ರಾಯಚೂರು: ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಮಧು ಪತ್ತಾರ್ ಸಾವು ಕೊಲೆ ಎಂದು ಪೋಷಕರು ದೂರು ನೀಡಿದ ಹಿನ್ನಲೆ ಸುದರ್ಶನ್ ತಂದೆ ಬಜಾರಪ್ಪ (23) ಎಂಬ ಯುವಕನನನ್ನು ಸದಾರ್‌ಬಜಾರ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ನಗರದ ಮಾಣಿಕಪ್ರಭು ಬೆಟ್ಟ ಪ್ರದೇಶದ ಉಸುಕಿನ ಹನುಮಪ್ಪ ದೇವಸ್ಥಾನದ ಹಿಂಬದಿಯ ಹೊಲವೊಂದರಲ್ಲಿ 21 ವರ್ಷದ ವಿದ್ಯಾರ್ಥಿನಿ ಮಧು ಪತ್ತಾರ ದೇಹ ಪತ್ತೆಯಾಗಿತ್ತು. ಅನುಮಾನದ ಆಧಾರದ ಮೇಲೆ ಸುದರ್ಶನ್ ಎಂಬ ಯುವಕನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ನಿನ್ನೆ ಸಂಜೆ ಈತನನ್ನು ಬಂಧಿಸಲಾಗಿದೆ. ಮಧು ಪತ್ತಾರ ಪೋಷಕರು ಸುದರ್ಶನ ಎಂಬ ಯುವಕ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆಂಬ ದೂರಿನ ಆಧಾರದ ಮೇಲೆ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.
ನಗರದ ತಿಮ್ಮಾಪೂರು ಪೇಟೆ ಕಾಲೋನಿಯಲ್ಲಿ ವಾಸವಾಗಿರುವ ಈತ ಮಧು ಪತ್ತಾರ ಜೊತೆ ಪ್ರೀತಿಯಲ್ಲಿದ್ದ. ಸುಮಾರು 7 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಇತ್ತೀಚಿಗೆ ಕೆಲ ಭಿನ್ನಾಭಿಪ್ರಾಯದಿಂದ ಜಗಳವಾಡಿಕೊಂಡಿದ್ದರು ಎಂಬ ಸುದ್ದಿ ತನಿಖೆಯಲ್ಲಿ ಬಯಲಾಗಿದೆ ಎಂದು ಮೂಲಗಳು ತಿಳಿಸಿದೆ.
ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಂತರ ಮಧು ಪತ್ತಾರ ಸಿವಿಲ್ ಇಂಜಿನಿಯರಿಂಗ್ ಮಾಡಲು ನಗರದ ನವೋದಯ ಕಾಲೇಜಿನಲ್ಲಿ ಪ್ರವೇಶ ಪಡೆದಳು. ಸುದರ್ಶನ್ ಪಿಯುಸಿ ನಂತರ ಬಿ.ಕಾಮ್ ಪದವಿಯಲ್ಲಿ ಓದುತ್ತಾ ನೀರಿನ ಟ್ಯಾಂಕರ್ ವ್ಯವಹಾರ ನಡೆಸುತ್ತಿದ್ದ. ಮನೆ-ಮನೆಗೆ ನೀರಿನ ಸರಬರಾಜಿನಲ್ಲಿ ತೊಡಗಿಕೊಂಡಿದ್ದ ಈತ ಮಧು ಪತ್ತಾರ ಜೊತೆ ಪ್ರೀತಿಯ ಅಭಿನಾಭಾವ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಇತ್ತೀಚಿನ ಭಿನ್ನಾಭಿಪ್ರಾಯ ಮತ್ತು ಮಧುಪತ್ತಾರ ಸಂಶಯಾಸ್ಪದ ಸಾವಿನ ಜಾಡು ಹಿಡಿದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿವಿಲ್ ಇಂಜಿನಿಯರ್ ಓದಿ ಉನ್ನತ ಹುದ್ದೆ ಕನಸು ಹೊಂದಿದ್ದ ಮಧು ಪತ್ತಾರ ಅನುಮಾನಾಸ್ಪದ ಸಾವಿನ ಹಿಂದಿನ ಕಾರಣಗಳೇನು ಎಂಬುವುದನ್ನು ಪತ್ತೆ ಹಚ್ಚಬೇಕಾಗಿದೆ.
ಈಗಾಗಲೇ ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರೋಪಿಗಳ ಪತ್ತೆಗೆ ವ್ಯಾಪಕ ಆಗ್ರಹ ಕೇಳಿಬಂದಿದೆ. ಜಸ್ಟಿಸ್ ಫಾರ್ ಮಧು ಎಂಬ ಘೋಷಣೆಯಡಿ ಕಳೆದ ೨ ದಿನಗಳ ಹಿಂದಿನಿಂದ ಹಲವು ಗಣ್ಯವ್ಯಕ್ತಿಗಳು ಮಧು ಸಾವಿನ ಹಿಂದಿನ ನಿಖರತೆಯ ಬಗ್ಗೆ ಧ್ವನಿ ಎತ್ತಿದ್ದು, ಕನ್ನಡ ನಟರು ಸಹ ಸಾವಿನ ಹಿಂದಿನ ವ್ಯಕ್ತಿಗಳನ್ನು ಬಂಧಿಸಲು ಆಗ್ರಹಿಸುತ್ತಿದ್ದಾರೆ.
ಕನ್ನಡ ನಟ ವಶಿಷ್ಟ ಸಿಂಹಾ ತಮ್ಮ ಇನ್ಸ್‌ಟೋಗ್ರಾಮ್‌ನಲ್ಲಿ ಜಸ್ಟಿಸ್ ಫಾರ್ ಮಧು ಎಂಬ ಘೋಷಣೆಯನ್ನು ಹಾಕಿ ಆರೋಪಿಗಳ ಬಂಧನ ಮತ್ತು ಶಿಕ್ಷೆಗೆ ಆಗ್ರಹಿಸಿದ್ದ ಅವರು ಇಂದು ಬಂಧನದ ವಿಷಯ ತಿಳಿದು ಪಿಎಸ್‌ಐ ಉಮೇಶ ಕಾಂಬ್ಳೆರಿಗೆ ಧನ್ಯವಾದ ತಿಳಿಸಿದ್ದಾರೆ.
ನಿರ್ದೇಶಕ ಸಿದ್ದಾರ್ಥ ಮರಡಪ್ಪ ಅವರು ಕೂಡ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಜಸ್ಟಿಸ್ ಫಾರ್ ಮಧು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.