ಬೀದರ: ಜಿಲ್ಲೆಯ ಜೀವನಾಡಿಯಾದ ಕಾರಂಜಾ ಜಲಾಶಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೈತರ ಜಮೀನಿಗೆ ನೀರು ನೀಡಲು ಸಾಧ್ಯವಾಗಿಲ್ಲ. ಆದರೆ ಈ ಜಲಾಶಯದಿಂದ ಬೀದರ ಜಿಲ್ಲೆಯ ಬಹುತೇಕ ಜನರಿಗೆ ಕುಡಿಯಲು ನೀರು ಪೂರೈಕೆಯಾಗುತ್ತಿರುವುದು ಸಂತಸದ ವಿಷಯವಾಗಿದೆ. ಗೋದಾವರಿ ಜಲಾನಯನ ಪ್ರದೇಶದ ನಮ್ಮ ಪಾಲಿನ 22 ಟಿಎಮ್‍ಸಿ ನೀರಿನಲ್ಲಿ ಪ್ರಸ್ತುತ 12 ಟಿಎಮ್‍ಸಿ ನೀರು ಮಾತ್ರ ಬಳಸಿಕೊಳ್ಳುತ್ತಿದ್ದು, ಇನ್ನು 10 ಟಿಎಮ್‍ಸಿ ನೀರಿನ ಬಳಕೆಗೆ ಯೋಜನೆಗಳು ರೂಪಿಸÀಬೇಕಾಗಿದೆ. ಸರಕಾರ ಕಾರಂಜಾ ಯೋಜನೆಗೆ ಭೂಮಿ ನೀಡಿದ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡದ ಕಾರಣ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ 2ನೇ ಹಂತವಾಗಿ ಸುಮಾರು 6 ತಿಂಗಳುಗಳಿಂದ ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಸರಕಾರ ಇದಕ್ಕೆ ತಕ್ಷಣ ಸ್ಪಂದಿಸಬೇಕು. ಅದರಂತೆ ಬೀದರ ಜಿಲ್ಲೆಯ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂಘಟಿತ ರಾಜಕೀಯ ಇಚ್ಚಾಶಕ್ತಿ ವ್ಯಕ್ತಪಡಿಸಲು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಮಾತನಾಡಿ, ಪಕ್ಷಾತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ನಡೆದಿರುವ ಈ ಹೋರಾಟ ನ್ಯಾಯಯುತವಾದ ಬೇಡಿಕೆ ಈಡೇರಿಕೆಗಾಗಿಯೇ ಹೊರತು ಸರಕಾರದ ವಿರುದ್ಧ ಮತ್ತು ಯಾವುದೆ ಒಂದು ಪಕ್ಷದ ಪರವಾದ ಹೋರಾಟವಲ್ಲ. ಈ ಹೋರಾಟಕ್ಕೆ ಸಂಬಂಧಿಸಿ ಈಗಾಗಲೆ ತಮ್ಮ ಉಪಸ್ಥಿತಿಯಲ್ಲಿ ಜಿಲ್ಲೆಯ ಮಠಾಧೀಶಕರು, ರಾಜಕೀಯ ಪಕ್ಷದ ನಾಯಕರು, ಆಯಾ ಸಂಘ-ಸಂಸ್ಥೆ ಸಂಘಟನೆಗಳ ಮುಖಂಡರು ಸಭೆ ಸೇರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಹೋರಾಟದ ಗಂಭಿರತೆಯ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲು ಬರುವ 26 ರಂದು ಮುಂಜಾನೆ 11.30 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರಮಾಣದ ಸಹಸ್ರಾರು ಸಂತ್ರಸ್ತರು ಸೇರಿದಂತೆ, ರೈತರು ಎಲ್ಲಾ ಕ್ಷೇತ್ರದ ನಾಗರೀಕರ ಬೆಂಬಲದೊಂದಿಗೆ ಮಾನವ ಸರಪಳಿ ಹೋರಾಟ ನಡೆಸಿ ಅದೇ ದಿವಸ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಬೇಡಿಕೆ ಪತ್ರ ರವಾನಿಸಲಾಗುವುದು. ಅದೆ ದಿವಸ ಮಧ್ಯಾಹ್ನ ಜಿಲ್ಲೆಯ ಸಚಿವರು ಮತ್ತು ಎಲ್ಲಾ ಶಾಸಕರುಗಳ ಮನೆ ಮುಂದೆ ಧರಣಿ ನಡೆಸಿ ಕಾರಂಜಾ ಸಂತ್ರಸ್ತರ ಬೇಡಿಕೆಯ ಬಗ್ಗೆ ಸಂಘಟಿತವಾಗಿ ಪಕ್ಷಭೇದ ಮರೆತು ಧ್ವನಿಯೆತ್ತುವ ಮುಖಾಂತರ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಅದರಂತೆ ಈಗಾಗಲೆ ಜನಪರ, ಕನ್ನಡಪರ, ದಲಿತ ಹಿಂದುಳಿದ, ಅಲ್ಪಸಂಖ್ಯಾತರ, ರೈತ, ಕಾರ್ಮಿಕ, ವಿದ್ಯಾರ್ಥಿಪರ ಸಂಘಟನೆಗಳು ಮತ್ತು ಆಯಾ ರಾಜಕೀಯ ಪಕ್ಷಗಳು ಹಾಗೂ ವ್ಯಾಪಾರಿ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿರುವಂತೆ ಪ್ರತಿ ದಿವಸ ಆಯಾ ಸಂಘ-ಸಂಸ್ಥೆ ಸಂಘಟನೆಗಳ ಮುಖಾಂತರ ಕಾರಂಜಾ ಸಂತ್ರಸ್ತರ ಬೇಡಿಕೆಗೆ ಬೆಂಬಲಿಸಿ ನೀರಂತರ ಹೋರಾಟಗಳು ಹಮ್ಮಿಕೊಳ್ಳಲಾಗುವುದು. ಭವಿಷ್ಯದಲ್ಲಿ ಸರಕಾರದ ಪ್ರತಿಕ್ರೀಕೆಯನ್ನು ಗಮನದಲ್ಲಿಟ್ಟುಕೊಂಡು ಹೋರಾಟಕ್ಕೆ ಉಗ್ರ ಸ್ವರೂಪ ನೀಡಲಾಗುವುದು. ಸರಕಾರ ನಮ್ಮ ಬೇಡಿಕೆಗೆ ಮಲತಾಯಿ ಧೋರಣೆ ಮಾಡದೆ ಸಕರಾತ್ಮವಾಗಿ ಸ್ಪಂದಿಸಲು ಸಮಿತಿ ಒತ್ತಾಯಿಸಿದೆ..
ಕಾರಂಜಾ ಬೀದರ ಜಿಲ್ಲೆಯ ಜೀವನಾಡಿಯಾಗಿದ್ದು, ಈ ನೀರು ಕುಡಿಯುವ ಬೀದರ ಜಿಲ್ಲೆಯ ಪ್ರತಿಯೋಬ್ಬ ನಾಗರೀಕರಿಗೆ ಸ್ವಾಭಿಮಾನದ ಪ್ರತೀಕವಾದ ಈ ಹೋರಾಟಕ್ಕೆ ಎಲ್ಲಾ ಕ್ಷೇತ್ರದ ಮತ್ತು ಎಲ್ಲಾ ವರ್ಗದ ನಾಗರೀಕರು ಹೋರಾಟಕ್ಕೆ ಬೆಂಬಲಿಸಿ ಯಶಸ್ವಿಗೊಳಿಸಲು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಬೀದರ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹೊಚಕನಳ್ಳಿ ಮನವಿ ಮಾಡಿದ್ದಾರೆ.