕಾರಿ ಯೂನಿಯನ್ ಗಳು ಈ ಬೃಹತ್ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದರು.

ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲುಸ್ತುವಾರಿ ತಂಡ ರಚಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿ ವೇದಿಕೆ, ಊಟ, ಆತಿಥ್ಯ, ಪೆಂಡಾಲ್ ಹಾಗೂ ನಗರಾಲಂಕಾರ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಯಶಸ್ವಿನಿ ಕಾರ್ಡುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ.  ಸಹಕಾರ ಕ್ಷೇತ್ರದಲ್ಲಿ ದುಡಿದಿರುವ ಮುತ್ಸದ್ಧಿಗಳಿಗೆ ಇದೇವೇಳೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಬೃಹತ್ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಜೊತೆಗೆ ಎಲ್ಲ ಇಲಾಖೆಗಳ ಮಾಹಿತಿ ಕೇಂದ್ರ ತೆರೆಯಲಾಗುವುದು. ಸಾರ್ವಜನಿಕರು ತಮ್ಮ ದೂರುಗಳನ್ನು ಈ ಮಾಹಿತಿ ಕೇಂದ್ರದಲ್ಲಿ ನೀಡಬಹುದು ಎಂದರು.

25 ಸಾವಿರ ಬಿಪಿಎಲ್- ಎಪಿಎಲ್ ಕಾರ್ಡ್ ಬಳಕೆದಾರ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ 100 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಕಾರ್ಮಿಕ ಇಲಾಖೆಯಿಂದ ನೊಂದಾಯಿತರಿಗೆ 10 ಸಾವಿರ ಕಾರ್ಡ್ ವಿತರಿಸಲಾಗುತ್ತಿದೆ ಎಂದು ನುಡಿದರು.

ನಗರಾಲಂಕಾರ:ಅಖಿಲ ಭಾರತ 69ನೇ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸೇಡಂ ಪಟ್ಟಣವನ್ನು ಅಲಂಕರಿಸಲಾಗುತ್ತಿದ್ದು, ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಅಲಂಕಾರದ ಹೊಣೆ ವಹಿಸಲಾಗಿದೆ ಎಂದು ತೇಲ್ಕೂರ್ ತಿಳಿಸಿದರು.

500 ಬಸ್ ವ್ಯವಸ್ಥೆ: ಸಮಾರಂಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದ 500 ಬಸ್ ಹಾಗೂ 2000 ಫೋರ್ ವ್ಹೀಲರ್ ವಾಹನಗಳನ್ನು ಬಿಡಲಾಗುತ್ತಿದೆ. ಮೇಲಾಗಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರಿಗಾಗಿ  10 ಸಾವಿರ ವಿಐಪಿ ಕಾರ್ಡ್ ಗಳನ್ನು ವಿತರಿಸಲಾಗುತ್ತಿದ್ದು, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್, ಡಿಸಿಸಿ ಸದಸ್ಯ ಗೌತಮ್ ಪಾಟೀಲ್, ಡಿಸಿಸಿ ನಾಮನಿರ್ದೇಶಿತ ಸದಸ್ಯ ಕಲ್ಯಾಣರಾವ್ ಪಾಟೀಲ್ ಮಳಖೇಡ, ಶರಣಬಸಪ್ಪ ಅಷ್ಟಗಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶರಣ ಬಸಪ್ಪ ಬೆಣ್ಣೂರ್, ಚಂದ್ರಶೇಖರ ತಳ್ಳಳ್ಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ರೂ.200 ಕೋಟಿ ಸಾಲ ವಿತರಣೆ: ಅಖಿಲ ಭಾರತ 69ನೇ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ 5000 ಮಹಿಳಾ ಸ್ವಸಹಾಯ ಸಂಘಗಳು ಹಾಗೂ 10 ಸಾವಿರ ರೈತರಿಗೆ ರೂ.200 ಕೋಟಿ ಬಡ್ಡಿ ರಹಿತ ಸಾಲವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿತರಣೆ ಮಾಡಲಿದ್ದಾರೆ.- ರಾಜಕುಮಾರ್ ಪಾಟೀಲ್ ತೇಲ್ಕೂರ್ , ಅಧ್ಯಕ್ಷರು ಡಿಸಿಸಿ ಬ್ಯಾಂಕ್, ಕಲಬುರಗಿ-ಯಾದಗಿರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here