ನಿರುದ್ಯೋಗದ ಸಮಸ್ಯೆಯ ವಿರುದ್ದ ದೇಶವ್ಯಾಪಿ ಸಹಿ ಸಂಗ್ರಹ ಅಭಿಯಾನ

3
68

ಕಲಬುರಗಿ: ಖಾಲಿ ಇರುವ ಸರಕಾರಿ  ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು, ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ (ಎ.ಐ.ಡಿ.ವೈ.ಓ.) ಜಿಲ್ಲಾ ಸಮಿತಿ ಇಂದು ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ AIDYO ಜಿಲ್ಲಾ ಉಪಾಧ್ಯಕ್ಷರಾದ ಭೀಮಾಶಂಕರ್ ಪಾಣೇಗಾಂವ್ ಮಾತನಾಡಿ, ಕಳೆದೆರಡು ವರ್ಷಗಳಿಂದ ದೇಶದ ಆರ್ಥಿಕತೆಯು ಅಧ:ಪತನದತ್ತ ಸಾಗಿದೆ. ಲಕ್ಷಾಂತರ ಸಣ್ಣಪುಟ್ಟ ಕೈಗಾರಿಕೆಗಳು, ವ್ಯಾಪಾರಗಳು ದೇಶದಾದ್ಯಂತ ಮುಚ್ಚಿವೆ. ಕೋಟ್ಯಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಕೆಟ್ಟ ಆರ್ಥಿಕತೆಯ ಆತಂಕಕಾರಿ ಸ್ಥಿತಿಯು ಕಣ್ಣಿಗೆ ರಾಚುವಂತೆ ಗೊತ್ತಾಗಿದೆ ಎಂದರು.

Contact Your\'s Advertisement; 9902492681

ಕೋಟ್ಯಾಂತರ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೆ ಮರಳಿದರು. ಒಟ್ಟು ಅಂದಾಜು ೧೧ ಕೋಟಿ ಜನ ಉದ್ಯೋಗ ಕಳೆದುಕೊಂಡರು. ಅವರಲ್ಲಿ ಅತಿ ಹೆಚ್ಚು ಜನರು ಯುವಕ-ಯುವತಿಯರು. ಇನ್ನೊಂದೆಡೆ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಶಿಕ್ಷಣ, ಆರೋಗ್ಯ, ಸಾರಿಗೆ, ವಸತಿ ಮುಂತಾದ ಮೂಲಭೂತ ವಲಯಗಳಲ್ಲೇ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಖಾಯಂ ಸ್ವರೂಪದ  ಹುದ್ದೆಗಳಿರುವಲ್ಲಿಯೂ ’ದಿನಗೂಲಿ, ಗುತ್ತಿಗೆ, ಅತಿಥಿ’ಯಂತಹ ರೀತಿಯಲ್ಲಿ ನಿರುದ್ಯೋಗಿಗಳನ್ನು ನೇಮಿಸಿಕೊಂಡು ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಮೋಸ ಮಾಡಲಾಗುತ್ತಿದೆ.ಇದು ಈ ದೇಶದ ಇಂದಿನ ಹೀನಾಯ ಪರಿಸ್ಥಿತಿಯಾಗಿದೆ ಎಂದರು.

ಇದನ್ನೂ ಸಹ ಓದಿ: ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಹಕ್ಕೊತ್ತಾಯ, ಕಲಬುರಗಿಯಲ್ಲಿ ಯುವಜನ ಹಕ್ಕಿನ ಮೇಳ ಕಲರವ

ಅಚ್ಚೆ ದಿನ್ಗಳ ಆಸೆ ತೋರಿಸಿ, ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಕೇಂದ್ರ ಸರ್ಕಾರವು ೬ ವರ್ಷಗಳಲ್ಲಿ ದೇಶದ ಜನತೆಯ ಎಲ್ಲ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಕೇವಲ ಕಾರ್ಪೋರೇಟ್ ಮನೆತನಗಳ ಸೇವೆ ಮಾಡುತ್ತಾ ಆ ಬಂಡವಾಳಿಗರ ಲಾಭವನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಉದ್ದಿಮೆಗಳನ್ನೂ ಖಾಸಗಿ ಒಡೆತನಕ್ಕೆ ಮಾರಾಟ ಮಾಡಲಾಗುತ್ತಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ನೌಕರರನ್ನು ಹೊಂದಿರುವ ಭಾರತೀಯ ರೈಲ್ವೆ, ಬಿಪಿಸಿಎಲ್, ಬಿಎಸ್ಎನ್ಎಲ್, ಇತ್ಯಾದಿಗಳು ಅಂತಹ ಕೆಲವು ಉದಾಹರಣೆಗಳು. ಕೈಗಾರಿಕೆಗಳು ನೆಲಕಚ್ಚಿರುವ ಇಂದಿನ ಕರಾಳ ಆರ್ಥಿಕ ಪರಿಸ್ಥಿತಿಯಲ್ಲಿ, ವಾರ್ಷಿಕ ಲಕ್ಷಾಂತರ ಕೋಟಿ ರೂ. ವ್ಯವಹಾರ ನಡೆಯುವ ಕೃಷಿ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತ ಮಾಡಲು ಕೇಂದ್ರ ಸರ್ಕಾರವು ಮೂರು ಕರಾಳ ಕಾಯ್ದೆಗಳನ್ನು ಜಾರಿಗೊಳಿಸಿದೆ. ದೇಶದ ಶೇ.೬೦ರಷ್ಟು ಜನರ ಬದುಕಾದ ಕೃಷಿಕ್ಷೇತ್ರವನ್ನು ಕಾರ್ಪೋರೇಟ್ ಮನೆತನಗಳ ಕೈಗಿಡುವ ಕಾಯ್ದೆ ಆಗಿವೆ ಅಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಈ ಸಮಸ್ಯೆಗಳ ವಿರುದ್ಧ ಯುವಜನತೆ ಹೋರಾಟ ಮಾಡಬಾರದೆಂದು ಅವರನ್ನು ಜಾತಿ, ಮತ, ಧರ್ಮ, ಭಾಷೆಗಳ ಹೆಸರಲ್ಲಿ ಒಡೆಯಲಾಗುತ್ತಿದೆ. ಇನ್ನೊಂದೆಡೆ ಅಶ್ಲೀಲ ಸಿನೆಮಾ-ಸಾಹಿತ್ಯಗಳಲ್ಲಿ ಮುಳುಗಿಸಿ ದಾರಿ ತಪ್ಪಿಸಲಾಗುತ್ತಿದೆ. ಆದರೆ ನಾವು ನಮ್ಮನ್ನು ಆಳುತ್ತಿರುವವರ ಆ ಕುತಂತ್ರಗಳಿಗೆ ಬಲಿಯಾಗಬಾರದು. ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿಗಳಾದ ಭಗತ್ಸಿಂಗ್, ನೇತಾಜಿ, ಆಜಾದ್, ಅಶ್ಫಾಕುಲ್ಲಾ ಖಾನ್, ಖುದಿರಾಮ್ ಬೋಸ್ ಅಂತಹವರ ನಿಜವಾದ ಉತ್ತರಾಧಿಕಾರಿಗಳಾಗಿ ಇಂದಿನ ನಮ್ಮ ಸಮಸ್ಯೆಗಳ ವಿರುದ್ಧ ನಾವು ಪ್ರಬಲ ಹೋರಾಟಕ್ಕೆ ಸಜ್ಜಾಗಬೇಕು. ಆ ನಿಟ್ಟಿನಲ್ಲಿ  ಎ.ಐ.ಡಿ.ವೈ.ಓ ಕಲಬುರಗಿ ಜಿಲ್ಲಾ ಸಮೀತಿಯು  ಯುವಜನರನ್ನು ಸಂಘಟಿಸುತ್ತಿದೆ. ಹಾಗೂ ದೇಶಾದ್ಯಂತ ಯುವಜನ ಹೋರಾಟವನ್ನು ಬೆಳೆಸುತ್ತಿದೆ. ನೀವೂ ಇದರೊಂದಿಗೆ ಕೈ ಜೋಡಿಸಿ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ನೀವು ಸೇರಿಕೊಳ್ಳಿ ಎಂದು ಮನವಿ ಮಾಡಿದರು.

ಇದನ್ನೂ ಸಹ ಓದಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಬಸ್ ಓಡಿಸಿ

ಕಾರ್ಯಕ್ರಮದ ಉದ್ಘಾಟನೆಯನ್ನು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಜಗಪ್ಪ ತಳವಾರ ಚಾಲನೆ ನೀಡಿ ಮಾತನಾಡಿದರು. ಅತಿಥಿಗಳಾಗಿ ಅತಿಥಿ ಉಪನ್ಯಾಸಕರ  ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣಿವೀರಪ್ಪ ಬೋಳೇವಾಡ  ಆಗಮಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ನಿಂಗಣ್ಣ ಜಂಬಗಿ, ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್ ಎಚ್. ಉಪಾಧ್ಯಕ್ಷರಾದ ಸಿದ್ದು ಚೌಧರಿ, ಶರಣು ವಿ.ಕೆ. ಹಾಗೂ ಸದ್ಯಸರುಗಳಾದ ಮಲ್ಲಿನಾಥ ಹುಂಡೇಕಲ್, ಪ್ರವೀಣ ಬಣಮಿಕರ,  ಪುಟ್ಟರಾಜ ಲಿಂಗಶೆಟ್ಟಿ, ನೀಲಕಂಠ ಹುಲಿ, ಶಿವಗಣೇಶ ಮಾಳಾ, ನಾಗಮೂರ್ತಿ ಬಡಿಗೇರ, ಈಶ್ವರ.ಇ.ಕೆ, ಸೇರಿದಂತೆ ಹಲವಾರು ವಿದ್ಯಾರ್ಥಿ ಯುವಜನರು ಭಾಗವಹಿಸಿದರು.

3 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here