14ರಿಂದ ಸಂಸದ ಡಾ.ಜಾಧವ್ ಕಚೇರಿ ಮುಂದೆ ಅಹೋರಾತ್ರಿ ಧರಣಿ

0
21

ಕಲಬುರಗಿ: ಮನರೇಗಾ ಕೂಲಿಕಾರ್ಮಿಕರ ಹಕ್ಕೊತ್ತಾಯಗಳಿಗಾಗಿ ಇದೇ ಮಾರ್ಚ್ 14ರಿಂದ ಸಂಸದರ ಕಚೇರಿ ಮುಂದೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ರೂವಾರಿ ಶ್ರೀಮತಿ ಕೆ. ನೀಲಾ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯು ಕಾಯ್ದೆಯಾಗಿದ್ದು, ಯುಪಿ1 ಸರ್ಕಾರವಿದ್ದಾಗ ಎಡಪಕ್ಷಗಳ ಶರತ್ತಿನಿಂದಾಗಿ ಕಾಯ್ದೆ ಜಾರಿಯಾಗಿತ್ತು. ಕಾಯ್ದೆ ಜಾರಿಯಲ್ಲಿ ಇಂದಿಗೂ ಅನೇಕ ಸಮಸ್ಯೆಗಳು ಆಗುತ್ತಿವೆ. ಕಾಯ್ದೆಯ ಉಳಿವಿಗಾಗಿ ಸರ್ಕಾರ ಶ್ರಮಿಸದೇ ಮೂಲೆಗೆ ತಳ್ಳಲು ಬೇಕಾದ ನಿಯಮಗಳನ್ನು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

Contact Your\'s Advertisement; 9902492681

ಉದ್ಯೋಗ ಖಾತ್ರಿಯಡಿ ಮಾಡಿದ ಕೆಲಸಕ್ಕೆ ಕೂಲಿ ಪಾವತಿಯಾಗುತ್ತಿಲ್ಲ. ಅದಕ್ಕೆ ರಾಜಕೀಯ ಸೇಡಿನ ಸಂಚು ಕಾರಣವಾಗಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ಲ ಎಂಬ ಕಾರಣಕ್ಕೆ ಅಕ್ಕಿಯನ್ನು ಕೊಡಲು ಹೇಗೆ ನಿರಾಕರಣೆ ಮಾಡಲಾಯಿತೋ ಹಾಗೆ ಮನರೇಗಾ ಬಾಕಿಯನ್ನು ಪಾವತಿಸಲು ಕೇಂದ್ರ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ. ಇದರಿಂದ ಸಾಮಾನ್ಯ ಜನತೆ ಬಲಿಯಾಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕಾರ್ಮಿಕರಿಗೆ ಅನೇಕ ಜೀವ ಹಾನಿಗಳು ಸಂಭವಿಸುತ್ತಿವೆ. ಜಿಲ್ಲೆಯ ಕಮಲಾಪುರ ತಾಲ್ಲೂಕಿನ ವಿಕೆ ಸಲಗರ್ ಗ್ರಾಮದ ಚನ್ನಪ್ಪ ಎಂಬ ವ್ಯಕ್ತಿಯ ಸಾವಾಗಿದೆ. ಕೇಂದ್ರ ಸರ್ಕಾರವು ಅನಾವಶ್ಯಕವಾಗಿ ತಂದಿರುವ ಎನ್‍ಎಂಎಂಎಸ್ ಪದ್ದತಿಯು ಕಾರ್ಮಿಕರಿಗೆ ಮಾರಕವಾಗಿದೆ. ಕಲ್ಯಾಣ ಕರ್ನಾಟಕವು ಉರಿಬಿಸಿಲಿನಿಂದ ಕೂಡಿದೆ. ತಾಂತ್ರಿಕ ಕಾರಣವೊಡ್ಡಿ ಕೆಲಸಗಳ ಸ್ಥಳಕ್ಕೆ ಬೆಳಿಗ್ಗೆ ಬರುವ ಕಾರ್ಮಿಕರನ್ನು ಮಧ್ಯಾಹ್ನದಿಂದ ಸಂಜೆಯವರೆಗೂ ಕಾಯಬೇಕು. ಮನೆಯಿಂದ ಕೆಲಸದ ಸ್ಥಳಕ್ಕೆ ಬರುವುದು, ಫೋಟೋಕ್ಕಾಗಿ ಕಾಯುವುದು, ಕೆಲಸ ಮಾಡಿದ ಮೇಲೂ ಮತ್ತೆ ತಾಸುಗಂಟಲೇ ಫೋಟೋಕ್ಕಾಗಿ ಕಾಯುವುದು ಹೀಗೆ ಕನಿಷ್ಠ ಏಳರಿಂದ ಎಂಟು ತಾಸು ಕಾರ್ಮಿಕರಿಗೆ ಹೊರೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿದು ಬೀಸಾಡಿದ ಬಿಸಿಲರಿ ನೀರಿನ ಬಾಟಲಿಗಳನ್ನು ಮರುಬಳಕೆ ಮಾಡುವ ಒತ್ತಡಕ್ಕೆ ಕಾರ್ಮಿಕರು ಒಳಗಾಗಿದ್ದಾರೆ. ಬಿಸಿಲಲ್ಲಿ ಏಳೆಂಟು ತಾಸು ಕೆಲಸ ಮಾಡುವುದರಿಂದ ಬೆವರು, ಶಕ್ತಿ ಹೋಗಿ ರಕ್ತದೊತ್ತಡದಲ್ಲಿ ಏರುಪೇರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಷ್ಟೆಲ್ಲ ಕಷ್ಟಪಟ್ಟು ದುಡಿದರೆ ಕೇವಲ 316ರೂ.ಗಳು ಮಾತ್ರ. ಪ್ರತಿ ದಿನ ಕೆಲಸ ಮಾಡಲು ಬಳಸುವ ಸಲಕರಣೆಗಳನ್ನು ಶಾರ್ಫನ್ ಮಾಡಲು ಹತ್ತು ರೂ.ಗಳನ್ನು ಕೊಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅದನ್ನೂ ಕಡಿತ ಮಾಡಲಾಗಿದೆ. ಬಜೆಟ್‍ನಲ್ಲಿ ಶೇಕಡಾ 35ಕ್ಕಿಂತಲೂ ಹೆಚ್ಚು ಕಡಿತ ಮಾಡಿದ್ದು, ಹಂತ, ಹಂತವಾಗಿ ಉದ್ಯೋಗ ಖಾತ್ರಿಯನ್ನು ಕೇಂದ್ರ ಸರ್ಕಾರವು ಮುಗಿಸುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಕೂಡಲೇ ಕೇಂದ್ರ ಸರ್ಕಾರವು ಬಾಕಿ ಉಳಿಸಿಕೊಂಡ ಎಲ್ಲ ಹಣ ಬಿಡುಗಡೆ ಮಾಡುವಂತೆ, ದುಡಿಯುವ ಮಾನವ ದಿನಗಳನ್ನು 200 ದಿನಗಳಿಗೆ ಹೆಚ್ಚಿಸುವಂತೆ, ಎನ್‍ಎಂಎಂಎಸ್ ತಾಂತ್ರಿಕ ಅಡ್ಡಿಯನ್ನು ಕೂಡಲೇ ಕೈಬಿಡುವಂತೆ, ಇಕೆವೈಸಿ ಕಡ್ಡಾಯವನ್ನು ಕೂಡಲೇ ರದ್ದುಗೊಳಿಸುವಂತೆ, ದಿನದ ಕೂಲಿಯನ್ನು 700ರೂ.ಗಳಿಗೆ ಹೆಚ್ಚಿಸುವಂತೆ, ಮೃತ ಚನ್ನಪ್ಪ ತಂದೆ ನಾಗಪ್ಪ ಕುಟುಂಬಕ್ಕೆ ಉದ್ಯೋಗ ಖಾತ್ರಿ ಕಾಯ್ದೆ ಪ್ರಕಾರ 2 ಲಕ್ಷ ರೂ.ಗಳ ಪರಿಹಾರ ಕೊಡುವಂತೆ, ಕೆಲಸದ ಸ್ಥಳಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ, ಮಾರ್ಚ್ 31ರವರೆಗೂ ಕೆಲಸ ಬಯಸುವ ಎಲ್ಲ ಕುಟುಂಬಗಳಿಗೆ ಈಗಾಗಲೇ ಇರುವ 100 ಮಾನವ ದಿನಗಳನ್ನು ಒದಗಿಸುವಂತೆ, ಕೇವಲ 20 ಕಾಮಗಾರಿಗಳನ್ನು ಕೈಗೊಳ್ಳುವ ನಿರ್ಬಂಧತೆ ಕೈಬಿಡುವಂತೆ ಅವರು ಆಗ್ರಹಿಸಿದರು.

ಬರಗಾಲದ ಸಂದರ್ಭದಲ್ಲಿ ಕೆಲಸದ ಪ್ರಮಾಣದಲ್ಲಿ ಕಡಿತ ಮಾಡುವಂತೆ, ಮನರೇಗಾದಲ್ಲಿನ ಎಲ್ಲ ಭ್ರಷ್ಟಾಚಾರ ಕೊನೆಗೊಳಿಸುವಂತೆ, ಜನರು ಕೆಲಸ ಬಯಸಿ ಕೊಡುವ ಅರ್ಜಿಗೆ ಕಡ್ಡಾಯವಾಗಿ ಸ್ವೀಕೃತಿ ಕೊಡುವಂತೆ ಒತ್ತಾಯಿಸಿ ಅಹೋರಾತ್ರಿ ಹೋರಾಟ ರೂಪಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮೀನಾಕ್ಷಿ ಬಾಳಿ, ಭೀಮಶೆಟ್ಟಿ ಯಂಪಳ್ಳಿ, ಶರಣಬಸಪ್ಪ ಮಮಶೆಟ್ಟಿ, ಡಾ. ಸಾಯಬಣ್ಣ ಗುಡುಬಾ, ಪದ್ಮಿನಿ ಕಿರಣಗಿ, ಚಂದಮ್ಮ ಗೋಳಾ, ಮೇಘರಾಜ್ ಕಠಾರೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here