ಮಾರ್ಚ್ 4 ರಂದು ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸವ

0
16

ಬೆಂಗಳೂರು; ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸವ-2024 ಕಾರ್ಯಕ್ರಮವನ್ನು ಮಾರ್ಚ್ 4 ರಂದು ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ್ ಅವರು ತಿಳಿಸಿದರು.

ಇಂದು ಪ್ರೆಸ್ ಕ್ಲಬ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸವ-2024 ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ವಹಿಸಲಿರುವರು.

Contact Your\'s Advertisement; 9902492681

ಕೃಷಿ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳು ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಉಪಸ್ಥಿತರಿರುವರು. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾನಿರ್ದೇಶಕರು ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಹಿಮಾಂಶು ಪಾಠಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.

ಕೃಷಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಬಸವೇಗೌಡ, ಶಿಕ್ಷಣ ನಿರ್ದೇಶಕರಾದ ಡಾ.ಕೆ.ಸಿ. ನಾರಾಯಣಸ್ವಾಮಿ, ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಶೈಕ್ಷಣಿಕ ವರ್ಷ 2022-23ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 58ನೇ ಘಟಿಕೋತ್ಸವದಲ್ಲಿ 1244 ವಿದ್ಯಾರ್ಥಿಗಳಿಗೆ ವಿವಿಧ ಡಾಕ್ಟೋರಲ್, ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ಅದರಲ್ಲಿ 870 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 291 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 83 ವಿದ್ಯಾರ್ಥಿಗಳು ಡಾಕ್ಟೊರಲ್ ಪದವಿಗಳನ್ನು ಪಡೆಯಲಿದ್ದಾರೆ ಎಂದರು.

ಹಾಸನ ಜಿಲ್ಲೆಯ, ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಎಂ.ಸಿ. ರಂಗಸ್ವಾಮಿ ಅವರು ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀಯುತರು ಸುಮಾರು 600 ಎಕರೆ ಜಮೀನಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ, ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಮೀನು ಮತ್ತು ಜೇನು ಸಾಕಣೆ ಕೈಗೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಸ್ರೇಲ್ ಮಾದರಿ ಹೈನುಗಾರಿಕೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತಾರೆ. ಪಶು ಆಹಾರ ಉತ್ಪಾದನಾ ಘಟಕ, ಅಂಗಾಂಶ ಕೃಷಿಯ ಮೂಲಕ ವೆನ್ನಿಲ್ಲಾ ಸಸಿಗಳ ಉತ್ಪಾದನೆ, ಮೀನು ಸಾಕಾಣೆ, ವಿದೇಶಿ ಜಾತಿ ಬೆಣ್ಣೆ ಹಣ್ಣಿನ ತಳಿ ಅಳವಡಿಕೆ, ಸೈಲೇಜ್‍ಗಾಗಿ ಉಗ್ರಾಣಗಳ ಬಳಕೆ, ಮಿಶ್ರಬೆಳೆ, ಅಂತರ ಬೆಳೆಗಳ ಅಳವಡಿಕೆ, ತಮ್ಮ ಜಮೀನಿನಲ್ಲಿ ವ್ಯರ್ಥವಾಗಿ ಪೋಲಾಗುತ್ತಿದ್ದ ನೀರಿಗೆ ಕೃಷಿ ಹೊಂಡ ಮತ್ತು ಇಂಗು ಗುಂಡಿಯ ನಿರ್ಮಾಣದ ಜೊತೆಗೆ ಹಸಿರು ಮನೆಯಲ್ಲಿ ವೈಜ್ಞಾನಿಕ ರೀತಿಯ ಕೃಷಿಗೆ ಒತ್ತು ನೀಡಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಬಸವೇಗೌಡ, ಶಿಕ್ಷಣ ನಿರ್ದೇಶಕರಾದ ಡಾ.ಕೆ.ಸಿ. ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕರಾದ ವಿ.ಎಲ್. ಮಧುಪ್ರಸಾದ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here