ಕಲಬುರಗಿ: ಅನ್ನಭಾಗ್ಯದ ಅಕ್ಕಿ ಹಾಲಿನ ಪೌಡರ್ ಖರೀದಿ ವ್ಯವಹಾರಕ್ಕೆ ಸಂಬಂದಿಸಿದಂತೆ ಕ್ರಿಮಿನಲ್ ಹಿನ್ನೆಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆದ್ದರೆ ನಿಮ್ಮ ಮಕ್ಕಳೆಲ್ಲ ಜೈಲು ಬೇಲು ಅಂತ ಓಡಾಡಿಕೊಂಡಿರಬೇಕಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿ ನಾನು ಗೆದ್ದರೆ ಅಭಿವೃದ್ಧಿ ಜತೆಗೆ ಮಕ್ಕಳ ಉಜ್ವಲ ಭವಿಷ್ಯ ಕಾಣಬಹುದು. ಯಾರು ಗೆದ್ದರೆ ಒಳ್ಳೆಯದಾಗುತ್ತದೋ ನೀವೇ ತೀರ್ಮಾನಿಸಿ ಓಟ್ ಕೊಡಿ ಎಂದು ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಚಿತ್ತಾಪುರ ಕ್ಷೇತ್ರದ ರಾಂಪೂರಹಳ್ಳಿ, ಶಾಂಪೂರಹಳ್ಳಿ, ತರ್ಕಸ್‍ಪೇಟೆ, ಮಾರಡಗಿ, ಸುಗೂರ (ಎನ್), ನಾಲವಾರ, ಕುಲಕುಂದ, ಬಳವಡಗಿ ಗ್ರಾಮಗಳಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಹತ್ತು ವರ್ಷದ ನನ್ನ ಅಧಿಕಾರವಧಿಯಲ್ಲಿ ಯಾವೊಬ್ಬ ಗುತ್ತಿಗೆದಾರನ ಬಳಿ ಒಂದು ಕಪ್ ಚಹಾ ಕುಡಿದಿಲ್ಲ. ಭ್ರಷ್ಟಾಚಾರ ನನ್ನ ರಕ್ತದಲ್ಲೇ ಇಲ್ಲ.
ನ್ನದೇನಿದ್ದರೂ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ, ಸಂಕಷ್ಟದಲ್ಲಿರುವ ಜನರ ಪ್ರಗತಿ, ಸರ್ಕಾರದಿಂದ ಮೂರುಸಾವಿರ ಕೋಟಿ ರೂ. ಅನುದಾನ ತಂದು ಕ್ಷೇತ್ರದ ಪ್ರತಿ ಗ್ರಾಮಕ್ಕೂ ನೀಡಿದ್ದೇನೆ. ಚುನಾವಣೆ ಬಂದಿದ್ದರಿಂದ ಗುತ್ತಿಗೆದಾರರಿಂದ ಶೇ.40 ಕಮಿಷನ್ ಹೊಡೆದ ಕಳ್ಳರು, ಒಳ್ಳೆಯ ದಿನಗಳ ಭರವಸೆ ಕೊಟ್ಟ ಸುಳ್ಳರು, ಸರ್ಕಾರಿ ನೌಕರಿಗಳನ್ನು ಮಾರಿಕೊಂಡ ಭ್ರಷ್ಟರು ಮತ ಕೇಳಲು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅವರ ಮಾತಿಗೆ ಬೆಲೆ ನೀಡದೆ ಛೀಮಾರಿ ಹಾಕಿ ಕಳಿಸಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಮುಖಂಡರಾದ ಭಾಗಣ್ಣಗೌಡ ಸಂಕನೂರ, ವೀರಣ್ಣಗೌಡ ಪರಸರೆಡ್ಡಿ, ಶರಣು ವಾರದ್, ಬಸವರಾಜ ಸಜ್ಜನ್, ಶರಣಗೌಡ ನಾಗರೆಡ್ಡಿ, ಬಸವರಾಜ ಕ್ವಾಟಗೇರಿ, ಮಹ್ಮದ್ ಮಹೆಬೂಬ, ಶಂಕರ ಜಾಧವ, ಬಾಳು ಚವ್ಹಾಣ, ಗುಂಡುಗೌಡ ಪಾಟೀಲ, ಮಲ್ಲಿಕಾರ್ಜುನ ಶೆಳ್ಳಗಿ, ಬಸವರಾಜ ನಾಲವಾರ, ಭೀಮರಾಯ ಮಲಕಪ್ಪನಳ್ಳಿ, ಸಿದ್ದಣ್ಣ ನಿಡಾಲ್, ರಾಮಲಿಂಗ ಮನಗೂಳಿ, ಭದ್ರರಂಗ ರಾಠೋಡ, ವಿಠ್ಠಲ್ ರಾಠೋಡ, ಜೀತೇಂದ್ರ ಪವಾರ, ಗೋವಿಂದ ಮತ್ತಿತರರು ಪಾಲ್ಗೊಂಡಿದ್ದರು.