ಕಲಬುರಗಿ: ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಹೀಗೆ ವಿವಿಧ ಪ್ರಕರಣಗಳಲ್ಲಿ ಮಹಿಳೆಯರು ದೂರು ನೀಡಲು ಅನುಕೂಲವಾಗುವಂತೆ ರಾಜ್ಯ ಮಹಿಳಾ ಆಯೋಗದ ಸೆಲ್ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಯೋಗಕ್ಕೆ ದೂರು ಸಲ್ಲಿಸಲು ಜಿಲ್ಲಾ ಹಂತದಲ್ಲಿ ವ್ಯವಸ್ಥೆಯಾದರೆ ಇನ್ನು ಅನುಕೂಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿಯೇ ಒಂದು ಸೆಲ್ ಸ್ಥಾಪಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ದೂರದ ಬೆಂಗಳೂರಿಗೆ ಬರುವುದು ತಪ್ಪಲಿದೆ ಎಂದರು.
ಕಲಬುರಗಿ, ಕೋಲಾರ ದಂತಹ ಗಡಿ ಪ್ರದೇಶದಲ್ಲಿ ಮಹಿಳೆಯರ ಕಳ್ಳ ಸಾಗಾಣೆಗೆ ಕಡಿವಾಣ ಹಾಕಬೇಕಿದೆ. ಅಪಹರಣಕ್ಕೊಳಗಾಗುವ ಬಾಲಕೀಯರು, ಮಹಿಳೆಯರನ್ನು ಕಾನೂನು ಬಾಹಿರ ಚಡುವಟಿಕೆಗಳಿಗೆ ಬಳಸಿಕೊಳ್ಳುವ ದೊಡ್ಡ ಮಾಫಿಯಾ ಇದ್ದು, ಇದಕ್ಕೆಲ್ಲ ನಿಯಂತ್ರಣ ಹೇರಬೇಕಿದೆ. ಇದಕ್ಕಾಗಿ ಮಹಿಳಾ ಸಂಬಂಧಿತ ಇಲಾಖೆಗಳು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಒತ್ತಿ ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಮಿಷನ್ ಸುರಕ್ಷಾ, ಅನೆಮಿಯಾ ಮುಕ್ತ ಕರ್ನಾಟಕ ಅಭಿಯಾನ, ಜನಸ್ನೇಹಿದಂತಹ ಮಹಿಳಾ ಸ್ನೇಹಿ ಕಾರ್ಯಕ್ರಮ ಆಯೋಜನೆಗೆ ಸಂತಸ ವ್ಯಕ್ತಪಡಿಸಿದ ಅಧ್ಯಕ್ಷರು, ಮಹಿಳಾ ಮಿಸ್ಸಿಂಗ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಇನ್ನು ಜಿಲ್ಲೆಯಲ್ಲಿ ನ್ಯಾಪಕಿನ್ ಹಾಳು, ಅಂಗನವಾಡಿಯಲ್ಲಿ ಕಳಪೆ ತತ್ತಿ ಪೂರೈಕೆ ಸಂಬಂಧ ಮುಖ್ಯಮಂತ್ರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಗಮನಕ್ಕೆ ತರುವೆ ಎಂದು ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ.ಅಕ್ಷಯ್ ಹಾಕೈ, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಎ.ಸಿ.ಪಿ. ಬಿಂದುಮಣಿ ಆರ್.ಎನ್. ಇದ್ದರು.