ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ಎನ್ನಲಾಗುತ್ತಿರುವ ರಾಘವಚೈತನ್ಯ ಶಿವಲಿಂಗಕ್ಕೆ ಇಂದು ಮಹಾಶಿವರಾತ್ರಿ ನಿಮಿತ್ತ ಪೂಜೆ ಸಲ್ಲಿಕೆಗೆ ಹೈ ಕೋರ್ಟ್ 15 ಜನರಿಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಾಲ್ಲೂಕಿನದ್ಯಂತ ಮಧ್ಯಮಾರಾಟ ನಿಷೇಧಿಸಿದೆ. ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಕಲ್ಪಿಸಿದ್ದೇವೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ ಅವರು ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶದ ಅನ್ವಯ ಎಲ್ಲರೂ ನಡೆದುಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಮೂರು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳು, 15 ಡಿವೈಎಸ್‍ಪಿಗಳು ಸೇರಿದಂತೆ 1500 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಲು 13ಕ್ಕೂ ಅಧಿಕ ಶಾಂತಿ ಸಭೆಗಳನ್ನು ಸಹ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಹಲವರನ್ನು ಬಾಂಡ್ ಓವರ್ ಮಾಡಲಾಗಿದ್ದು, ಇನ್ನೂ ಕೆಲವರಿಗೆ ಗಡಿಪಾರು ಸಹ ಮಾಡಲು ಹೇಳಿದ್ದೇವೆ. ಆಳಂದ್ ಪಟ್ಟಣದ ಜನರು ಪರಸ್ಪರರು ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಹೀಗಾಗಿ ಹೊರಗಡೆ ವ್ಯಕ್ತಿಯಿಂದ ಪ್ರಚೋದನೆ ಆಗದಂತೆ ಹೇಳಿದ್ದೇವೆ. ಅಷ್ಟೇ ಅಲ್ಲ ಏನೇ ಸಮಸ್ಯೆಯಾದರೂ ನಮ್ಮ ಗಮನಕ್ಕೆ ತರಲು ತಿಳಿಸಿದ್ದೇವೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳಿಂದ ಪ್ರಚೋದನೆ ಆಗದಂತೆ ಸೂಚಿಸಿದ್ದೇವೆ. ಇನ್ಜು ಆಳಂದ್ ಮುಖಾಂತರ ಬೇರೆಡೆಗೆ ಹೋಗುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಅವರು, ಉಭಯ ಸಮುದಾಯದ ಧರ್ಮಗುರುಗಳಿಗೆ ಶಾಂತಿಯುತವಾಗಿ ಧಾರ್ಮಿಕ ಆಚರಣೆಗೆ ಕೇಳಿಕೊಂಡಿದ್ದು, ಅವರೂ ಸಹ ಬೆಂಬಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಪ್ರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.