ಸ್ಲಂ ನಿವಾಸಿಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ; ವಸತಿ ಸಚಿವ ಜಮೀರ್ ಆಹ್ಮದ್ ಖಾನ್

0
9

ಕಲಬುರಗಿ: ಸ್ಲಂ ಜನರಿಗೆ ಉಚಿತ ಮನೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ಸ್ಲಂ ಜನರ ಜನತಾ ದರ್ಶನ ಹಾಗೂ ಖಾಸಗಿ ಕೊಳಚೆ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಸಂಘಟನೆ ಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ನಿರ್ಧಾರ.

ರಾಜ್ಯದ ಕೊಳಗೇರಿ ನಿವಾಸಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಲಂ ಸಂಘಟನೆಗಳ ಹಕ್ಕೋತ್ತಾಯಗಳ ಕುರಿತು ದಿನಾಂಕ 18/8/2023 ರಂದು ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ವಸತಿ ಸಚಿವರಾದ ಬಿ.ಜೆ?ಡ್ ಜಮೀರ್ ಆಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.

Contact Your\'s Advertisement; 9902492681

ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ, ದಲಿತ ಸಮರ ಸೇನೆ ಮತ್ತು ಸ್ಲಂ ಜನರ ಸಂಘಟನೆ ಯಿಂದ ಸಲ್ಲಿಕೆಯಾದ ಹಕ್ಕೋತ್ತಾಯಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ವಸತಿ ಸಚಿವರು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮುಂದಿನ 5 ವರ್ಷದಲ್ಲಿ ವರ್ಷಕ್ಕೆ 3 ಲಕ್ಷದಂತೆ 15 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಿದೆ. ಈಗಾಗಲೇ ಕಾರ್ಯದೇಶ ನೀಡಿರುವ ಪ್ರಧಾನಮಂತ್ರಿ ಅವಾಸ್ ಯೋಜನೆಯ ಮನೆಗಳನ್ನು ಪೂರ್ಣಗೊಳಿಸಿ 2024ರ ಸಾಲಿನ ಆರ್ಥಿಕ ವರ್ಷದಿಂದ ಆರ್ಥಿಕವಾಗಿ ಹಿಂದುಳಿದಿರುವ ಸ್ಲಂ ಜನರಿಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ಮನೆ ಕೊಡಲು ಸರ್ಕಾರ ಚಿಂತಿಸಿದೆ. ಅದೇ ರೀತಿ ಮುಂದಿನ ವರ್ಷದಲ್ಲಿ ಕೊಳಗೇರಿಗಳ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ 400 ಕೋಟಿ ರೂಗಳನ್ನು ಸಿ.ಎಂ ಬಜೆಟ್‍ನಲ್ಲಿ ನೀಡಲು ಒಪ್ಪಿದ್ದಾರೆ.

ಈಗಾಗಲೇ ಹಕ್ಕುಪತ್ರ ವಿತರಣೆ ಮಾಡಿರುವ ಕುಟುಂಬಗಳು ಸೇರಿದಂತೆ 3.36 ಲಕ್ಷ ಕುಟುಂಬಗಳಿಗೆ ನೋಂದಣಿ ಮಾಡಿ ಶುದ್ಧಕ್ರಯ ಪತ್ರವನ್ನು 6 ತಿಂಗಳ ಒಳಗೆ ನೀಡಲು ಆದೇಶ ಮಾಡಲಾಗುವುದು ರಾಜ್ಯದಲ್ಲಿರುವ 709 ಖಾಸಗಿ ಒಡೆತನದ ಕೊಳಚೆ ಪ್ರದೇಶಗಳ ವಾಸ್ತವ ವರದಿ ಸಿದ್ದಗೊಳಿಸಿ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು ಮತ್ತು ಖಾಸಗಿ ಕೊಳಚೆ ಪ್ರದೇಶಗಳನ್ನು ಘೋಷಿಸುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದು ಈ ಆದೇಶ ಹಿಂಪಡೆದು ಸ್ಲಂ ಕಾಯಿದೆ ಪ್ರಕಾರ ಘೋಷಣೆ ಮಾಡಲಾಗುವುದೆಂದರು.

ಸ್ಲಂ ನಿವಾಸಿಗಳ ಸಮಸ್ಯೆ ಪರಿಹರಿಸಲು ತಿಂಗಳಿಗೊಂದು ಜಿಲ್ಲಾ ಮಟ್ಟದಲ್ಲಿ ಸ್ಲಂ ಜನರ ಜನತಾ ದರ್ಶನ ಮಾಡಿ ಸ್ಲಂ ವೀಕ್ಷಣೆ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ದೊರಕಿಸಿಕೊಡಲಾಗುವುದು. 2018ರಲ್ಲಿ ಸ್ಲಂ ಅಭಿವೃದ್ಧಿ ಸಮಗ್ರ ಕಾಯಿದೆಯ ಕರಡನ್ನು ಆಗಿನ ಸರ್ಕಾರ ಸ್ವೀಕರಿಸಿದ್ದು ಈ ಕರಡನ್ನು ಪರಿಶೀಲಿಸಿ ಸರ್ಕಾರದಿಂದ ಅನುಮೋದನೆ ದೊರಕಿಸಿಕೊಡಲಾಗುವುದು. ಹಾಗೂ 2023ರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಯಂತೆ ನಿವೇಶನ ರಹಿತರಿಗೆ ಕುಟುಂಬಕ್ಕೊಂದು ಸೂರು, ವಸತಿ ಸಬ್ಸಿಡಿ ಹೆಚ್ಚಳ ಸೇರಿದಂತೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಸ್ಲಂ ಜನರ ಸಮಾವೇಶ ಮಾಡಲಾಗುವುದೆಂದರು.

ಸ್ಲಂ ಜನಾಂದೋಲನಾ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಮಾತನಾಡಿ ಇಡೀ ರಾಜ್ಯದಲ್ಲಿ 1 ಕೋಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಪಾಲು ನೀಡಬೇಕು, ಪ್ರಧಾನ್ ಮಂತ್ರಿ ಅವಾಸ್ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರದ ವಿಷಯ ಸೂಚಿಯಾದ ಭೂಮಿ ಮತ್ತು ವಸತಿಗೆ ಮುಖ್ಯಮಂತ್ರಿಗಳ ವಸತಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ನಿವೇಶನ ರಹಿತರ ಸಮಗ್ರ ಪರಿಹಾರಕ್ಕೆ ಪ್ರತಿ ಜಿಲ್ಲೆಯಲ್ಲಿ 500 ಎಕರೆ ಭೂಮಿಯನ್ನು ಮೀಸಲಿಡುವ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸಬೇಕು.

ಇಡೀ ದೇಶಕ್ಕೆ ಮಾದರಿಯಾಗುವ ವಸತಿ ಹಕ್ಕು ಕಾಯಿದೆಯನ್ನು ಜಾರಿಗೆ ತರಬೇಕು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಾಂಬೇ ಮಾದರಿಯ ಎಸ್.ಆರ್.ಎ ಅಭಿವೃದ್ಧಿಯನ್ನು ಅನುಷ್ಠಾನಕ್ಕೆ ತರಬಾರದು. ಹಾಗೆಯೇ ರಾಹುಲ್ ಗಾಂಧಿಯವರ ಆಕಾಂಕ್ಷೆಯಂತೆ ರಾಷ್ಟ್ರೀಯಾ ಕಾನೂನು ಶಾಲೆಯಿಂದ 2018ರಲ್ಲಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಕರ್ನಾಟಕ ಸ್ಲಂ ಅಭಿವೃದ್ಧಿ ಕಾಯಿದೆಯ (2018) ಮರು ಪರಿಶೀಲನೆಗೆ ಮತ್ತೊಮ್ಮೆ ವಸತಿ ಇಲಾಖೆಯಿಂದ ರಾಷ್ಟ್ರೀಯ ಕಾನೂನು ಶಾಲೆಗೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದರು.

ದಲಿತ ಸಮರ ಸೇನೆಯ ರಾಜ್ಯಾಧ್ಯಕ್ಷ ಎಸ್.ಗಣೇಶ್ ಮಾತನಾಡಿ ಸ್ಲಂ ಬೋಡ್ನಿರ್ಂದ ವಿಶೇಷ ಪ್ರವರ್ಗಗಳ ಮನೆ ನಿರ್ಮಿಸಿಕೊಡಬೇಕು ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ 50 ಎಕರೆ ಭೂಮಿ ನೀಡಬೇಕು. ವಸತಿ ವೆಚ್ಚವನ್ನು ಹೆಚ್ಚಿಸಬೇಕೆಂದರು ಸಾವಿತ್ರಿ ಬಾಪುಲೆ ಸಂಘಟನೆಯ ಚಂದ್ರಮ್ಮ ಮಾತನಾಡಿ ಬೆಂಗಳೂರಿನಲ್ಲಿ ನೆಲಬಾಡಿಗೆ ಸ್ಲಂಗಳಿಗೆ ಸರ್ಕಾರದಿಂದ ನೀತಿ ರೂಪಿಸಬೇಕು. ಸ್ಲಂ ನಿವಾಸಿಗಳಿಗೆ ಪ್ರತ್ಯೇಕವಾದ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೊಳಚೆ ಪ್ರದೇಶಗಳ ಘೋಷಣೆಯನ್ನು ಚುರುಕುಗೊಳಿಸಬೇಕೆಂದರು.

ಸಭೆಯಲ್ಲಿ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಗೃಹ ಮಂಡಳಿ ಆಯುಕ್ತೆ ಕವಿತಾ ಮನ್ನಿಗೇರಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ವೆಂಕಟೇಶ್, ತಾಂತ್ರಿಕ ನಿರ್ದೇಶಕರಾದ ಬಾಲ್‍ರಾಜ್ ಸೇರಿದಂತೆ ಇತರೆ ಅಧಿಕಾರಿ ವರ್ಗದವರಿದ್ದರು.

ಪರ್ಯಾಯ ಕಾನೂನು ವೇದಿಕೆಯ ವಿನಯ್ ಶ್ರೀನಿವಾಸ್, ಹೈಕೋರ್ಟ್ ವಕೀಲರಾದ ಮೈತ್ರಿಕೃಷ್ಣನ್, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಇಮ್ತಿಯಾಜ್, ಸಂಘಟನಾ ಸಂಚಾಲಕರಾದ ಜರ್ನಾಧನ್ ಹಳ್ಳಿಬೆಂಚಿ, ಜಿಲ್ಲಾ ಸಂಚಾಲಕರಾದ ಕಲ್ಬುರ್ಗಿಯ ಅಲ್ಲಮಪ್ರಭು, ಯಾದಗಿರಿಯ ರೇಣುಕ ಸರಡಗಿ, ದಾವಣಗೆರೆಯ ರೇಣುಕಾ ಎಲ್ಲಮ್ಮ, ಹುಬ್ಬಳ್ಳಿಯ ಶೋಭ ಕಮತಾರ್, ಹೊಸಪೇಟೆಯ ವೆಂಕಮ್ಮ, ಬಳ್ಳಾರಿಯ ಶೇಖರ್ ಬಾಬು, ಚಿತ್ರದುರ್ಗದ ಮಂಜಣ್ಣ, ತಮಕೂರಿನ ಅರುಣಾ, ಶಿರಾ ನಗರದ ತಿರುಮಲಯ್ಯ, ಬೆಂಗಳೂರಿನ ಮಂಜುಬಾಯಿ, ತೇಜಸ್ ಕುಮಾರ್ ಮತ್ತು ರಾಮಕೃಷ್ಣಯ್ಯ ಸೇರಿದಂತೆ ಸಾಧನಾ ಮಹಿಳಾ ಸಂಘದ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here