ಕಲಬುರಗಿ; ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ ಅವಧಿಯಲ್ಲಿ ಒಕ್ಕೂಟ ಯಾವುದೇ ಪ್ರಗತಿ ಸಾಧಿಸಿಲ್ಲ ಆದರೂ ಕೇವಲ ಪ್ರಚಾರಕ್ಕಾಗಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಇವರ ಅವಧಿಯಲ್ಲಿ ಒಂದೇ ಒಂದು ಹೊಸ ಯೋಜನೆ ಜಾರಿಯಾಗಿಲ್ಲ. ಅವಶ್ಯಕತೆ ಇಲ್ಲದಿದ್ದರೂ ಗುತ್ತಿಗೆದಾರರ ಮೂಲಕ ತಮ್ಮ ಹಿಂಬಾಲಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದೇ ಇವರ ಸಾಧನೆ. ಹಾಲು ಉತ್ಪಾದಕರ ಸಂಘಗಳನ್ನು ಕೂಡ ತಮಗೆ ಬೇಕಾದ ಗ್ರಾಮಗಳಲ್ಲಿ ಸ್ಥಾಪನೆ ಮಾಡಲು ಅಧಿಕಾರಿಗಳ ತಂಡವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜಕೀಯ ಕಾರಣದಿಂದ ಹಲವು ಹಾಲು ಉತ್ಪಾದಕರ ಸಂಘಗಳನ್ನು ಮತದಾನ ಪ್ರಕ್ರಿಯೆಯಿಂದ ದೂರವಿಟ್ಟಿದ್ದಾರೆ. ಕೇವಲ ತಮಗೆ ಮತ ನೀಡುವ ಸಂಘಗಳನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಇರುವಂತೆ ಮಾಡಲು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ವ್ಯಂಗವಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಡೀ ರಾಜ್ಯದಲ್ಲಿ ಎಲ್ಲ ಹಾಲು ಒಕ್ಕೂಟಗಳು ತಾಲೂಕಿಗೊಂದು ನಿರ್ದೇಶಕ ಸ್ಥಾನ ನಿಗದಿ ಮಾಡಿದರೇ ಹಾಲಿ ಅಧ್ಯಕ್ಷ ಆರ್ ಕೆ ಪಾಟೀಲ ಮಾತ್ರ ತಾವೇ ಅಧ್ಯಕ್ಷರಾಗಿ ಮುಂದುವರಿಯಲು ತಮ್ಮ ವೈಯಕ್ತಿಕ ಅನೂಕೂಲಕ್ಕಾಗಿ ವಿಭಾಗವಾರು ಸ್ಥಾನ ಹಂಚಿಕೆ ಮಾಡಿಕೊಂಡು 4 ನಿರ್ದೇಶಕರ ಸ್ಥಾನ ತಮ್ಮ ತಾಲೂಕಿನಿಂದಲೇ ಆಯ್ಕೆಯಾಗುವಂತೆ ಹುನ್ನಾರ ಮಾಡಿದ್ದಾರೆ.
2023ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಯಾದಗಿರಿ ವಿಭಾಗಕ್ಕೆ ನಿಗದಿ ಮಾಡಿದ 3 ನಿರ್ದೇಶಕರ ಸ್ಥಾನಗಳು ಅಲ್ಲಿಂದ ಆಯ್ಕೆಯಾದರೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಅರಿತು ಹಣದ ಪ್ರಭಾವ ಮತ್ತು ಅಧಿಕಾರಿಗಳ ನೆರವಿನಿಂದ ಈ ವಿಭಾಗದಿಂದ ಒಂದೇ ನಿರ್ದೇಶಕ ಸ್ಥಾನ ಆಯ್ಕೆಯಾಗುವಂತೆ ಪ್ರಸ್ತಾವನೆ ಮತ್ತು ಅನುಮೋದನೆ ಪಡೆದಿರುತ್ತಾರೆ ಎಂದು ಆರೋಪಿಸಿದ್ದಾರೆ.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಆರ್ ಕೆ ಪಾಟೀಲರ ಅವಧಿಯಲ್ಲಿ ಅಕ್ರಮ ನೇಮಕಾತಿ ಮತ್ತು ಅವ್ಯವಹಾರ ಜರುಗಿದೆ. 2019ರಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಒಟ್ಟು 37 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೆಲವರು ಆ ನೇಮಕಾತಿಯ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಆದೇಶವನ್ನು ಪರಿಗಣಿಸಿ ಈ ಹಿಂದಿನ ಯಾವ ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಿರುವುದಿಲ್ಲ ಆದರೆ, ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ ಅವರು ಭೃಷ್ಟಾಚಾರ ಹಾಗೂ ಅಕ್ರಮ ನೇಮಕ ಮಾಡುವ ಉದ್ದೇಶದಿಂದಲೇ ನಿವೃತ್ತಿಗೆ ಕೇವಲ 3 ತಿಂಗಳು ಇದ್ದ ಅಧಿಕಾರಿ ಡಾ. ಸಿ ಎಚ್ ಕಮಕೇರಿಯವರನ್ನು 2023ರ ಮೇ ತಿಂಗಳಿನಲ್ಲಿ ಉದ್ದೇಶಪೂರ್ವಕಾಗಿ ಕರ್ನಾಟಕ ಹಾಲು ಮಂಡಳಿಯ ಮೇಲೆ ಒತ್ತಡ ಹೇರಿ ಅವರನ್ನು ಪುನ: ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕರೆದುಕೊಂಡು ಬಂದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿರುತ್ತಾರೆ ಎಂದು ದೂರಿದ್ದಾರೆ.
ಒಕ್ಕೂಟದ ಬೈಲಾದ ಪ್ರಕಾರ ನಿವೃತ್ತಿಗೆ 3 ತಿಂಗಳು ಅವಧಿ ಇರುವಾಗ ಯಾವುದೇ ಮಹತ್ತರ ಆದೇಶಗಳನ್ನು, ನೇಮಕಾತಿಗಳನ್ನು ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ ಆದರೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಆಗಿನ ಅಧ್ಯಕ್ಷ ಆರ್ ಕೆ ಪಾಟೀಲರ ಅವ್ಯವಹಾರಕ್ಕೆ ಸಹಕರಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದಾರೆ. ಇದು ಸ್ಪಷ್ಟವಾಗಿ ಒಕ್ಕೂಟದ ಬೈಲಾ ಹಾಗೂ ನ್ಯಾಯಾಲಯದ ರಿಟ್ ಆದೇಶದ ಉಲ್ಲಂಘನೆಯಾಗಿದೆ. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ ಎಚ್ ಕಮಕೇರಿಯವರು ಕರ್ತವ್ಯಕ್ಕೆ ಹಾಜರಾಗಿ ಮಾಡಿದ ಮೊದಲ ಕೆಲಸವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವುದು.
2019ರಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎಸ್‍ಎಂಎಸ್ ಮೂಲಕ ಪರೀಕ್ಷೆಯ ಮಾಹಿತಿ ನೀಡಿದ್ದು ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ. ಅಕ್ರಮ ನೇಮಕ ಮಾಡಿಕೊಳ್ಳುವ ಉದ್ದೇಶದಿಂದಲೇ ತಮಗೆ ಬೇಕಾದವರಿಗೆ ಫೋನ್ ಕರೆ ಮಾಡಿ ತಿಳಿಸಿರುತ್ತಾರೆ. ಎಸ್‍ಎಂಎಸ್ ಕಳುಹಿಸಿರುವುದರಿಂದ ಅರ್ಜಿ ಸಲ್ಲಿಸಿದ ಹಲವು ಅರ್ಹ ಅಭ್ಯರ್ಥಿಗಳು ಸಕಾಲಕ್ಕೆ ಮಾಹಿತಿ ಸಿಗದೇ ಇರುವುದರಿಂದ ನೇಮಕಾತಿ ಪ್ರಕ್ರಿಯೆಯಿಂದ ವಂಚಿತರಾಗಬೇಕಾಯಿತು.
ಈ ತರಾತುರಿಯ ಪ್ರಕ್ರಿಯೆಯಿಂದ ಅರ್ಜಿ ಸಲ್ಲಿಸಿದ ನೂರಾರು ಜನ ತಮಗೆ ನ್ಯಾಯಯುತವಾಗಿ ಸಿಗಬೇಕಿದ್ದ ನೌಕರಿಯಿಂದ ವಂಚಿತರಾಗಿದ್ದಾರೆ. ಅರ್ಜಿ ಕರೆದ 37 ಹುದ್ದೆಗಳಲ್ಲಿ ಕೇವಲ 27 ಹುದ್ದೆಗಳು ಭರ್ತಿಯಾಗಿವೆ ಇನ್ನೂ 10 ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿವೆ ಇದಕ್ಕೆ ಮುಖ್ಯ ಕಾರಣ ವ್ಯವಸ್ಥಾಪಕ ನಿರ್ದೇಶಕರು ತರಾತುರಿಯಲ್ಲಿ ಕೈಗೊಂಡ ನೇಮಕಾತಿ ಪ್ರಕ್ರಿಯೆ. ಈ ತರಾತುರಿಯ ಪ್ರಕ್ರಿಯೆಯಿಂದ ಹಲವು ಜನರಿಗೆ ಸರಿಯಾದ ಮಾಹಿತಿಯೇ ಸಿಕ್ಕಿಲ್ಲ ಅಲ್ಲದೇ ಸಿಕ್ಕಿರುವ ಅರ್ಧಂಬರ್ಧ ಮಾಹಿತಿಯಿಂದ ಹಲವು ಜನರಿಗೆ ಪರೀಕ್ಷೆಗೆ ಹೋಗುವುದಕ್ಕೆ ಆಗಿಲ್ಲ, ಕೆಲವು ಜನರಿಗೆ ಮಾಹಿತಿಯೇ ಮುಟ್ಟಿಲ್ಲ ಹೀಗಾಗಿ ಆ 10 ಹುದ್ದೆಗಳು ಖಾಲಿಯೇ ಉಳಿದಿವೆ. ನೇಮಕಾತಿಯಲ್ಲಿ ಎಲ್ಲರಿಗೆ ಮಾಹಿತಿ ನೀಡಿದ್ದೆವೆಂದು ತೋರಿಸಲು ನಂತರದಲ್ಲಿ ಒಂದು ರಿಜಿಸ್ಟರ್ ಕಾಯ್ದಿಟ್ಟುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಪರ್ಯಾಸವೆಂದರೆ ಪರೀಕ್ಷೆಯ ನಂತರ ಪ್ರಕಟವಾದ ಮೇರಿಟ್‍ನಲ್ಲಿ ಒಕ್ಕೂಟದಲ್ಲಿ ಕಳೆದ 10-15 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತು ಅಪಾರ ಪ್ರಮಾಣದ ಅನುಭವ ಹೊಂದಿರುವ ಹಾಗೂ ಇಂತಹ 5-6 ಪರೀಕ್ಷೆಗಳು ಬರೆದಿರುವ ಅಭ್ಯರ್ಥಿಗಳಿಗಿಂತ ಪರೀಕ್ಷೆಯಲ್ಲಿ ಖಾಲಿ ಪತ್ರಿಕೆ ನೀಡಿ ಬಂದಿರುವ ಮತ್ತು ಯಾವುದೇ ಅನುಭವ ಹೊಂದಿಲ್ಲದ ಅಭ್ಯರ್ಥಿಗಳು ಅತೀ ಹೆಚ್ಚು ಅಂಕ ಪಡೆದಿರುವುದು ಈಡೀ ನೇಮಕ ಪ್ರಕ್ರಿಯೆಯ ಮೇಲೆ ಅನುಮಾನ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷಾ ಸತ್ಯಾಸತ್ಯತೆ ಹೊರಬರಲು ಹಾಗೂ ಅರ್ಹ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಲು ಪರೀಕ್ಷೆ ನಡೆಸಿರುವ ಏಜೆನ್ಸಿ, ಪರೀಕ್ಷೆಯ ಉತ್ತರ ಪತ್ರಿಕೆಗಳು ಎಫ್‍ಎಸ್‍ಎಲ್ ಲ್ಯಾಬ್‍ನಲ್ಲಿ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಕೈಬರಹ ಸೇರಿದಂತೆ ಸೂಕ್ಷ್ಮ ವಿಚಾರಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಗೆ ಇದ್ದ ಮೂರು ಪ್ರಮುಖ ಮಾನದಂಡಗಳೆಂದರೆ ವಿದ್ಯಾರ್ಹತೆ, ಪರೀಕ್ಷೆಯಲ್ಲಿ ಪಡೆದಿರುವ ಅಂಕ ಮತ್ತು. ಅನುಭವ. ಆದರೆ ನೇಮಕಾತಿಯಲ್ಲಿ ಕಡಿಮೆ ಅಂಕ ಪಡೆದವರನ್ನು ಹೆಚ್ಚು ಅಂಕ ನೀಡಿ, ವಿದ್ಯಾರ್ಹತೆ ಇಲ್ಲದಿದ್ದರೂ ಅವರನ್ನು ಅರ್ಹರನ್ನಾಗಿ ಮಾಡಿ, ಹಣ ನೀಡಿ ತಂದ ಅನುಭವ ಪ್ರಮಾಣ ಪತ್ರಗಳನ್ನು ಸಂದರ್ಶನಕ್ಕೆ ಪರಿಗಣಿಸಿ ನೇಮಕ ಮಾಡಿಕೊಂಡಿರುತ್ತಾರೆ. ಅರ್ಹತೆ ಸೇರಿದಂತೆ ಇತರೆ ವಿಷಯಗಳ ಕುರಿತು ಅಧಿಕಾರಿಗಳು ಷರಾ ಬರೆದಿದ್ದಾರೆ ಈ ನಿಟ್ಟಿನಲ್ಲಿ ದಾಖಲಾತಿಗಳ ನೈಜ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಆಯ್ಕೆಯಾದ ಅನೇಕ ಅಭ್ಯರ್ಥಿಗಳು ಒಕ್ಕೂಟದಲ್ಲೇ ಕೆಲಸ ಮಾಡುತ್ತಿದ್ದರೂ ಅದೇ ಅವಧಿಯ ಬೇರೆ ಬೇರೆ ಕಡೆಯಿಂದ ಅನುಭವ ಪ್ರಮಾಣ ಪತ್ರಗಳನ್ನು ತಂದು ಸಂದರ್ಶನ ಸಮಯದಲ್ಲಿ ಹಾಜರಿಪಡಿಸಿರುತ್ತಾರೆ. ಅದರಂತೆ ಹಲವು ಜನ ಎಲ್ಲಿಯೂ ಕೆಲಸವೇ ಮಾಡದೇ ಹಣ ನೀಡಿ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿರುತ್ತಾರೆ. ಪ್ರಮಾಣ ಪತ್ರಗಳ ನೈಜತೆಯನ್ನು ಪರೀಕ್ಷಿಸಲು ಪಿಎಫ್ ಮತ್ತು ಇಎಸ್‍ಐ ಕಾಗದ ಪತ್ರಗಳನ್ನು ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ ಎಚ್ ಕಮಕೇರಿಯವರು ಅನರ್ಹ ಅಭ್ಯರ್ಥಿಗಳಿಗೆ ನೇಮಕ ಮಾಡಿಕೊಳ್ಳಲು, ಅಕ್ರಮ ನೇಮಕಾತಿ ನಡೆಸಲು, ಅವ್ಯವಹಾರ ನಡೆಸಲು ಪಿಎಫ್ ಮತ್ತು ಇಎಸ್‍ಐ ಕಾಗದ ಪತ್ರಗಳನ್ನು ಪರೀಕ್ಷಿಸುವ ಕೆಲಸಕ್ಕೆ ಮುಂದಾಗಿಲ್ಲ ಆದ್ದರಿಂದ ದಾಖಲಾತಿಗಳ ತನಿಖೆಯು ಆಗಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯಂತೆ ಮೊದಲಿಗೆ ತಾತ್ಕಾಲಿಕ ನೇಮಕ ಪಟ್ಟಿ ಪ್ರಕಟಿಸಿ ಸಿಂಧುತ್ವ ಪ್ರಮಾಣ ಪತ್ರ ಪಡೆಯುವುದು ಮುಖ್ಯವಾಗಿರುತ್ತದೆ ಆದರೆ ಇಲ್ಲಿ ಸಿಂಧುತ್ವವನ್ನು ಪಡೆಯದೇ ತುರ್ತಾಗಿ ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಿ ಕೇವಲ 6 ದಿನಗಳಿಗೆ ಅವರಿಗೆ ಸಂಬಳ ಪಾವತಿಸಲಾಗಿರುತ್ತದೆ. 6 ದಿನಗಳಿಗೆ ಸಂಬಳ ಪಾವತಿಸಿದ ಮಾತ್ರಕ್ಕೆ ನೇಮಕಾತಿ ಪಾರದರ್ಶಕವಾಗುವುದಿಲ್ಲ. ನಂತರದಲ್ಲಿ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಪತ್ರ ಬರೆದಿದ್ದಾರೆ ಇದನ್ನೆಲ್ಲ ನೋಡಿದರೇ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ತರಾತುರಿಯಲ್ಲಿ ಎಲ್ಲವನ್ನೂ ಮಾಡಿ ಅಕ್ರಮ ನೇಮಕ ಮಾಡಿಕೊಂಡಿರುವುದು ಕಂಡು ಬರುತ್ತಿದೆ ಎಂದು ಆಪಾದಿಸಿದ್ದಾರೆ.
ಮೊದಲ ಬಾರಿ ಅಧಿಸೂಚನೆ ಹೊರಡಿಸಿದಾಗ ಬಂದ ಅರ್ಜಿಗಳ ಸಂಖ್ಯೆಗೂ ನಂತರ ಬಂದ ಅರ್ಜಿಗಳ ಸಂಖ್ಯೆಗೂ ವ್ಯತ್ಯಾಸ ಕಾಣುತ್ತಿದೆ. ನಂತರದಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ನೇಮಕಗೊಳ್ಳಲು ಕಾರಣರಾಗಿದ್ದಾರೆ. ಗುಮುಲ್‍ನಲ್ಲಿ ನಡೆದ ಅಕ್ರಮ ನೇಮಕಾತಿಯಲ್ಲಿ ಇಂತಿಂಥ ಹುದ್ದೆಗಳಿಗೆ ಇಂತಿಷ್ಟು ದುಡ್ಡು ಎಂದು ದರ ನಿಗದಿ ಮಾಡಿ, ಅಕ್ರಮ ನೇಮಕಾತಿ ಆದೇಶ ಪಡೆದವರಿಂದ ಅಷ್ಟು ಮೊತ್ತದ ಹಣ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅದರ ವಿವರ ಈ ಕೆಳಗಿನಂತಿದೆ.
ಪಶುವೈದ್ಯಕೀಯ ವೈದ್ಯರು- 4 ಹುದ್ದೆ 1 ಹುದ್ದೆಗೆ 15 ಲಕ್ಷ, ಕೃಷಿ ಅಧಿಕಾರಿ- 1 ಹುದ್ದೆ 1 ಹುದ್ದೆಗೆ 30 ಲಕ್ಷ, ತಾಂತ್ರಿಕ ಅಧಿಕಾರಿ- 2 ಹುದ್ದೆ 1 ಹುದ್ದೆಗೆ 25 ಲಕ್ಷ, ಮಾರುಕಟ್ಟೆ ಅಧಿಕಾರಿ- 2 ಹುದ್ದೆ 1 ಹುದ್ದೆಗೆ 25 ಲಕ್ಷ, ಮಾರುಕಟ್ಟೆ ಅಧೀಕ್ಷಕ- 2 ಹುದ್ದೆ 1 ಹುದ್ದೆಗೆ 25 ಲಕ್ಷ
ವೀಸ್ತೀರ್ಣಾಧಿಕಾರಿ- 7 ಹುದ್ದೆ 1 ಹುದ್ದೆಗೆ 25 ಲಕ್ಷ, ಚೆಮಿಸ್ಟ್- 2 ಹುದ್ದೆ 1 ಹುದ್ದೆಗೆ 20 ಲಕ್ಷ, ರಕ್ಷಣಾಧಿಕಾರಿ- 1 ಹುದ್ದೆ 1 ಹುದ್ದೆಗೆ 20 ಲಕ್ಷ, ಕಿರಿಯ ತಾಂತ್ರಿಕರು- 3 ಹುದ್ದೆ 1 ಹುದ್ದೆಗೆ 15 ಲಕ್ಷ.
ನೇಮಕಾತಿ ಆದೇಶ ಪತ್ರದಲ್ಲಿ ನೇಮಕಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದು ಬರೆಯಲಾಗಿದೆ. ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ತರಾತುರಿಯಲ್ಲಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಏಕೆ ಆದ್ದರಿಂದ ಈ ಪ್ರಕರಣ ಸಮಗ್ರವಾಗಿ ತನಿಖೆ ಮಾಡಿ ಅರ್ಹರನ್ನು ಪರಿಗಣಿಸಿ, ಅನರ್ಹರನ್ನು ಕೈಬಿಟ್ಟು, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ತನಿಖೆಗೆ ಆಗ್ರಹಪಡಿಸುವುದಾಗಿ ತಿಳಿಸಿದ್ದಾರೆ.