ಕಲಬುರಗಿ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ಈಚೆಗೆ ಕಾಂಗ್ರೆಸ್ ಸೇರಿದ್ದ ಚಿಂಚನಸೂರ ಅವರು ಕಲಬುರಗಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಈ ಬಾರಿ ಪ್ರಿಯಾಂಕ್ ಖರ್ಗೆ ಗೆಲ್ಲುವುದು ಗ್ಯಾರಂಟಿ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರಮಟ್ಟದ ನಾಯಕರಾಗಿದ್ದು, ಖರ್ಗೆಯವರ ಭದ್ರಕೋಟೆ ಮತ್ತಷ್ಟು ಗಟ್ಟಿಯಾಗಲಿದೆ. ಈ ಕೋಟೆಯನ್ನು ಯಾರಿಂದಲೂ ಬೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ತಮಗೆ ಹಾಗೂ ತಮ್ಮ ಶ್ರೀಮತಿಯವರಿಗೆ ನೀಡಿದ ಅಧಿಕಾರವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದು, ಕಲ್ಯಾಣ ಕರ್ನಾಟಕದಾದ್ಯಂತ ಓಡಾಡಿ ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ನನ್ನ ಶಕ್ತಿಯನ್ನು ತೋರಿಸಿಕೊಡುವೆ. ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರಿಸುತ್ತವೆ ಎಂದು ಈವರೆಗೆ ತುಟಿಗೆ ತುಪ್ಪ ಸವರಿದ ಬಿಜೆಪಿ ನಡೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಕೋಲಿ, ಕಬ್ಬಲಿಗ ಸಮಾಜ ಎಸ್ಟಿಗೆ ಸೇರಬೇಕಾದರೆ ಖರ್ಗೆಯವರಂಥ ಬಲಿಷ್ಠ ನಾಯಕರಿಂದ ಮಾತ್ರ ಸಾಧ್ಯವಿದ್ದು, ಈ ವಿಷಯ ಮನಗಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವೆ. ಈ ಹಿಂದೆ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ
ಡಿಕೆಶಿ ಅವರು ನನಗೆ ಸಪ್ತ ಖಾತೆ ಕೊಡಿಸಿದ್ದರು. ಅವರ ಋಣ ತೀರಿಸಲಾಗುವುದಿಲ್ಲ ಎಂದರು.
ಖರ್ಗೆ ಮತ್ತು ನನ್ನ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ತಂದೆ ಮಗನ ನಡುವಿನ ಮುನಿಸಿನಂತಿದ್ದು, ಹೀಗಾಗಿ ಬಿಜೆಪಿಗೆ ಹೋಗಿದ್ದೆ ಮತ್ತೆ ತವರು ಸೇರಿದ ಖುಷಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂಎಲ್ ಸಿ ಅಲ್ಲಮಪ್ರಭು ಪಾಟೀಲ, ಮುಖಂಡರಾದ ರಾಜಗೋಪಾಲರೆಡ್ಡಿ, ನೀಲಕಂಠರಾವ ಮೂಲಗೆ, ಮಹಾಂತಪ್ಪ ಸಂಗಾವಿ, ಚಂದ್ರಿಕಾ ಪರಮೇಶ್ವರ, ಹುಲಿಗೆಪ್ಪ ಕನಕಗಿರಿ, ಅಮೀರ್ ಅಲಿ, ವಾಣಿಶ್ರೀ ಇತರರಿದ್ದರು.