ಸುರಪುರ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಕೃಷ್ಣಾ ಎಡದೆಂಡೆ ಕಾಲುವೆಗೆ ನೀರು ಹರಿಸಲು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 14 ದಿನಗಳು ಕಾಲುವೆಗೆ ನೀರು ಹರಿಸುವುದು 10 ದಿನಗಳು ಬಂದ್ ಮಾಡುವ ಕುರಿತು ಕೈಗೊಂಡಿರುವ ನಿರ್ಣಯ ಅವೈಜ್ಞಾನಿಕವಾಗಿದೆ,ಆದ್ದರಿಂದ 14 ದಿನ ನೀರು ಹಸಿರುವುದು,7 ದಿನ ಬಂದ್ ಮಾಡುವ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಸಂಪೂರ್ಣ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು,ಇನ್ನೂ ತಾಲೂಕಿನಲ್ಲಿ ಅನೇಕ ದೊಡ್ಡಿಗಳು ಇಂದಿಗು ವಿದ್ಯುತ್ ಸಂಪರ್ಕ ಇಲ್ಲದೆ ಜನರು ವಾಸಿಸುವಂತಾಗಿದೆ,ಆ ಎಲ್ಲಾ ದೊಡ್ಡಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು,ಮತ್ತು ನೀರಾವರಿ ಸಲಹಾ ಸಮಿತಿ ಸಭೆಗೆ ರೈತ ಮುಖಂಡರನ್ನು ದೂರವಿಟ್ಟು ಸಭೆ ನಡೆಸಲಾಗುತ್ತಿದೆ,ರೈತರಿಗೂ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿಜಯಕುಮಾರ ಕೆ ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಎಸ್.ಬೇವಿನಾಳಮಠ,ತಾಲೂಕು ಅಧ್ಯಕ್ಷ ಹೆಚ್.ಆರ್.ಬಡಿಗೇರ,ಶಿವಲಿಂಗಯ್ಯಸ್ವಾಮಿ ಹುಣಸಗಿ,ಕಾಶಿಮ್ ವಜ್ಜಲ್,ಬಸವರಾಜ ಬೂದಿಹಾಳ,ವೆಂಕಟೇಶ ಕುಪಗಲ್,ಬಂದೇನವಾಜ ಯಾಳಗಿ,ಸಾಹೇಬಣ್ಣ ತಳವಾರ,ವಿಕ್ರಮ ನಾಯ್ಕೊಡಿ,ಬಲಭೀಮ ದೊರಿ,ಬಸವರಾಜ ಕಾರನೂರ,ಧನರಾಜ ಪಾಟೀಲ್,ವಿನಾಯಕ ಗೋನಾಲ,ಶರಣಗೌಡ ಪಾಟೀಲ್,ಚಾಂದಪಾಶ ಪರಸನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ತಹಸೀಲ್ದಾರರು ನೂತನವಾಗಿ ಆಗಮಿಸಿದ್ದರಿಂದ ಸನ್ಮಾನಿಸಿ ಕರ್ತವ್ಯಕ್ಕೆ ಶುಭ ಹಾರೈಸಿದರು.