ಬಸವಣ್ಣ ಉತ್ತಮ ಸಂಘಟನಾ ಚತುರ: ಡಾ. ವೀರಣ್ಣ ದಂಡೆ

0
24

ಬಸವಣ್ಣ ಐತಿಹಾಸಿಕ ವ್ಯಕ್ತಿಯೇ? ಅನುಭ ಮಂಟಪ ಇತ್ತೇ? ಎಂಬ ಪ್ರಶ್ನೆ ಮಾಡುವ ಜನರು ಅರ್ಜುನವಾಡ ಶಾಸನ ದೊರೆತ ನಂತರ ಮಾಯವಾದರು. ಶರಣರ ವಚನಗಳು ದೊರೆತ ನಂತರ ಅನುಭವ ಮಂಟಪದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರು. ಹಾಗೆ ನೋಡಿದರೆ ಕಾಯಕ ದಾಸೋಹದಲ್ಲಿ ನಿರತರಾದ ಅನೇಕ ಜನರನ್ನು ಬಸವಣ್ಣನವರು ಒಂದೆಡೆಗೆ ತರುವ ಕೆಲಸ ಮಾಡಿದರು. -ಡಾ. ವೀರಣ್ಣ ದಂಡೆ, ವಚನ ವಿದ್ವಾಂಸರು, ಕಜಲಬುರಗಿ

ಕಲಬುರಗಿ: ಬಸವಣ್ಣನವರು ಲಕ್ಷಾಂತರ ಶರಣ ಗಣ ಸಂಘಟನೆ ಮಾಡುವ ಮೂಲಕ ಉತ್ತಮ ಸಂಘಟನಾ ಚತುರರಾಗಿದ್ದರು ಎಂಬುದು ಬಸವಣ್ಣನವರ ಜೊತೆಗಿದ್ದ ಶರಣರು ರಚಿಸಿದ ವಚನಗಳಿಂದ ತಿಳಿದು ಬರುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ವಚನ ವಿದ್ವಾಂಸ ಡಾ. ವೀರಣ್ಣ ದಂಡೆ ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಬಸವ ಸಮಿತಿ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಜಯ ನಗರದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಲಿಂ. ಸಿದ್ರಾಮಪ್ಪ ಸಿದ್ಧಬಸಪ್ಪ ಅಂಗಡಿ ಇಳಕಲ್ ಸ್ಮರಣಾರ್ಥ 744ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ಕಲ್ಯಾಣದ ಶರಣರು (ಪ್ರಾತ್ಯಕ್ಷಿಕೆ) ವಿಷಯ ಕುರಿತು ಅನುಭಾವ ನೀಡಿದ ಅವರು, ಶರಣ ಗಣ ಸಂಘಟನೆಗೆ ಚನ್ನಬಸವಣ್ಣ, ಅಲ್ಲಮಪ್ರಭು, ಹಾಗೂ ಮಡಿವಾಳ ಮಾಚಿದೇವ ಈ ಮೂವರು ಶರಣರು ಪ್ರಮುಖ ಕಾರಣರಾಗಿದ್ದರು. ಅನುಭವ ಮಂಟಪದಲ್ಲಿ ಚರ್ಚಿತ ವಿಷಯಗಳನ್ನು ಸಮಾಜದಲ್ಲಿ ಬಿತ್ತುವ ಮೂಲಕ ಹೊಸ ಧರ್ಮದ ಸೃಷ್ಟಿಗೆ ಕಾರಣರಾದರು ಎಂದು ತಿಳಿಸಿದರು.

ಬಸವಣ್ಣನವರಿಗೆ ಹೆಗಲೆಣೆಯಾಗಿ ಅಕ್ಕನಾಗಮ್ಮ, ನೀಲಾಂಬಿಕೆ ಹಾಗೂ ಗಂಗಾಂಬಿಕೆ ಜೊತೆಗೆ ಸಿದ್ರಾಮೇಶ್ವರರು ದುಡಿದಿರುವುದರಿಂದ ಬಸವ ಧರ್ಮ, ತತ್ವ, ಸಿದ್ಧಾಂತ ಎಲ್ಲೆಡೆ ಹರಡಲು ಸಾಧ್ಯವಾಯಿತು. ಮತ್ರ್ಯಲೋಕ ಹಾಳಾಗಬಾರದು, ಜನ ಸಾಮಾನ್ಯರು ಉಳಿಯಬೇಕು ಎಂಬುದಕ್ಕಾಗಿ ಬಸವಣ್ಣನವರನ್ನು ಕರ್ತನು ಕಲ್ಯಾಣಕ್ಕೆ ಕಳುಹಿಸಿದ ಎಂಬರ್ಥದ ವಚನವನ್ನು ಅಲ್ಲಮಪ್ರಭುಗಳು ತಮ್ಮೊಂದು ವಚನದಲ್ಲಿ ವಿವರಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ನಡೆ-ನುಡಿ ಒಂದಾಗಿಸಿಕೊಂಡಿದ್ದ ಶರಣರನ್ನು ಹಾಗೂ ಅವರ ವಿಚಾರಗಳನ್ನು ಸ್ವಾಗತಿಸುವ ಬಗೆ ಹಾಗೂ ಶರಣರನ್ನು ಯಾಕೆ ನೆನೆಯಬೇಕು, ಶರಣರನ್ನು ಸ್ಮರಿಸುವುದರಿಂದ ಏನಾಗುತ್ತದೆ ಎಂಬುದನ್ನು ಅನೇಕ ಜನಪದ ತ್ರಿಪದಿಗಳಲ್ಲಿ ಇರುವುದನ್ನು ಗುರುತಿಸಬಹುದು. ಬಸವಣ್ಣನವರು ತಮ್ಮ ಕತೃತ್ವ ಶಕ್ತಿಯಿಂದ ವಿವಿಧ ಕಾಯಕದ ಶರಣರನ್ನು ಒಂದು ಕಡೆ ಕಲೆ ಹಾಕಿದರು. ಅವರಿಗೆ ಧರ್ಮ ಹಾಗೂ ಸಮಾಜದ ಅರಿವನ್ನು ಅರುಹಿದರು ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿ ಡಾ. ಜಯಶ್ರೀ ದಂಡೆ, ಉದ್ದಂಡಯ್ಯ ಎಚ್. ಕಂಬಳಿಮಠ, ಬಂಡಪ್ಪ ಕೇಸೂರ, ಎಸ್.ವಿ. ಹತ್ತಿ ಮತ್ತಿತರರು ಇದ್ದರು. ಡಾ. ಆನಂದ ಸಿದ್ಧಾಮಣಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here