ಕಲಬುರಗಿ: ಜಿಲ್ಲೆಯಲ್ಲಿ ಸುಮಾರು 51 ಲಕ್ಷ ಟನ್ ಸುಣ್ಣದ ಕಲ್ಲಿನ ಸಂಪನ್ಮೂಲ ಹೇರಳವಾಗಿದ್ದು, ಇದನ್ನು ಬಳಸಿಕೊಂಡು ಸ್ಥಳೀಯರೇ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ನೀಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ಶನಿವಾರ ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ(ಡಿ) ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 30 ಗುಂಟೆ ವಿಸ್ತೀರ್ಣದಲ್ಲಿ 2 ಕೋಟಿ ರೂ. ವೆಚ್ಚದಡಿ ನಿರ್ಮಿಸಲಾಗಿರುವ ಖನಿಜ ಭವನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 500 ಕೋಟಿ ರೂ. ಹೆಚ್ಚಿನ ಹೂಡಿಕೆಯ ಕೈಗಾರಿಕೆ ಸ್ಥಾಪನೆಗೆ ಹೈ ಪವರ್ ಕಮಿಟಿ ಅನುಮತಿ ನೀಡಲಾಗುತ್ತದೆ. ಅಲ್ಲಿ 100 ಉದ್ಯಮಿದಾರರಲ್ಲಿ 99 ಅನ್ಯ ರಾಜ್ಯದವರಿದ್ದರೆ, ಒಬ್ಬರು ಮಾತ್ರ ರಾಜ್ಯದವರು ಸಿಗ್ತಾರೆ. ಇದು ಬದಲಾಗಬೇಕಿದೆ. ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಸಬ್ಸಿಡಿ ನೀಡುವುದಲ್ಲದೆ ಸಿಂಗಲ್ ವಿಂಡೋ ಮೂಲಕ ತ್ವರಿತ ಅನುಮತಿ ನೀಡಲಾಗುತ್ತಿದೆ. ಇದನ್ನು ಉಪಯೋಗಿಸಿಕೊಂಡು ಸ್ಥಳೀಯ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿನಾಗಿದ್ದಾಗ ರಾಜ್ಯದಲ್ಲಿ ಮೈನಿಂಗ್ ಶಾಲೆ ತೆರೆಯಲು ಚಿಂತನೆ ನಡೆಸಿದ್ದೆ. ಗಣಿ ಅಧಿಕಾರಿ-ಸಿಬ್ಬಂದಿಗಳಿಗೆ ಪೆÇಲೀಸ್ ರೀತಿಯಲ್ಲಿ ವಾಹನ, ಸಮವಸ್ತ್ರ ನೀಡುವ ಅವಶ್ಯಕತೆವಿದೆ. ಇದರಿಂದ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ಮಾಡಲು ನೆರವಾಗುತ್ತೆ ಎಂದರು.
ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಿ: ಖನಿಜ ಭವನ ಕೆ.ಆರ್.ಐ.ಡಿ.ಎಲ್ ನಿಗಮದಿಂದ ನಿರ್ಮಾಣ ಮಾಡಿದ್ದನ್ನು ಅರಿತ ಸಚಿವರು, ಲ್ಯಾಂಡ್ ಆರ್ಮಿ ಇಲಾಖೆ ಗುಣಮಟ್ಟ ಕಟ್ಟಡ ನಿರ್ಮಾಣ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಲ್ಲೆ ಇದ್ದ ಇಂಜಿನೀಯರ್‍ಗೆ ಖಡಕ್ ಸೂಚನೆ ನೀಡಿದರು.
ಜ.19ಕ್ಕೆ ಪ್ರಧಾನಮಂತ್ರಿ ಕಲಬುರಗಿಗೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ ಮಾತನಾಡಿ ಡಾ.ಮುರುಗೇಶ ನಿರಾಣಿ ಅವರು ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಪ್ರತಿಫಲ ಈ ಖನಿಜ ಭವನ ಇಂದು ತಲೆ ಎತ್ತಿದೆ. ನನ್ನ ಕ್ಷೇತ್ರದಲ್ಕಿ ಸ್ಲಂ ಬೋರ್ಡ್‍ನಿಂದ 3 ಸಾವಿರ ಮನೆ ನಿರ್ಮಿಸುತ್ತಿದ್ದು, ಸ್ಟೋನ್ ಕ್ರಶರ್ ಉದ್ಯಮಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಘಟಕ ನಿಲ್ಲಿಸಿದ್ದರಿಂದ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೆ ಇವರ ಸಮಸ್ಯೆ ಬಗೆಹರಿಸಬೇಕು. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೂ ಸಚಿವರು ಅನುಮತಿ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಇದೇ ಜ.19ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಕಲಬುರಗಿ ನಿರಾವರಿ ಯೋಜನೆಗಳ ವಲಯದ (ಕಾಡಾ) ಅಧ್ಯಕ್ಷ ಹರ್ಷವರ್ಧನ ಗುಗಳೆ, ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಸುಮಿತ್ರ ಎಸ್. ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.