ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯ ಮತ್ತು ವೀರಾ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮಳುಗಡೆಯಾಗುತ್ತಿರುವ ಭೀಮಾ ನದಿತೀರದ ಗ್ರಾಮಗಳ ಜನತೆಯ ರಕ್ಷಣೆಗಾಗಿ ಸೇನಾಪಡೆ ಸಜ್ಜಾಗಿದೆ.
ಸಿಕಂದ್ರಾಬಾದ್‌ನ ೨೦೨ ರೆಜಿಮೆಂಟ್ ಎಂಜಿಯರ್ ಕಲಮ್(ಪ್ರವಾಹ ನಿರ್ವಹಣೆ)ನ ಮೇಜರ್ ನಮನ್ ನರೂಲ ನೇತೃತ್ವದ ೧೦೦ ಸೈನಿಕರನ್ನೊಳಗೊಂಡ ಮೂರು ತಂಡ ಆಗಮಿಸಿದ್ದು, ಶುಕ್ರವಾರ ಮಧ್ಯಾಹ್ನವೇ ಅಫಜಲಪುರ ತಾಲೂಕಿನ ಘತ್ತರಗಾಕ್ಕೆ ತೆರಳಿ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿತು. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಭೀತಿ ಇರುವ ದೇವಲ ಗಾಣಗಾಪುರ, ಜೇವರ್ಗಿ ತಾಲೂಕಿನ ಕಲ್ಲೂರು ಬ್ರಿಡ್ಜ್ ಕಮ್ ಬ್ಯಾರೇಜ್, ಚಿತ್ತಾಪುರ ತಾಲ್ಲೂಕಿನ ಕಡಬೂರು ಇನ್ನಿತರ ಪ್ರವಾಹ ತೋರುವ ಗ್ರಾಮಗಳಲ್ಲಿ ಉಳಿದ ೨ ತಂಡಗಳು ಕಾರ್ಯಾಚರಣೆ ನಡೆಸಲಿವೆ.
ಜಿಲ್ಲಾಧಿಕಾರಿಗಳಿಂದ ಸಭೆ: ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು, ಸೇನಾಪಡೆ, ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿಗಳ ಜತೆ ಸಭೆ ನಡೆಸಿ, ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಿದರು. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಊರು-ಪ್ರದೇಶಗಳನ್ನು ಯೋಧರಿಗೆ ನಕ್ಷೆ ಮೂಲಕ ತೋರಿಸಿದರು.
ಈ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ಥ ಜನತೆಯ ರಕ್ಷಣೆಗೆ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳುತ್ತೀರಿ ಎಂದು ಜಿಲ್ಲಾಧಿಕಾರಿಗಳು ಕೇಳಲಾಗಿ, ಇದಕ್ಕೆ ಪ್ರತಿಕ್ರಿಯಿಸಿದ ಮೇಜರ್ ನಮನ್ ನರೂಲ ಅವರು, ಬೋಟ್ ಮತ್ತು ಜೀವರಕ್ಷಕ ಜಾಕೆಟ್‌ಗಳನ್ನು ನಮ್ಮ ಜೊತೆಯಲ್ಲಿ ತಂದಿದ್ದು, ಎಷ್ಟೇ ಆಳ ಅಥವಾ ವೇಗವಾಗಿ ಹರಿಯುವ ನೀರೇ ಇರಲಿ, ಕಾರ್ಯಾಚರಣೆ ನಡೆಸಿ ಸಂತ್ರಸ್ಥರನ್ನು ಕಾಪಾಡಲಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.
ನಾವು ಹೆಚ್ಚುವರಿಯಾಗಿ ೪೦ ಜೀವ ರಕ್ಷಕ ಜಾಕೆಟ್ ತಂದಿದ್ದೇವೆ. ಜೊತೆಗೆ ತೊಂದರೆಗೀಡಾಗಿ ನೆರವು ಯಾಚಿಸುವವರಿಗೆ ವೈದ್ಯಕೀಯ ಚಿಕಿತ್ಸೆ ಕೂಡ ಮಾಡುತ್ತೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು, ತಹಸೀಲ್ದಾರರು, ಸರ್ಕಲ್ ಇನ್ಸ್‌ಸ್ಪೆಕ್ಟರ್, ಸ್ಥಳೀಯ ಅಧಿಕಾರಿಗಳು ಮುಂತಾದವರ ಮೊಬೈಲ್ ನಂಬರ್ ಮತ್ತಿತರ ಮಾಹಿತಿಗಳನ್ನಿಟ್ಟುಕೊಂಡು, ಅವರು ನೀಡುವ ಮಾಹಿತಿ ಮೇರೆಗೆ ರಕ್ಷಣಾ ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು, ಡಿವೈಎಸ್‌ಪಿ ಪ್ರಸನ್ನ ದೇಸಾಯಿ ಅವರನ್ನು ಪ್ರವಾಹ ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದು, ವಿಕೋಪವನ್ನು ಎದುರಿಸಬೇಕು ಎಂದು ಸೈನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಿ. ರಾಜಾ, ಅಪರ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟೆ, ಡಿವೈಎಸ್‌ಪಿ ಪ್ರಸನ್ನ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹಾಗೂ ಹೈದ್ರಾಬಾದ ಕರ್ನಾಟಕ ಪ್ರಭಾರಿ ಮುಖ್ಯ ಅಗ್ನಿಶಾಮಕ ಅಧಿಕಾರಿ (ಕಲಬುರಗಿ ಪ್ರಾಂತೀಯ) ಎಸ್.ಸಿ. ಲಕ್ಕಪ್ಪ, ಜೇವರ್ಗಿ ತಾಲೂಕು ನೋಡಲ್ ಅಧಿಕಾರಿಯೂ ಆದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ್ ಸುಗೂರು, ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ಹೋಂಗಾರ್ಡ ಕಮಾಂಡಂಟ್ ಸಂತೋಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ.ಕೆ. ಪಾಟೀಲ, ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ. ಗೋಪಾಲ್ ಕೃಷ್ಣ, ಅಗ್ನಿಶಾಮಕ ದಳದ ಅಧಿಕಾರಿ ಪರಶುರಾಮ, ಜಿಲ್ಲಾಧಿಕಾರಿ ಕಾರ್ಯಾಲಯ (ಶಿಷ್ಠಾಚಾರ)ದ ತಹಸೀಲ್ದಾರ್ ಪ್ರಕಾಶ್ ಚಿಂಚೋಳಿಕರ್, ತಾಲ್ಲೂಕುಗಳ ತಹಸೀಲ್ದಾರರು ಮುಂತಾದವರು ಹಾಜರಿದ್ದರು.