ನೆಟೆ ರೋಗದಿಂದ ತೊಗರಿ ಹಾನಿ ಪರಿಹಾರಕ್ಕಾಗಿ ಸಿ.ಎಂ. ಬಳಿ ನಿಯೋಗ; ಡಾ. ನಿರಾಣಿ

0
12

ಕಲಬುರಗಿ: ಇಲ್ಲಿನ ಪ್ರಮುಖ ಬೆಳೆ ತೊಗರಿ ನೆಟೆ ರೋಗದಿಂದ ತತ್ತರಿಸಿ ಭಾಗಶ: ಹಾನಿಯಾಗಿದ್ದ್ದು, ಸೂಕ್ತ ಪರಿಹಾರ ಕೋರಿ ಶೀಘ್ರದಲ್ಲಿಯೇ ಸಿ.ಎಂ. ಬಳಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆ.ಡಿ.ಪಿ.) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆಟೆ ರೋಗಕ್ಕೆ ವಿಶೇಷ ಪರಿಹಾರದ ಜೊತೆಗೆ ಸಂಪೂರ್ಣ ಬೆಳೆ ವಿಮೆಗೆ ಪರಿಹಾರಕ್ಕೆ ಕೋರಲಾಗುವುದು. ಇದಲ್ಲದೆ ಕೃಷಿ, ತೋಟಗಾರಿಕೆ ಸಚಿವರನ್ನು ಸಹ ಭೇಟಿ ಮಾಡಲಾಗುವುದು. ಈ ಸಂಬಂಧ ವಿಸ್ತøತ ವರದಿಯನ್ನು 2 ದಿನದಲ್ಲಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಸೂಚಿಸಿದರು.

Contact Your\'s Advertisement; 9902492681

ಕೃಷಿ ಇಲಾಖೆ ಮೇಲಿನ ಚರ್ಚೆ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಮಾತನಾಡಿ, 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 8.54 ಲಕ್ಷ ಹೆಕ್ಟೇರ್ ಬಿತ್ತನೆ ಪೈಕಿ ಅತಿವೃಷ್ಠಿಯಿಂದ 1.80 ಲಕ್ಷ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ಪರಿಹಾರ ನೀಡಲು 2,19,277 ರೈತರನ್ನು ಗುರುತಿಸಿದ್ದು, ಇದರಲ್ಲಿ 2.59 ಲಕ್ಷ ರೈತರಿಗೆÉ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ರಾಜ್ಯ ಸರ್ಕಾರದಿಂದ 240 ಕೋಟಿ ರೂ. ಇನ್ಪುಟ್ ಸಬ್ಸಿಡಿ ಪರಿಹಾರ ನೀಡಿದೆ. ಇದಲ್ಲದೆ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಯಾದ 2.14 ಲಕ್ಷ ರೈತರ ಪೈಕಿ 1.18 ಲಕ್ಷ ರೈತರು ದೂರು ನೀಡಿದ್ದು, ದೂರು ದಾಖಲಿಸಿದವರ ಪೈಕಿ 62,700 ರೈತರಿಗೆ 38 ಕೋಟಿ ರೂ. ಬೆಳೆ ವಿಮೆ ಪರಿಹಾರ ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು ಮಾತನಾಡಿ, ಹೊಸ ತಾಲೂಕುಗಳಿಗೆ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ತೆರೆದಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು. ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ತಮ್ಮ ಕ್ಷೇತ್ರದ ಗುಡೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2018ರ ಬೆಳೆ ವಿಮೆ ಪರಿಹಾರ ಇಂದಿಗೂ ಬಂದಿಲ್ಲ ಎಂದು ಗಮನ ಸೆಳೆದರು. ಅಫಜಲಪೂರ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಬೆಳೆ ಪರಿಹಾರ ಸರಿಯಾಗಿ ವಿತರಣೆ ಮಾಡಿಲ್ಲ. ಬೆಳೆ ವಿಮೆ ನೋಂದಣಿ ಮಾಡಿದ ರೈತರು ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡಲು ಕರೆ ಮಾಡಿದರೆ ವಿಮೆ ಕಂಪನಿಯವರು ಫೋನ್ ಸ್ವೀಕರಿಸುತ್ತಿಲ್ಲ. ಇದರಿಂದ ಬಹಳಷ್ಟು ರೈತರು ದೂರು ಸಲ್ಲಿಸಲು ಸಾಧ್ಯವಾಗಿಲ್ಲ ಎಂದರು.

ಇದಕ್ಕೆ ಯೂನಿವರ್ಸಲ್ ಸೊಂಪು ಜನರಲ್ ಇನ್ಶುರೆನ್ಸ್ ಅಧಿಕಾರಿ ಮುತ್ತು ಪಾಟೀಲ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಡಾ.ಮುರುಗೇಶ ನಿರಾಣಿ ಅವರು, ಕೆ.ಡಿ.ಪಿ.ದಂತಹ ಪ್ರಮುಖ ಸಭೆಗೆ ನಿಮ್ಮ ಹಿರಿಯ ಅಧಿಕಾರಿಗಳು ಏಕೆ ಬಂದಿಲ್ಲ. ನೀವು ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿ ಅಲ್ಲ. ನೀವ್ಯಾಕೆ ಬಂದಿದ್ದೀರಿ ಎಂದು ಅಧಿಕಾರಿಗಳ ಮೇಲೆ ಗರಂ ಆದರು. ಮುಂದಿನ ಸಭೆಗೆ ನಿಮ್ಮ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಎಂದು ಸೂಚಿಸಿದರು.

ಎನ್.ಎಸ್.ಎಲ್. ಕಾರ್ಖಾನೆ ಸರಿಯಾಗಿ ಹಣ ಪಾವತಿಸುತ್ತಿಲ್ಲ: ಪ್ರತಿ ಟನ್ ಕಬ್ಬಿಗೆ 2,350 ರೂ. ನಿಗದಿ ಮಾಡಿದರು ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯವರು ಇಳುವರಿ ಕಮ್ಮಿ ಎಂದು ರೈತರಿಗೆ 2,300 ರೂ. ಮಾತ್ರ ನೀಡುತ್ತಿದ್ದಾರೆ, ನಿಗದಿಯಂತೆ ಹಣ ಪಾವತಿ ಮಾಡುವಂತೆ ಕಾರ್ಖಾನೆಗೆ ಸೂಚನೆ ನೀಡಿ ಎಂದು ಆಳಂದ ಶಾಸಕ ಸುಭಾಷ ಗುತ್ತೇದಾರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಡಿ.ಸಿ. ಯಶವಂತ ವಿ. ಗುರುಕರ್ ಅವರ ಗಮನಕ್ಕೆ ತಂದರು. ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ 2,350 ರೂ. ದರ ನಿಗದಿ ಮಾಡಲಾಗಿದೆ. ಅಷ್ಟು ಹಣ ಕಾರ್ಖಾನೆಯವರು ಪಾವತಿ ಮಾಡಲೇಬೇಕು. ಕಬ್ಬು ರೈತರ ಹಿತಕ್ಕಾಗಿ “ಕಬ್ಬು ಮಿತ್ರ” ತಂತ್ರಾಂಶ ತರಲಾಗಿದೆ. ಯಾವುದೇ ರೈತ ಯಾವುದೇ ಕಾರ್ಖಾನೆಗೆ ಕಬ್ಬು ಪೂರೈಸಬಹುದು ಎಂದರು.

ಈ ಸಂದರ್ಭದಲ್ಲಿ ಸಚಿವ ಡಾ.ಮುರುಗೇಶ ನಿರಾಣಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿ ಅವರುಗಳ ನಡುವೆ ಸ್ಪರ್ಧೇ ಏರ್ಪಟ್ಟು ರೈತರಿಂದ ಕಬ್ಬು ಖರೀದಿಗೆ ಮುಗಿಬಿದ್ದಲ್ಲಿ ಮಾತ್ರ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು-ಉದ್ಯಮಿಗಳು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಬೇಕು. ಕೇಂದ್ರ ಸರ್ಕಾರ ಶೇ.90ರಷ್ಟು ಸಾಲ ನೀಡುತ್ತಿದೆ ಎಂದರು.

ಮಾತು ಮುಂದುವರೆಸಿದ ಸಚಿವ ಮುರುಗೇಶ ನಿರಾಣಿ ಅವರು, ಕಬ್ಬಿನಲ್ಲಿ ಕಡಿಮೆ ಇಳುವರಿ ಬರುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆಹಾರ, ಕಾನೂನು ಮಾಪನಶಾಸ್ತ್ರ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮಿತಿ ರಚಿಸಿಕೊಂಡು ವಾರಕೊಮ್ಮೆ ಸಕ್ಕರೆ ಕಾರ್ಖಾನೆಗಳಿಗೆ ಅನಿರೀಕ್ಷಿತ ದಾಳಿ ಮಾಡಿ ತಪಾಸಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಡಿ.ಸಿ. ಯಾವಂತ ವಿ. ಗುರುಕರ್ ಮಾತನಾಡಿ, ಈಗಾಗಲೆ 4 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಲಾಗಿದೆ. ಇಳುವರಿ ಕಡಿಮೆ ಕುರಿತಂತೆ ಪರಿಶೀಲಿಸಲು ರಾಯಚೂರು ಕೃಷಿ ವಿ.ವಿ.ಗಳಿಂದ ತಜ್ಞರನ್ನು ಕರೆಸಿ ಪರಿಶೀಲಿಸಿದಾಗ ಇಳುವರಿ ಸರಿಯಾಗಿಯೇ ಇರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಸಚಿವರಿಗೆ ತಿಳಿಸಿದರು.

ಜೆಸ್ಕಾಂ ಇಲಾಖೆ ಪರಿಶೀಲನೆ ವೇಳೆಯಲ್ಲಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಆಳಂದ ತಾಲೂಕಿನ ಲಿಂಗದಳ್ಳಿಯಲ್ಲಿ ತಿಂಗಳಾದರು ಟಿ.ಸಿ. ಬದಲಾಯಿಲ್ಲ, ಹಣ ನೀಡಿದರೆ ಮಾತ್ರ ಟಿ.ಸಿ. ನೀಡಲಾಗುತ್ತದೆ ಎಂದು ಅಲ್ಲಿನ ಜೆ.ಇ. ಹೇಳುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಜೆಸ್ಕಾಂ ಕಲಬುರಗಿ ವಿಭಾಗ-1ರ ಇ.ಇ. ಸಂತೋಷ್ ಚವ್ಹಾಣ ಉತ್ತರ ನೀಡುತ್ತಾ, ಟಿ.ಸಿ.ಬ್ಯಾಂಕ್ ಸ್ಥಾಪಿಸಿದ್ದು, ಎಲ್ಲಿಯೂ ಟಿ.ಸಿ. ಸಮಸ್ಯೆ ಇಲ್ಲ. ಟಿ.ಸಿ. ಪೂರೈಸಲು ಹಣ ಕೇಳಿದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು. ಸಚಿವ ಡಾ.ಮುರುಗೇಶ ನಿರಾಣಿ ಮಾತನಾಡಿ ಕೃಷಿ ಮತ್ತು ಕುಡಿಯುವ ನೀರಿನ ಟಿ.ಸಿ. ಕೆಟ್ಟಿದಲ್ಲಿ ಕೂಡಲೆ 24 ಗಂಟೆಯಲ್ಲಿ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿಯಲ್ಲಿ ಹೊಸದಾಗಿ ಮಿನಿ ವಿಧಾನಸೌದ ನಿರ್ಮಾಣ: ಕೆ.ಡಿ.ಪಿ. ಸೇರಿದಂತೆ ಪ್ರಮುಖ ಸಭೆಗಳಿಗೆ ಪ್ರಸ್ತುತ ಡಿ.ಸಿ. ಸಭಾಂಗಣ ಚಿಕ್ಕದಾಗಿರುವ ಕಾರಣ ಕಲಬುರಗಿಯಲ್ಲಿ ಹೊಸದಾಗಿ ಸುಸಜ್ಜಿತ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಕೆ.ಕೆ.ಆರ್.ಡಿ.ಬಿ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲಾಗುವುದು ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.

ಘತ್ತರಗಿಯಲ್ಲಿ 5ನೇ ಬಾರಿ ಕಳುವು, ನಿಲ್ಲೋದ್ಯಾವಾಗ: ಅಫಜಲಪೂರ ಕ್ಷೇತ್ರದ ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಇತ್ತೀಚೆಗೆ 20 ಭದ್ರತಾ ಸಿಬ್ಬಂದಿಗಳಿದ್ದರೂ ಸಹ ದೇವಸ್ಥಾನದಲ್ಲಿ ಕಳುವಾಗಿದೆ. ಕಳ್ಳರು ದೇವಿಯ ಮೈಮೇಲಿನ ಒಡವೆ-ಹಣ ದೋಚಿದ್ದು, ಇದು 5ನೇ ಬಾರಿ ಕಳುವಾಗಿದೆ. ಇದಕ್ಕೆ ಕಡಿವಾಣ ಯಾವಾಗ ಎಂದು ಶಾಸಕ ಎಂ.ವೈ. ಪಾಟೀಲ ಪ್ರಶ್ನಿಸಿದರು. ಎಸ್.ಪಿ.ಇಶಾ ಪಂತ್ ಮಾತನಾಡಿ ಕಳ್ಳರ ಭೇಟೆಗೆ ಪ್ರತ್ಯೇಕ ತಂಡ ರಚಿಸಿದ್ದು, ಜಾಲ ಬೀಸಲಾಗಿದೆ. ಘತ್ತರಗಾ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳ ಭದ್ರತೆಯನ್ನು ಪರಿಶೀಲಿಸಿದ್ದು, ಕೈಗೊಳ್ಳಬೇಕಾದ ಭದ್ರತಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಂಬಂಧಿಸಿದ ದೇವಸ್ಥಾನದ ಸಮಿತಿ ಮತ್ತು ಮುಜರಾಯಿ ಇಲಾಖೆಗೆ ವರದಿ ನೀಡಲಾಗಿದೆ ಎಂದರು. ನಂತರ ಶಾಸಕ ಎಂ.ವೈ.ಪಾಟೀಲ ಮಾತನಾಡಿ ಹಿಂದೆ ಇಂದಿನ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರು ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದಾಗ ದೇವಿ ಕ್ಷೇತ್ರದಲ್ಲಿ ಅನೇಕ ಅಭಿವೃಧ್ಧಿ ಕಾರ್ಯಗಳು ಆಗಿದ್ದು, ಭಕ್ತರ ಅಪೇಕ್ಷೆಯಂತೆ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಡಿ.ಸಿ. ಅವರನ್ನು ಕೋರಿದರು. ಇದಕ್ಕೆ ಡಿ.ಸಿ. ಅವರು ಸಮ್ಮತ್ತಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಚಿವರು ಕೈಗೊಂಡರು.

ಸಭೆಯಲ್ಲಿ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೆಯ ಪಾಟೀಲ ರೇವೂರ, ಕೆ.ಕೆ.ಅರ್.ಟಿ.ಸಿ., ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕ್ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಚಿಂಚೋಳಿ ಶಾಸಕ ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಚಂದ್ರಶೇಖರ ಪಾಟೀಲ ಹುಮನಾಬಾದ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here