ಡಯಾಲಿಸಿಸ್ ಘಟಕ ಸ್ಥಗಿತದಿಂದ ಬಾಲಕನ ಸಾವು ಪ್ರಕರಣ: ತನಿಖೆಗೆ ತಜ್ಞರ ತಂಡ ನಿರ್ಧಾರ

0
62

ಕಲಬುರಗಿ: ಗುಲಬರ್ಗಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವು ಸ್ಥಗಿತಗೊಂಡ ಕಾರಣದಿಂದ ಬಾಲಕನ ಸಾವು ಹಾಗೂ ೧೩ ಜನರ ಆರೋಗ್ಯದಲ್ಲಿ ಏರುಪೇರು ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ರಾಜ್ಯ ಉಪ ನಿರ್ದೇಶಕ ಹಾಗೂ ಕಾರ್ಯಕ್ರಮ ಅಧಿಕಾರಿ ಡಾ. ಸೆಲ್ವರಾಜ್ ಅವರು ಇಲ್ಲಿ ಹೇಳಿದರು.

ಜಿಮ್ಸ್ ಆಸ್ಪತ್ರೆಯ ಸ್ಥಗಿತಗೊಂಡ ಡಯಾಲಿಸಿಸ್ ಘಟಕಕ್ಕೆ ತಜ್ಞರ ತಂಡದ ನೇತೃತ್ವ ವಹಿಸಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಘಟಕವನ್ನು ಪರಿಶೀಲಿಸಿದ್ದೇವೆ. ಘಟಕ ಹಠಾತ್ ಸ್ಥಗಿತಗೊಳ್ಳಲು ನಿಖರ ಕಾರಣ ಏನು ಎಂಬುದು ತನಿಖೆಯಿಂದಲೇ ಬಹಿರಂಗಗೊಳ್ಳಲಿದೆ ಎಂದರು. ರಾಸಾಯನಿಕ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದರಿಂದ ಘಟಕವು ಸ್ಥಗಿತಗೊಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ. ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆಯಲಾಗಿದೆ. ಸಮಸ್ಯೆಗೆ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Contact Your\'s Advertisement; 9902492681

ಸ್ಥಗಿತಗೊಂಡ ಡಯಾಲಿಸಿಸ್ ಘಟಕವನ್ನು ತುರ್ತಾಗಿ ಪುನರ್ ಆರಂಭಿಸಲು ಸೂಚಿಸಲಾಗಿದೆ. ಸಂಜೆಯ ವೇಳೆಗೆ ಘಟಕ ಆರಂಭವಾಗದೇ ಹೋದಲ್ಲಿ ಪರ‍್ಯಾಯ ವ್ಯವಸ್ಥೆ ನೀಡಲು ಸಹ ತಾಕೀತು ಮಾಡಲಾಗಿದೆ ಎಂದು ಅವರು ಹೇಳಿದರು. ಈಗಾಗಲೇ ವರದಿಯಾಗಿರುವಂತೆ ಗುರುವಾರ ಸಂಜೆ ಡಯಾಲಿಸಿಸ್ ಘಟಕದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಹಾಬಾದ್ ಪಟ್ಟಣದ ನಿವಾಸಿ ಆಕಾಶ್ ಎಂಬ ೧೬ ವರ್ಷ ವಯಸ್ಸಿನ ಬಾಲಕ ಮೃತಪಟ್ಟಿದ್ದ. ಸುಮಾರು ೧೩ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

ಡಯಾಲಿಸಿಸ್ ಘಟಕ ಸ್ಥಗಿತಗೊಂಡ ಕುರಿತು ರೋಗಿಗಳಿಗೆ ಮಾಹಿತಿ ಇರದೇ ಇದ್ದುದರಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಡಯಾಲಿಸ್‌ಗೆಂದು ಬಂಡೇಶ್ ಸುರಗೂಳಿ (೨೧), ಜೇವರ್ಗಿ ತಾಲ್ಲೂಕಿನ ಆಂದೋಲಾ ನಿವಾಸಿ ಸೇರಿದಂತೆ ಅನೇಕರು ಕಾಯುತ್ತಿದ್ದರು. ಘಟಕ ಸ್ಥಗಿತಗೊಂಡಿದ್ದರಿಂದ ನಿರಾಸೆ ಹೊಂದಿ ಮುಂದೇನು? ಎಂಬ ಚಿಂತೆಗೆ ಒಳಗಾದರು. ಪ್ರತಿ ಶುಕ್ರವಾರ ಹಾಗೂ ಮಂಗಳವಾರದಂದು ಡಯಾಲಿಸಿಸ್‌ಗೆ ಬರುತ್ತಿದ್ದು, ಈಗ ಘಟಕವು ಸ್ಥಗಿತಗೊಂಡಿದ್ದರಿಂದ ನಾವು ಎಲ್ಲಿಗೆ ಹೋಗಬೇಕು? ಎಂದು ರೋಗಿಗಳು ವೈದ್ಯರನ್ನು ಪ್ರಶ್ನಿಸಿದರು. ತುರ್ತಾಗಿ ಘಟಕ ಪ್ರಾರಂಭಿಸುವಂತೆ ಉಪ ನಿರ್ದೇಶಕರು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಮ್ಸ್ ನಿರ್ದೇಶಕ ಡಾ. ಶಿವಕುಮಾರ್, ಜಿಲ್ಲಾ ಸರ್ಜನ್ ಡಾ. ಶಿವಾನಂದ್ ಸುರಗಾಳಿ, ಜಿಲ್ಲಾ ಆರೋಗ್ಯಾಧಿಕಾರಿ ಎಂ.ಕೆ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here