ಕನ್ನಡ ಭಾಷೆ ಉಳಿದರೆ ಕನ್ನಡಿಗರ ಬದುಕು ಉಳಿಯಲು ಸಾಧ್ಯ

0
17

ಕಲಬುರಗಿ: ಕನ್ನಡ ನಾಡು, ನುಡಿ, ಜಲ ಸಂರಕ್ಷಿಸುವ ಕೆಲಸ ಪ್ರತಿಯೊಬ್ಬ ಕನ್ನಡಿಗರದ್ದಾಗಬೇಕು. ಕನ್ನಡ ಉಳಿದರೆ ಕನ್ನಡಿಗ ಉಳಿಯುತ್ತಾನೆ ಎಂದು ಶಾಸಕ ಎಂ.ವೈ. ಪಾಟೀಲ ತಿಳಿಸಿದರು.

ತಾಲ್ಲೂಕಿನ ಹೊನ್ನಕಿರಣಗಿಯಲ್ಲಿ ಶನಿವಾರ ಆಯೋಜಿಸಿದ್ದ ಕಲಬುರಗಿ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಗಡಿ ಭಾಗದಲ್ಲಿ ಕನ್ನಡ ಉಳಿಯಬೇಕಾದರೆ ಅಲ್ಲಿರುವ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ ನೀಡಬೇಕು. ಅನ್ಯ  ಭಾಷೆ ಕಲಿಯಬೇಕು. ಆದರೆ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು. ಕನ್ನಡ ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಸಂಪಾದಿಸಿರುವ ಹೊನ್ನ ನೇಸರ ಸ್ಮರಣ ಸಂಚಿಕೆಯನ್ನು ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಲೋಕಾರ್ಪಣೆ  ಮಾಡಿ ಮಾತನಾಡಿದ ಅವರು ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಏಳು ಜಿಲ್ಲೆಗಳ ಕಸಾಪ ಅಧ್ಯಕ್ಷರು ಈ ಭಾಗದ ಸಮಸ್ಯೆ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತಂದು ಈ ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ತಿಳಿಸಿದರು.

ಹೊನ್ನ ಕಿರಣಗಿ ರಾಚೋಟೇಶ್ವರ ಸಂಸ್ಥಾನದ ಪೀಠಾಧಿಪತಿ ಚಂದ್ರಗುಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಪ. ಮಾನು ಸಗರ, ಜಿಪಂ ಮಾಜಿ ಸದಸ್ಯ ದಿಲೀಪ್ ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಸಾಯಬಣ್ಣ ನೀಲಪ್ಪಗೋಳ, ಬಿ.ಆರ್. ಸಿ. ಅಪರ್ಣಾ, ಜಿಲ್ಲಾಸ್ಪತ್ರೆಯ ಶಾಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ , ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಯಶವಂತ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ಶರಣಬಸಪ್ಪ ನರೂಣಿ ಮತ್ತಿತರರು ವೇದಿಕೆಯಲ್ಲಿದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ಭಾಷಣ ಮಾಡಿದರು. ತಾಲ್ಲೂಕು ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಇಬ್ರಾಹಿಂಪುರ, ಸಿದ್ಧರಾಮ ಹಂಚಿನಾಳ ನಿರೂಪಿಸಿದರು. ಅಂಬುಜಾ ಎಂ.ಡಿ. ಸ್ವಾಗತಿಸಿದರು.

ಇದಕ್ಕೂ ಮುನ್ನ ಶಾಲಾ ಮಕ್ಕಳ ಲೇಜಿಮು, ಭಜನಾ ಮಂಡಳಿ, ಡೊಳ್ಳು ಕುಣಿತ, ಹಲಗಿ ವಾದನ, ಭಾಜಾ ಭಜಂತ್ರಿ ತಂಡಗಳೊಂದಿಗೆ ರಾಚೋಟೇಶ್ವರ ಮಠದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಕರಿಬಸವೇಶ್ವರ ಗದ್ದುಗೆವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮಕ್ಕಳು

ಪುನೀತ ರಾಜಕುಮಾರ ಭಾವಚಿತ್ರ ಹಿಡಿದು ಗಮನಸೆಳೆದರು. ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರ ವೇಷ ತೊಟ್ಟ ಮಕ್ಕಳ ಹಾಡು, ನೃತ್ಯ ಸಮ್ಮೇಳನಕ್ಕೆ ಕಳೆ ತಂದುಕೊಟ್ಟವು.

ಹೊನ್ನಕಿರಣಗಿ ಗ್ರಾ.ಪಂ. ಅಧ್ಯಕ್ಷ ಬಸವರಾಜ ಚಿಂಚೋಳಿ ಮೆರವಣಿಗೆಗೆ ಚಾಲನೆ ನೀಡಿದರು. ಪೊಲೀಸ್ ಇಲಾಖೆಯ ಸಹಾಯಕ ಆಯುಕ್ತೆ ಗೀತಾ ವೀರಣ್ಣ ಕೌಲಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಕಲಬುರಗಿ ತಾಲ್ಲೂಕು ಅದ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಶ್ರೀಕಾಂತ ಪಾಟೀಲ ತಿಳಗೂಳ, ಚನ್ನಬಸಪ್ಪ ಸಜ್ಜನ್, ರಘುನಾಥ ಮಸರಭೋ, ಸುರೇಶ ತಿಪಶೆಟ್ಟಿ ಇತರರು ಭಾಗವಹಿಸಿದ್ದರು.

ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಗೋಷ್ಠಿ ನಡೆದವು. ಹಿರಿಯ ಸಾಹಿತಿ ಶಿವಕವಿ ಜೋಗೂರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು.

ಶರಣ, ದಾಸ, ಸೂಫಿ, ತತ್ವಪದಕಾರರ ಸೌಹಾರ್ದತೆಯ ನೆಲೆಯಾದ ಕಲಬುರಗಿ ನೆಲ ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕ ವಾಗಿ ಶ್ರೀಮಂತವಾದ ನೆಲ. ಈ ನೆಲದಲ್ಲಿ   ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಆಗಬೇಕು ಎಂದು ಡಾ. ನಾಗೇಂದ್ರ ಮಸೂತಿ ಹೇಳಿದರು.

ತಾಲ್ಲೂಕಿನ ಹೊನ್ನಕಿರಣಗಿಯಲ್ಲಿ ಶನಿವಾರ ಜರುಗಿದ ಕಲಬುರಗಿ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ಕೇವಲ ಓದು ಮಾತ್ರವಲ್ಲ. ಜೀವನಶೈಲಿ ಆಗಬೇಕು. ಈ ಭಾಗದ ಉದ್ದಿಮೆಗಳಾದ ಬೇಳೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ದಾಸ್ತಾನು ಮಳಿಗೆ, ಸಣ್ಣಪುಟ್ಟ ಉದ್ದಿಮೆಗಳಿಗೆ ಜೀವ ತುಂಬುವ, ಯುವಕರಿಗೆ ಉದ್ಯೋಗ ಸೃಷ್ಟಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದರು.

ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ಸಿಗಬೇಕು, ಕಲಬುರಗಿಯಲ್ಲಿರುವ ಕೆರೆ ಕಟ್ಟೆಗಳ ಸಂರಕ್ಷಣೆ ಮಾಡಬೇಕು,  ಆಡಳಿತ ನಡೆಸುವವರು ಜನ ಬದುಕಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದು ವಿವರಿಸಿದರು.

ಸಾಹಿತ್ಯ ಸಮ್ಮೇಳನಗಳು ಕೇವಲ ಜಾತ್ರೆಗಳಾಗದೆ, ಈ ಭಾಗದ ಕಲೆ, ಸಾಹಿತ್ಯ, ಸಂಶೋಧನೆ, ವಿಮರ್ಶೆಗಳು ತಮ್ಮ ನೆಲೆ ಕಂಡುಕೊಳ್ಳುವಂತಾಗಲಿ. ಜಾಗತಿಕ ಸಂದರ್ಭದಲ್ಲಿ ಕನ್ನಡ ಭಾಷೆ ತಾಂತ್ರಿಕವಾಗಿ ಇನ್ನಷ್ಟು ಬೆಳವಣಿಗೆ ಕಂಡು ಜಗತ್ತಿನಾದ್ಯಂತ ಪಸರಿಸಲಿ ಎಂದು ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೆಳನಗಳು ನೊಂದವರಿಗೆ ನೋವಿಗೆ ಸ್ಪಂದಿಸುವ ಕಾರ್ಯ ಮಾಡುವುದರ ಜತೆಗೆ, ಕನ್ನಡವನ್ನು ಕಟ್ಟುವ ಮತ್ತು ಉಳಿಸಿಕೊಂಡು ಬೆಳೆಸುವ ಕಾರ್ಯ ಸದಾ ಮಾಡುತ್ತಿದೆ.

ಕರ್ನಾಟಕದಲ್ಲಿ ಮರೆಯಾಗುತ್ತಿರುವ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಬಹು ದೊಡ್ಡ ಅಭಿಯಾನ ಪರಿಷತ್ತು ಶುರು ಮಾಡಿದೆ. ಆಗ ಮಾತ್ರ ಕರ್ನಾಟಕ ಸಮೃದ್ಧವಾಗಿ ಕಟ್ಟಲಿಕ್ಕೆ ಸಾಧ್ಯವಾಗುತ್ತದೆ. -ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಿಲ್ಲಾ ಕಸಾಪ ಅಧ್ಯಕ್ಷ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here