ಕಲಬುರಗಿ: ಮಳೆಗಾಲದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶುಚಿ, ರುಚಿ ಆಹಾರ ಸೇವಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಇಂದಿರಾ ಶಕ್ತಿ ಸಲಹೆ ನೀಡಿದರು.
ಶ್ರೀ ಹಿಂಗುಲಾಂಬಿಕ ಶಿಕ್ಷಣ ಸಂಸ್ಥೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಮಲ್ಲೇಶಪ್ಪ ಮಿಣಜಿಗಿ ಪ್ರತಿಷ್ಠಾನದ ಆಶ್ರಯದಲ್ಲಿ ಗಾಜಿಪುರದ ಅತ್ತರ್ ಕಾಂಪೌಂಡ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಕ್ರಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆವಹಿಸಿ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯವಹಿಸಬೇಕು. ಆರೋಗ್ಯಪೂರ್ಣ ನೆಮ್ಮದಿ ಜೀವನ ನಡೆಸಲು ವೈದ್ಯರ ಸಲಹೆ ಚಾಚೂ ತಪ್ಪದೆ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಅಲ್ಲಮಪ್ರಭು ಗುಡ್ಡ ಮಾತನಾಡಿ, ಸದ್ಯ ಕಂಡು ಬರುತ್ತಿರುವ ಅನೇಕ ಕಾಯಿಲೆಗಳಿಗೆ ಆಹಾರ ಮತ್ತು ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ಪೌಷ್ಟಿಕ ಆಹಾರ, ಯೋಗ, ಲಘು ವ್ಯಾಯಾಮ, ಆತಂಕ ರಹಿತ ಜೀವನ ಶೈಲಿಯಿಂದ ಮುನ್ನಡೆದರೆ ನೆಮ್ಮದಿ ಹಾಗೂ ಆರೋಗ್ಯ ಪೂರ್ಣ ಜೀವನ ನಡೆಸಬಹುದಾಗಿದೆ. ಕರಿದ ಪದಾರ್ಥಗಳು, ಜಂಕ್‍ಪುಡ್ ಆಹಾರಗಳ ಮೊರೆ ಹೋಗದೆ ತಾಜಾ ತರಕಾರಿ, ಹಣ್ಣು ಹಂಪಲು ಸೇವಿಸಿ ಸದೃಢ ಆರೋಗ್ಯ ಹೊಂದಬೇಕು. ಡಾ. ಇಂದಿರಾ ಶಕ್ತಿಯವರ ನೇತೃತ್ವದಲ್ಲಿ ನಡೆಯುವ ಪ್ರತಿ ತಿಂಗಳು ಉಚಿತ ಚಿಕಿತ್ಸಾ ಶಿಬಿರದ ಲಾಭ ಪಡೆದುಕೊಂಡು ಆರೋಗ್ಯವಂತರಾಗಿ ಬಾಳಬೇಕು ಎಂದರು.
ಡಾ. ವಿವೇಕಾನಂದ ಪಾಟೀಲ್, ಡಾ. ಸಪ್ನಾ ಕಾಬಾ, ಡಾ. ಓಂಕಾರ ಜೇವೂರ್, ಡಾ. ಸೃಷ್ಟಿ ವೈದ್ಯ, ಡಾ. ಪ್ರಮೋದ, ಡಾ. ಪ್ರಜ್ವಲ ಮಾಲಿಪಾಟೀಲ್, ಡಾ. ಸೊಹೇಲ್ ನದಾಫ್, ಡಾ. ಶೇಖ ಡ್ಯಾನಿಶ್ ಸೇರಿ, ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರು ಹಾಜರಿದರು. ಸುಮಾರು 100ಕ್ಕೂ ಜನರಿಗೆ ತಪಾಸಣೆ ಹಾಗೂ ಔಷದೋಪಚಾರ ನೀಡಲಾಯಿತು.