ರಷ್ಯಾ: ಇಡೀ ವಿಶ್ವವನ್ನೇ ಪ್ರಾಣ ಭೀತಿಗೆ ಒಳಪಡಿಸಿರುವ ಮಾರಕ ಖಾಯಿಲೆ ಕೊರೊನಾ ಸೋಂಕಿಗೆ ರಷ್ಯಾ ದೇಶದಲ್ಲಿ ಔಷಧಿ ಸಿದ್ದವಾಗಿದೆ.
ಈ ಬಗ್ಗೆ ಸ್ವತಃ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹೇಳಿಕೆ ನೀಡಿದ್ದು, ವಿಶ್ವದಲ್ಲೇ ರಷ್ಯಾ ದೇಶವೇ ಪ್ರಥಮವಾಗಿ ಕೊರೊನಾ ಸೋಂಕಿನ ಔಷದಿಗೆ ಅನುಮೋದನೆ ನೀಡಿರುವುದು ಎಂದು ತಿಳಿಸಿದ್ದಾರೆ. ಕೇವಲ 2 ತಿಂಗಳಲ್ಲೇ ಮನುಷ್ಯನ ಮೇಲಿನ ಪ್ರಯೋಗಗಳ ಮೂಲಕ ಈ ಯಶಸ್ಸು ಸಾಧ್ಯವಾಗಿದ್ದು, ತಮ್ಮ ಮಗಳು ಸಹ ಈ ಔಷದಿಯನ್ನು ಬಳಸಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಔಷದಿಯನ್ನು ಮಾಸ್ಕೋದ ಗಮೆಲಿಯಾ ಸಂಶೋಧನ ಸಂಸ್ಥೆ ಮತ್ತು ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿ ಪಡಿಸಿದ್ದು, ಸದ್ಯದಲ್ಲೆ ಅಪಾರ ಪ್ರಮಾಣದಲ್ಲಿ ಈ ಔಷದಿಯನ್ನು ಉತ್ಪಾದನೆ ಮಾಡುವಂತಹ ದೇಶ ಮುಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಔಷದಿಗೆ ರಷ್ಯಾ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯ, ಕೋವಿಡ್-19ಗೆ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಆಗಷ್ಟ 12ರಂದು ನೋಂದಣಿ ಮಾಡುತ್ತೇವೆ ಎಂದು ಕ್ಲಿನಿಕಲ್ ಟ್ರಯಲ್ನ(ಮುನುಷ್ಯನ ಮೇಲಿನ ಪ್ರಯೋಗ) ದತ್ತಾಂಶಗಳ ವರದಿಯನ್ನು ತಜ್ಞರ ಸಮಿತಿ ಪರಿಶೀಲಿಸುತ್ತಿದ್ದು, ಮಂಗಳವಾರ ಇದರ ವರದಿ ಲಭ್ಯವಾಗಲಿದೆ ಆದ್ದರಿಂದ ಆಗಷ್ಟ 12ರಂದ ಲಸಿಕೆ ನೋಂದಣಿ ಮಾಡಿಸಲಾಗುತ್ತದೆ ಎಂದು ತಿಳಿಸಿದೆ.
ಸೆಪ್ಟೆಂಬರ್ ವೇಳೆಗೆ ಈ ಲಸಿಕೆಯ ತಯಾರಿಕೆ ಕಾರ್ಯ ಆರಂಭವಾಗಲಿದ್ದು, ಅಕ್ಟೋಬರ್ ನಲ್ಲಿ ರೋಗಿಗಳಿಗೆ ನೀಡಲಾಗುತ್ತದೆ, 2021ರ ವೇಳೆಗೆ ದೇಶದ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಆರೋಗ್ಯ ಸಚಿವ ಮಿಖೇಲ್ ಮಿರಶಾಖೋ ಹೇಳಿದ್ದಾರೆ.
ಕೊರೊನಾ ಸೋಂಕಿಗೆ ರಷ್ಯಾ ಅಕ್ಷರಶಃ ನಲುಗಿದ್ದು, ಇದುವರೆಗೆ ರಷ್ಯಾದಲ್ಲಿ 8 ಲಕ್ಷದ 98 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದರು, ಅದರಲ್ಲಿ ಈಗಾಗಲೇ 7ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, 15,131 ಮಂದಿ ಬಲಿಯಾಗಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾ ಬಿಕ್ಕಟ್ಟನ್ನು ನಾಶಪಡಿಸಲು ಇದುವರೆಗೆ 100ಕ್ಕೂ ಹೆಚ್ಚು ಭರವಸೆಯ ಲಸಿಕೆ ತಯಾರಿಕೆ ಕಾರ್ಯ ನಡೆಯುತ್ತಿದ್ದು, ಸುಮಾರು ನಾಲ್ಕು ಲಸಿಕೆಗಳು ಮಾತ್ರ ಅಂತಿಮ ಹಂತದಲ್ಲಿವೆ.