ವರುಷಕ್ಕೊಂದು ದೊಡ್ಡಾಟ, ಒಂದು ಸಾಮಾಜಿಕ, ಇಲ್ಲವೇ ಪೌರಾಣಿಕ ನಾಟಕ., ಅದರ ಸಿದ್ದತೆ ಮತ್ತು ಪ್ರದರ್ಶನದ ವೈಖರಿ…. ಹೀಗೆ ಕಳೆದರ್ಧ ಶತಮಾನದ ಯಡ್ರಾಮಿ ರಂಗೇತಿಹಾಸ ಬರೆಯುವವರಿಗೆ ದಕ್ಕುವ ದಿವಿನಾದ ಆಕರ ವಸ್ತುಗಳು.
ಹಾಗೆ ನೋಡಿದರೆ ಯಡ್ರಾಮಿ ದೊಡ್ಡಾಟದ ತವರುಮನೆ. ಮಾಳಿ ಸಂಗಪ್ಪನವರ ದೇವಿ ಪಾತ್ರ, ಸೋಮಪ್ಪಗೋಳ ಚನ್ನಬಸಪ್ಪಗೌಡರ ಕಂಸ ಮತ್ತು ಶಮರಾಶೂರ ಪಾತ್ರ, ಸರ್ಕಾರ ಸಂಗಪ್ಪನವರ ಅಶ್ವತ್ಥಾಮ ಪಾತ್ರ, ನಾಯ್ಕೋಡಿ ರಹಮಾನಸಾಬರ ರಕ್ತ ಬೀಜಾಶೂರ ಪಾತ್ರ. ಹೆಬ್ಬಾಳ ತಿಪ್ಪಣ್ಣ ಹಾಗೂ ತಳವಾರ ಹಲಕಟ್ಟೆಪ್ಪನವರ ಶುಂಭ – ನಿಶುಂಭ ಪಾತ್ರಗಳು, ನಿರಕ್ಷರಿ ಹೊನಶೆಟ್ಟಿ ಶ್ಯಾಣಪ್ಪರ ಪಾತ್ರ ಮತ್ತು ಭಾಗವತಿಕೆಯೆಂದರೆ ಉಲ್ಲೇಖನೀಯ. ಆತನಿಗೆ ಎಲ್ಲ ಬಯಲಾಟಗಳು ಬಾಯಿಪಾಠ. ಪುಸ್ತಕ ನೋಡಿ ಮಾತು ಎತ್ತಿ ಕೊಡುವುದಲ್ಲ. ಮಸ್ತಕದಲ್ಲೇ ಎಲ್ಲಾ ತುಂಬಿ ಕೊಂಡಿದ್ದ… ಹೀಗೆ ಈ ಊರು ಸಣ್ಣ ಪುಟ್ಟ ಕಲಾವಿದರು ಸೇರಿದಂತೆ ದೊಡ್ಡಾಟದ ಆಡುಂಬೊಲ.
ಮಾಳಿ ಸಂಗಪ್ಪ ಬದುಕಿನುದ್ದಕ್ಕೂ ದೇವಿ ಮಹಾತ್ಮೆ ದೊಡ್ಡಾಟದ ” ದೇವಿ ” ಪಾತ್ರವನ್ನು ದೈವತ್ವದಂತೆ ಬದುಕಿದವರು. ಅದಕ್ಕಾಗಿಯೇ ಕಟ್ಟು ನಿಟ್ಟಾದ ನಿತ್ಯ ನೇಮಗಳು. ಭಕ್ತಿಭಾವದ ಚಲನ ಶೀಲತೆಗಳು. ಆತ ಜೀವನ ಪರ್ಯಂತರ ಚಪ್ಪಲಿ ಹಾಕಿ ಕೊಳ್ಳಲಿಲ್ಲ. ಸದಾ ಶುಭ್ರ ಶ್ವೇತ ವಸ್ತ್ರಧಾರಿ. ಅಚ್ಚ ಬಿಳಿ ಧೋತರ, ಅಡ್ಡ ಕಸಿಯ ಬಿಳಿಯಂಗಿ, ಶುಭ್ರ ಶ್ವೇತ ರುಮಾಲುಧಾರಿ.
ದಿನ ನಿತ್ಯದ ಬದುಕಿನಲೂ ವ್ರತದಂತೆ ಈ ಶಿಸ್ತನ್ನು ಕಲಾವಿದರೆಲ್ಲ ಪಾಲಿಸುತ್ತಿದ್ದರು. ಅದು ಅವರ ದೈವದ ಹರಕೆ. ಹಗಲೆಲ್ಲ ಹೊಲದಲ್ಲಿ ದುಡಿದು ಬಂದು ಸಂಜೆ ಜಳಕ ಮಾಡಿ ಮಡಿಯೊಂದಿಗೆ ಬಯಲಾಟದ ಜಡತಿ., ಅಂದರೆ ತಿಂಗಳು ಗಟ್ಟಲೇ ತಾಲೀಮು.
ಇದು ದೊಡ್ಡಾಟದ ಪುಟ್ಟ ಹಕೀಕತ್ತು. ಇನ್ನು ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳದ್ದು ದೊಡ್ಡ ಚರಿತ್ರೆಯೇ ಇದೆ. ಯಡ್ರಾಮಿಯ ರಂಗ ಚರಿತ್ರೆಯಲ್ಲಿ ಮುಸ್ಲಿಮರ ಕೊಡುಗೆ ಅಮೋಘವಾದುದು.
ಭಾಗವಾನರ ಇಮಾಮಸಾಹೇಬ ಆ ಕಾಲದ ದೊಡ್ಡ ಕಲಾವಿದ. ಇವರ ತಮ್ಮ ಖಾಜಾ ಹುಸೇನಿಯ ಭೀಮನ ಪಾತ್ರ ಯಡ್ರಾಮಿಯಲ್ಲಿ ಜಗತ್ಪ್ರಸಿದ್ದವೇ. ಇಮಾಮ ಸಾಬರಿಗೆ ನಾಟಕದಲ್ಲಿ ಸಣ್ಣ ಪಾತ್ರ ಕೊಟ್ಟರೂ ಅದಕ್ಕೆ ದೊಡ್ಡ ಜೀವ ತುಂಬುವ ಪ್ರತಿಭೆ ಆತನದು.
ಡೊಳ್ಳು ಹೊಟ್ಟೆ (ಈತ ಇದ್ದುದು ಹಾಗೇ) ಯ ಪುರೋಹಿತನ ಪಾತ್ರವನ್ನು ಅತ್ಯಂತ ಸೊಗಸಾಗಿ ಅಭಿನಯಿಸುವಲ್ಲಿ ತನ್ನ ಅಭಿಜಾತ ಪ್ರತಿಭೆ ಮೆರೆಯುತ್ತಿದ್ದ.
ಹೀರೊ ಹಾಗೂ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದ ಫಿಜಿಕ್ ಅಂದ್ರೇ ಚೌಧರಿ ಶೌಕತ್ ಅಲಿಯದು. ಆ ಕಾಲದ ಹಿಂದಿ ಚಿತ್ರ ಜಗತ್ತಿನ ಜಿತೇಂದ್ರ, ಧರ್ಮೇಂದ್ರ ಮಾದರಿ ಹೇರ್ ಸ್ಟೈಲ್ ಮತ್ತು ಅಭಿನಯದ ಮೂಲಕ ನಮ್ಮನ್ನೆಲ್ಲ ಮಂತ್ರ ಮುಗ್ದರನ್ನಾಗಿಸುತ್ತಿದ್ದರು.
ಬಂದೇಲಿ ಮಾಸ್ತರರ ಮಗ ಅಹ್ಮದಲಿ ಮಾಸ್ತರ ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದ್ಹಾಂಗ. ಆತ ಮಾಡಿದ ” ಕುರಹಟ್ಟಿ ಮಾಸ್ತರ ” ಪಾತ್ರದಿಂದಾಗಿ ಅದೇ ಹೆಸರಿಂದಲೇ ಜನ ಕರೆಯ ತೊಡಗಿದರು. ” ಒಂದಾನೊಂದು ಕಾಲದಲ್ಲಿ ” ಎಂಬ ಸಿನೆಮಾದಲ್ಲಿ ಪಾತ್ರ ಮಾಡುವ ಮೂಲಕ ಯಡ್ರಾಮಿಯ ಮೊಟ್ಟ ಮೊದಲ ಸಿನಿತಾರೆ ಪಟ್ಟ ಕಟ್ಟಿಕೊಂಡ ಮಹ್ಮದಲಿ ಹೆಸರಾಂತ ಕಲಾವಿದರು. ಯಡ್ರಾಮಿಯಲ್ಲಿ ಸಿನೆಮಾ ತಾರೆ ಚಾರಿಷ್ಮ ಮಹ್ಮದಲಿಯದು. ಈತ ಗುಡ್ ಫೋಟೋಗ್ರಾಫರ್ ಕೂಡಾ.
ನನ್ನ ಕ್ಲಾಸ್ ಮೇಟ್ ಶ್ರೀಶೈಲ ತಾಳಿಕೋಟಿ ದೊಡ್ಡಾಟ ಮತ್ತು ಸಾಮಾಜಿಕ ನಾಟಕ ಎರಡರಲ್ಲೂ ಈಜಾಡಿದಾತ. ಹಾಸ್ಯ ಪಾತ್ರದ ಶರೀರ ಮತ್ತು ಶಾರೀರವುಳ್ಳ ಗುರುಮೂರ್ತಿ ಪುರಾಣಿಕ ಅಕ್ಷರಶಃ ಅಭಿಜಾತ ಕಲಾವಿದರು. ಮಹಾಂತಗೌಡರು ಅನೇಕ ಸಾಮಾಜಿಕ ನಾಟಕಗಳಲ್ಲಿ ಸೊಗಸಾಗಿ ನಟಿಸಿದ್ದಾರೆ. ಈ ಎಲ್ಲ ರಂಗ ವತ್ಸಲರಿಗೆ ನನ್ನದೊಂದು ಸಂತಸದ ಸೆಲ್ಯುಟ್.
ನನ್ನ ಕಣ್ಮನಗಳ ಸ್ಮೃತಿ ಪಟಲಕೆ ದಕ್ಕಿರುವ ಈ ಹೆಸರುಗಳಲ್ಲದೇ ಅನೇಕರು ನನ್ನ ನೆನಪಿನಿಂದ ನುಸುಳಿ ನೇಪಥ್ಯಕ್ಕೆ ಸರಿದಿರಬಹುದು. ಅವರಿಗೂ ಸಣ್ಣದೊಂದು ಸೆಲ್ಯೂಟ್.
ಮರೆತ ಮಾತುಗಳು: ಈ ಊರಿನ ಶಿವನಗೌಡ ಮಾಲೀಪಾಟೀಲ, ರಂಗ ಸಜ್ಜಿಕೆಗಳ ಮಾಲೀಕರು. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹೀಗೆ ಸಮಗ್ರ ರಂಗಭೂಮಿಗೆ ಸಂಬಂಧಿಸಿದ ಸ್ಟೇಜ್, ಪ್ರಸಾಧನ, ವಸ್ತ್ರಾಲಂಕಾರ, ಬೆಳಕು, ಧ್ವನಿ, ಜನರೇಟರ್ ಸಮೇತವಾದ ಒಟ್ಟು ಸಂಚಾರಿ ನಾಟಕ ಕಂಪನಿ (ಕಲಾವಿದರ ಹೊರತು) ಅವರದು.
ಎಂಬತ್ತರ ದಶಕದಲ್ಲಿ ಪ್ರದರ್ಶನಗೊಂಡ ಚಿನ್ನದಗೊಂಬೆ, ರತ್ನ ಮಾಂಗಲ್ಯ, ಬಸ್ ಕಂಡಕ್ಟರ್, ಗೌಡ್ರಗದ್ಲ … ಈ ಎಲ್ಲ ನಾಟಕಗಳಲ್ಲಿ ಹೆಸರಾಂತ ಅಭಿನೇತ್ರಿ ಮತ್ತು ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಪ್ರಮೀಳಾ ಜೋಷಾಯ್, ತ್ರಿವೇಣಿ, ಆಶಾಲತಾ…ಹೀಗೆ ಅನೇಕ ಹೆಸರಾಂತ ಸಿನೆಮಾ ತಾರೆಯರು ನಮ್ಮ ಸ್ಥಳೀಯ ಕಲಾವಿದರೊಂದಿಗೆ ವಾರಗಟ್ಟಲೇ ಅಭಿನಯಿಸಿದ ರಂಗೇತಿಹಾಸ ನಮ್ಮ ಯಡ್ರಾಮಿಯದು.
ನಾನು ಕೂಡಾ ಮೆಟ್ರಿಕ್ ಓದುವಾಗ ” ಸುವರ್ಣ ” ಎಂಬ ಎಚ್.ಎನ್. ಹೂಗಾರರ ನಾಟಕದಲ್ಲಿ
ಹೀರೋಯಿನ್ ಪಾತ್ರ ಮಾಡಿರುವ ಕುತೂಹಲದ ಕತೆಯನ್ನು ಮತ್ತು ಈ ಊರಿನ ಯುವ ನಾಟಕಕಾರ ಮಲ್ಲಿಕಾರ್ಜುನ ಯಳಮೇಲಿ ಹಾಗೂ ಇತ್ತೀಚಿನ ರಂಗ ಚಟುವಟಿಕೆ ಕುರಿತು ಇನ್ನೊಮ್ಮೆ ಬರೆಯುವೆ.
-ಮಲ್ಲಿಕಾರ್ಜುನ ಕಡಕೋಳ