ಸಂಘಟಕರಿಂದಲೇ ಬೆದರಿಕೆ: ವಾಡಿ ಪೌರಕಾರ್ಮಿಕರ ಆರೋಪ

0
321
ಎರಡು ದಶಕಗಳಿಂದ ಪದಾಧಿಕಾರಿಗಳು ಬದಲಾಗಿಲ್ಲ: ಶೋಷಣೆ ತಪ್ಪಿಲ್ಲ

ವಾಡಿ: ಮಾಸಿಕ ವೇತನ, ಉಪಹಾರ, ಸುರಕ್ಷಾ ಸಲಕರಣೆ ಸೇರಿದಂತೆ ಸರ್ಕಾರದಿಂದ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ನ್ಯಾಯಯುತವಾಗಿ ಒದಗಿಸಿಕೊಡಿ ಎಂದು ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಮನವಿ ಮಾಡಿದರೆ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇನ್ನೊಮ್ಮೆ ಸಮಸ್ಯೆಗಳ ಕುರಿತು ದೂರು ನೀಡಲು ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಚಿತ್ತಾಪುರ ತಾಲೂಕಿನ ಸಿಮೆಂಟ್ ನಗರಿ ವಾಡಿ ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.

“ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳಲ್ಲಿ ಶೇ.90 ರಷ್ಟು ಪೌರಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ಪೌರ ನೌಕರರ ಸಂಘ ರಾಜ್ಯಮಟ್ಟದಲ್ಲಿ ರಚನೆಯಾಗಿದೆ. ಸಂಘದ ಹೆಸರಿನಲ್ಲಿ ಯಾರಾದರೂ ಪೌರಕಾರ್ಮಿಕರಿಗೆ ಹೆದರಿಸುವುದಾಗಲಿ ಅಥವ ಶೋಷಣೆ ಮಾಡುವುದಾಗಲಿ ಮಾಡಿದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸಂಘದ ಪದಾಧಿಕಾರಿ ಎಂದು ಹೇಳಿಕೊಂಡು ಧರ್ಪ ಮೆರೆದರೆ ಪರಿಣಾಮ ನೆಟ್ಟಗಿರಲ್ಲ. ವಾಡಿ ಪುರಸಭೆಯ ಪೌರಕಾರ್ಮಿಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲು ಈಗಾಗಲೇ ಸೂಚಿಸಿದ್ದೇನೆ. ಹಳೆಯ ಪದಾಧಿಕಾರಿಗಳು ಸಂಘ ರಚನೆಗೆ ಅಡ್ಡಿಪಡಿಸುತ್ತಿದ್ದರೆ ನನಗೆ ತಿಳಿಸಬೇಕು. ಪೌರಕಾರ್ಮಿಕರು ಇಚ್ಚಿಸಿದರೆ ನಾನೇ ಬಂದು ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಡುತ್ತೇನೆ. ಅಥವ ಪೌರಕಾರ್ಮಿಕರೇ ಸಭೆ ನಡೆಸಿ ನೂತನ ಪದಾಧಿಕಾರಿಗಳ ಪಟ್ಟಿ ಕಳುಹಿಸಿದರೆ ಅನುಮೋದನೆ ನೀಡುವ ಮೂಲಕ ರಾಜ್ಯ ಸಮಿತಿಗೆ ಕಳಿಸುತ್ತೇನೆ. ಪೌರಕಾರ್ಮಿಕರು ಯಾರಿಗೂ ಹೆದರಬೇಕಿಲ್ಲ.” -ಗುರುಲಿಂಗಪ್ಪ ಸುಲೇಕರ, ಜಿಲ್ಲಾಧ್ಯಕ್ಷರು, ಪೌರ ನೌಕರರ ಸಂಘ ಕಲಬುರಗಿ.

ಈ ಕುರಿತು ಮಾಧ್ಯಮದವರಿಗೆ ಲಿಖಿತ ದೂರು ನೀಡಿರುವ ಸ್ಥಳೀಯ ಪುರಸಭೆಯ ಪೌರಕಾರ್ಮಿಕರು, ಪೌರಕಾರ್ಮಿಕ ಸಂಘದ ನಗರ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕಳೆದ 20 ವರ್ಷಗಳಿಂದ ವಾಡಿ ಪುರಸಭೆಯಲ್ಲಿ ಪೌರಕಾರ್ಮಿಕರ ಸಂಘ ಅಸ್ತಿತ್ವದಲ್ಲಿದೆ. ಇದಕ್ಕೆ ಚುನಾಯಿತ ಪ್ರತಿನಿಧಿಗಳಿದ್ದಾರೆ.

Contact Your\'s Advertisement; 9902492681

ಇಪ್ಪತ್ತು ವರ್ಷಗಳಿಂದ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲು ಕೂಡ ಇವರು ಅವಕಾಶ ನೀಡುತ್ತಿಲ್ಲ. ಹಳೆಯ ಪದಾಧಿಕಾರಿಗಳೇ ಅಧಿಕಾರದಲ್ಲಿ ಮುಂದು ವರೆಯುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಮೆರೆಯುವ ಮೂಲಕ ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ. ನಗರದ ವಿವಿಧ ಬಡಾವಣೆಗಳ ಸಾರ್ವಜನಿಕರ ಮನೆಯ ಕಸ, ಕಕ್ಕಸ ಬಳಿದು ವೃತ್ತಿ ಬದ್ಧತೆ ಮೆರೆಯುತ್ತಿರುವ ನಾವು ನಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಯಾರಿಗೂ ಹೇಳದಂತಹ ಭಯಭೀತ ಪರಸ್ಥಿತಿ ಸೃಷ್ಠಿಸಿದ್ದಾರೆ ಎಂದು ಮಾಲಿಗಳು ಅಳಲು ತೋಡಿಕೊಂಡಿದ್ದಾರೆ.

ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ಬೀದಿ ಕಸಗುಡಿಸುತ್ತೇವೆ. ಚರಂಡಿಗಳನ್ನು ಸ್ವಚ್ಚಗೊಳಿಸುತ್ತೇವೆ. ಮನೆ ಮನೆಯಿಂದ ಕಸ ಸ್ವೀಕರಿಸುತ್ತೇವೆ. ಘನತ್ಯಾಜ್ಯವನ್ನು ಸಘನೀಕರಣ ಮಾಡುತ್ತೇವೆ. ನೆರೆ ಹಾವಳಿ ಬಂದಾಗ ಚರಂಡಿಗಳಿದು ಬಡಾವಣೆಗಳ ಜಲಾವೃತ ಪರಸ್ಥಿತಿ ತಿಳಿಗೊಳಿಸುತ್ತೇವೆ. ಆದರೆ ನಮಗೆ ಪ್ರತಿ ತಿಂಗಳು ಸರಿಯಾಗಿ ವೇತನ ಸಿಗುತ್ತಿಲ್ಲ. ಬೆಳಗಿನ ಉಪಹಾರ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸಂಘದ ಪದಾಧಿಕಾರಿಗಳ ಮಗನಕ್ಕೆ ತಂದರೆ ಪರಹಾರ ಸಿಗುತ್ತಿಲ್ಲ. ಇದರಿಂದ ಬೇಸತ್ತು ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲು ತೀರ್ಮಾನಿಸಿ ಇತ್ತೀಚೆಗೆ ಸಭೆ ನಡೆಸಿದ್ದೇವೆ.

ವಿಷಯ ತಿಳಿದ ಸಂಘದ ಪದಾಧಿಕಾರಿಗಳು ನೇರವಾಗಿ ನಮಗೆ ಬೆದರಿಕೆಯೊಡ್ಡಿದ್ದಾರೆ. ಸಂಘದ ವಿರುದ್ಧ ಆರೋಪ ಮಾಡಿದರೆ ಅಥವ ಸಂಘವನ್ನು ಹೊಸದಾಗಿ ರಚಿಸಲು ಮುಂದಾದರೆ, ಬೇರೆ ಊರುಗಳಿಗೆ ವರ್ಗಾವಣೆ ಮಾಡುತ್ತೇವೆ. ವೈದ್ಯಕೀಯ ತಪಾಸಣೆ ಮಾಡಿಸಿ ಕೆಲಸಕ್ಕೆ ಅಸಮರ್ಥರು ಎಂದು ವರದಿ ಸಿದ್ಧಪಡಿಸಿ ಕೆಲಸದಿಂದಲೇ ವಜಾಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ.

ನಮ್ಮ ದುಸ್ಥಿತಿ ಯಾರಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಪೌರಕಾರ್ಮಿಕರು ಪತ್ರಿಕಾ ಪ್ರಕಟಣೆ ಮೂಲಕ ಮನದ ನೋವು ಹೇಳಿಕೊಂಡಿದ್ದಾರೆ. ಸಂಬಂದಿಸಿದ ಹಿರಿಯ ಅಧಿಕಾರಿಗಳು ಅಥವ ಚುನಾಯಿತ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಪೌರಕಾರ್ಮಿಕರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗುವಂತೆ ಕ್ರಮಕೈಗೊಳ್ಳುವ ಮೂಲಕ ಎರಡು ದಶಕಗಳ ಶೋಷಣೆಗೆ ಮುಕ್ತಿ ದೊರಕಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here