ಯಡ್ರಾಮಿಯ ಉಡುಪಿ ಹೋಟೆಲ್

0
68

ನಮ್ಮ ಯಡ್ರಾಮಿಗೆ ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿ ಗುರುತು ಬ್ಯಾಂಕ್ ಬಂದಿತ್ತು. ಬಹುಪಾಲು ಬೆಳಕಿಲ್ಲದ ಸುಂಬಡ ಹಾದಿಬದಿಯ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ. ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲ್ ಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ ಪತರಾಸುಗಳು, ಹಳೆಯ ಮೇಜು, ಮುಪ್ಪಾನು ಮುರುಕು ಬೆಂಚುಗಳು, ಮಣ್ಣು ನೆಲದ ದೇಸಿಯ ಈ ಹೋಟೆಲುಗಳೆದುರಿಗೆ “ಉಡುಪಿ ಬ್ರಾಹ್ಮಣರ ಹೋಟೆಲ್ ” ಬೋರ್ಡ್ ಹೊತ್ತು ಆರ್ಸಿಸಿ ಬಿಲ್ಡಿಂಗಿನಲ್ಲಿ ಈಸ್ಟ್ ಇಂಡಿಯಾ ಕಂಪನಿಯಂತೆ ಝಂಡಾ ಊರಿತು.

ಅದು ಆಗ ಮದುವೆ ಹೆಣ್ಣಿನಂತೆ ಅಲಂಕರಿಸಿತ್ತು. ಕಲರ್ಫುಲ್ ಕುರ್ಚಿ, ಟೇಬಲ್ ಗಳು, ಚೆಂದನೆಯ ಗಲ್ಲಾಕುರ್ಚಿ, ಆ ಕುರ್ಚಿ ಮೇಲ್ಭಾಗದ ಮೆರುಗಿನ ಬಣ್ಣದ ಗೋಡೆಗೆ ಅಷ್ಟಮಠದ ಭಗವತ್ಪಾದರ ಫೋಟೋ. ಉಡುಪಿ ಕಡೆಯಿಂದ ಬರುವಾಗಲೇ ರುಚಿಕರವಾದ ಖಾದ್ಯ ತಯಾರಕ ಒಂದಿಬ್ಬರು ಅಡುಗೆ ಭಟ್ಟರು, ಸಪ್ಲಯರೊಂದಿಗೆ ಹೊಸರುಚಿ ಬಡಿಸುವ ಸೌಟುಗಳನ್ನೂ ತಂದಿದ್ದರು. ಇನ್ನು ಕ್ಲೀನಿಂಗ್ ಗೆ ಲೋಕಲ್ ಕೆಲಸಗಾರರನ್ನು ನೇಮಿಸಿಕೊಂಡರು. ಬಿಳಿ ಆಫ್ ಶರ್ಟ, ಅಚ್ಚ ಬಿಳಿ ಲುಂಗಿಯ ಭಟ್ಟರು ಗಲ್ಲಾ ಪೆಟ್ಟಿಗೆ ಮೇಲೆ ಕುಂತು ಸಂಜೀಮುಂದ ಬರುವ “ಉದಯ ವಾಣಿ”ಯಲ್ಲಿಯ ಕರಾವಳಿ ಸುದ್ದಿಗಳನ್ನು ಓದುವಲ್ಲಿ ತೋರುವಷ್ಟೇ ಆಸಕ್ತಿಯನ್ನು ಹೋಟೆಲಿನ ಶುಚಿ ಮತ್ತು ರುಚಿಯಲ್ಲೂ ತೋರಿಸುತ್ತಿದ್ದರು. ಭಟ್ಟರ ಹಾಡಿನ ಶೈಲಿಯ ಮಧುರ ಮಾತುಗಳಿಗೆ ನಮ್ಮ ಮೊಗಲಾಯಿ ಹಳ್ಳೀ ಮಂದಿ ಮುರಕೊಂಡು ಬಿದ್ದಿದ್ರು.

Contact Your\'s Advertisement; 9902492681

ಯಡ್ರಾಮಿ ಅಷ್ಟೇಅಲ್ಲ ಸುತ್ತಮುತ್ತಲ ಹತ್ತಾರು ಹಳ್ಳಿಯ ನಾಲಗೆಗಳಿಗೆಲ್ಲ ಭಟ್ಟರ ಹೊಟೆಲಿನ ಅಕ್ಕಿ ಖಾದ್ಯಗಳ ಹೊಸರುಚಿಯದೇ ಬಿಸಿ – ಬಿಸಿ, ಮಾತು – ಮಾತು. ದೋಸೆ, ಇಡ್ಲಿ, ವಡೆ, ಭಟ್ಟರ ಕೇಸರಿಬಾತಿನ ಪರಿಮಳ ನಮ್ಮ ಸಿರಾಕ್ಕೆ ಇಲ್ಲದಿರುವುದು. ಇಡ್ಲಿ ವಡಾ ತಿನ್ನಲು ಎರಡೆರಡು ಸ್ಟೀಲ್ ಚಮಚಗಳು. ಸ್ಟೀಲ್ ಗಿಲಾಸಿನಲ್ಲಿ ಕುಡಿಯುವ ನೀರು. ನೀರು ತುಂಬಿದ ಸ್ಟೀಲ್ ಜಗ್. ಅದುವರೆಗೆ ಪ್ಲಾಸ್ಟಿಕ್ ಮತ್ತು ಗಿಲಾಟಿ ಗಿಲಾಸುಗಳಲ್ಲಿ ನೀರು ಕುಡಿದ ಗಿರಾಕಿಗಳಿಗೆ ಇದೆಲ್ಲ ಹೊಸ ಮೇಜವಾನಿ, ಸಹಜವಾಗಿ ಖುಷಿಕೊಟ್ಟದ್ದು ಸುಳ್ಳಲ್ಲ. ನಮ್ಮ ದೇಸಿಯ ಹೋಟೆಲುಗಳಲ್ಲಿ ಚಾರಾಣೆಗೆ ಸಿಗುವ ಸಾದಾ ಚಹ ಇಲ್ಲಿ ಬಾರಾಣೆ. ಹೊಟ್ಟೆ ತುಂಬಾ ನಾಸ್ಟಾ ಮಾಡಿದ ಗಿರಾಕಿಗಳು ದೀಡು ರುಪಾಯಿಯ ಕೇಟಿ ಕುಡಿಯಲು ಹಿಂದೇಟು ಹಾಕುತ್ತಿರಲಿಲ್ಲ. ಆಗ ಬರೀ ಬಾರಾಣೆಗೆ ಕಟ್ಟಿಗೆ ಒಲೆ ಊದಿ ಗಟ್ಟಿಯಾದ ಕೇಟಿ ಮಾಡುತ್ತಿದ್ದ ಎಕ್ಸಕ್ಲೂಸಿವ್ ಕೇಟಿ ಸ್ಪೆಷ್ಲಿಸ್ಟಗಳಾದ ಮುಗಳಿ ದುಂಡಪ್ಪ, ರಾವೂರ ಬಸಣ್ಣ, ಬಸಗೊಂಡೆಪ್ಪ, ಬ್ಯಾಳಿ ಶಾಂತಪ್ಪನವರ ಕೇಟೀಯ ಖಾಸಬಾತ್ ಖಾಯಂ ಗಿರಾಕಿಗಳಿಗೂ ಉಡುಪಿ ಹೊಟೇಲಿನ ಕಾಸ್ಟಲೀ ಖಡಕ್ ಟೀ ಕುಡಿಯುವ ಖಾಯಷ್.

ನಮ್ಮ ಗಾಂವಟೀ ಹೊಟೇಲುಗಳು ಮಾಡಿದ ಪೂರಿ ಭಾಜಿ ಪುಟಾಣಿ ಚಟ್ನಿಗೆ ಸಕ್ಕರೆ, ಸೂಸ್ಲಾದ ಮೇಲೂ, ಉಪ್ಪಿಟ್ಟ ಮೇಲೂ ಸಕ್ಕರೆ ಉದುರಿಸಿಕೊಂಡು ಹೀಗೆ ಎಲ್ಲದಕ್ಕೂ ಸಕ್ಕರೆ ಉದುರಿಸಿಕೊಳ್ಳುವ ಗೋಧಿ ಖಾದ್ಯದ ನಾಲಗೆಗಳಿಗೆ ಉಡುಪಿ ಖಾದ್ಯಗಳು ಬರೀ ರುಚಿಯನ್ನಷ್ಟೇ ಬರಿಸಲಿಲ್ಲ. ಉಡುಪಿ ಹೋಟೆಲಿಗೆ ಹೋಗುವುದು ಪ್ರತಿಷ್ಟೆಯ ವಿಷಯವಾಯಿತು. ಅಂತೆಯೇ ಕಡುಬಡವರು ಕೂಡ ಉಡುಪಿ ಹೋಟೆಲಿಗೆ ಹೋಗಿ ಉಡುಪಿ ಕೃಷ್ಣನ ದರ್ಶನ ಪಡಕೊಂಡು ಬಂದಷ್ಟೇ ಸಂತೃಪ್ತ ರಾಗುತ್ತಿದ್ದರು. ಜವೆಗೋಧಿಯ ಉದುರು ಉಪ್ಪಿಟ್ಟು ಕೊಡುತ್ತಿದ್ದ ಶಿವಣ್ಣನ ಹೋಟೆಲ್ ರುಚಿಯ ಮುಂದೆ ಹೈಬ್ರಿಡ್ ರವೆಯ ” ಉಪ್ಮಾ “ಆರ್ಡರ್ ಮಾಡುವಲ್ಲಿ ನಮ್ಮ ನಾಲಗೆ ರುಚಿಗಳು ಕಲಕಾಗಿದ್ದವು.

ದೀಡು ವರ್ಷದ ಹಿಂದೆ ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಅಲ್ಲೀಗ ಫಿಜ್ಜಾ,ಬರ್ಗರ್, ದಾಬಾ ಕಲ್ಚರ್, ವೈನ್ ಸೆಂಟರ್, ರೆಸ್ಟುರಾಗಳು ಪ್ರವೇಶ ಪಡೆದಿವೆ. ಇದರ ನಡುವೆ ಉಡುಪಿ ಹೋಟೆಲ್ ಕೆಲವು ವರ್ಷಗಳ ಹಿಂದೆಯೇ ನಾಪತ್ತೆಯಾಯಿತು. ಗೋಧಿ ಖಾದ್ಯಗಳಿಗೆ ಬದಲು ಅಕ್ಕಿ ಖಾದ್ಯದ ವಿವಿಧ ತಿಂಡಿ ಪದಾರ್ಥಗಳು ಯಾಕೋ ಅನ್ನಭಾಗ್ಯದ ನೆನಪು ತರಿಸುತ್ತಿವೆ ? ಆದರೆ ಪಥ್ಯ ಮಾಡುವ ಉತ್ತಮರೆಲ್ಲ ಎತ್ತ ಹೋದರೋ ಎಂಬ ನಮ್ಮ ಕಡಕೋಳ ಮುತ್ಯಾ ಮಡಿವಾಳಪ್ಪನ ಹಾಡಿನಂತೆ ನೆಲದ ನೆನಪಿನ ರುದ್ರಯ್ಯ ಮುತ್ಯಾ, ಹಲಕರಟಿ ಶಿವಣ್ಣನಂಥವರು ಎತ್ತ ಹೋದರೋ ಗೊತ್ತಿಲ್ಲ.

ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here