ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಪ್ರಚಾರ

0
36

ಕಲಬುರಗಿ: ಇಡೀ ದೇಶದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕೃತ ವಿರೋಧ ಪಕ್ಷ ಕೂಡ ಆಗುವುದಿಲ್ಲ. ಜನಸಾಮಾನ್ಯರು ಈ ಲೋಕಸಭಾ ಚುನಾವಣೆಯಲ್ಲಿ ಅಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಪದವೀಧರ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಸನ್ನು ತಿರಸ್ಕರಿಸಬೇಕಾಗಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.

ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಸಂಗಮೇಶ್ವರ ಸಭಾಂಗಣದಲ್ಲಿ ಮೇ 23ರಂದು ಪದವೀಧರ ಮತದಾರರನ್ನುದ್ದೇಶಿಸಿ ಮಾತನಾಡುತ್ತಾ ದೇಶದಲ್ಲಿ ಬಿಜೆಪಿ ಈ ಬಾರಿ 370 ಸ್ಥಾನಗಳನ್ನು ಗಳಿಸಿ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಲಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ 24 ಸ್ಥಾನಗಳನ್ನು ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಗೆಲ್ಲುವುದು ಶತಸಿದ್ಧ. ಈ ಬಗ್ಗೆ ನಿಖರವಾದ ವರದಿ ಲಭ್ಯವಾಗಿದ್ದು ಅನುಮಾನವೇ ಬೇಡ.ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟೇ ಭಾಷಣ ಮಾಡಲಿ ಎಷ್ಟೇ ಹಣ ಚೆಲ್ಲಿದ್ದರೂ ಬಿಜೆಪಿ ಮೈತ್ರಿಕೂಟದ ಗೆಲುವು ನಿಶ್ಚಿತವಾಗಿದ್ದು ಕಾಂಗ್ರೆಸ್ ಪಕ್ಷವನ್ನು ಇತಿಶ್ರೀ ಮಾಡಲು ಜನಸಾಮಾನ್ಯರು ನಿರ್ಧರಿಸಿದ್ದು ಜೂನ್ ಮೂರರಂದು ನಡೆಯುವ ಪದವೀಧರ ಮತಕ್ಷೇತ್ರಗಳ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಕೂಡಾ ಕಾಂಗ್ರೆಸ್ಸನ್ನು ಸೋಲಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಅಮರನಾಥ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು ಈ ಹಿಂದಿನ ಅವಧಿಯಲ್ಲಿ ಶಿಕ್ಷಣ ರಂಗದ ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡಿ ಹೆಸರು ಪಡೆದಿದ್ದರು. ಆದರೆ ಕಳೆದ ಬಾರಿ ಗೆದ್ದ ಕಾಂಗ್ರೆಸ್ಸಿನ ಡಾ. ಚಂದ್ರಶೇಖರ್ ಪಾಟೀಲ್ ವಿಧಾನ ಪರಿಷತ್ತಿನಲ್ಲಿ ತಮ್ಮ ಅವಧಿಯಲ್ಲಿ ಒಂದೇ ಒಂದು ಪ್ರಶ್ನೆ ಕೇಳದೆ ಯಾವುದೇ ಪತ್ರಿಕೆಗಳಲ್ಲಾಗಲಿ ವಿಡಿಯೋ ತುಣುಕುಗಳಾಗಲಿ ಇಲ್ಲದೆ ತುಟಿ ಬಿಚ್ಚದ ಸದಸ್ಯರಾಗಿದ್ದರು. ಪದವೀಧರರ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿಗೆ ಅವರು ಸ್ಪಂದಿಸಲಿಲ್ಲ ಎಂದು ದೂರಿದರು.

ಅಸಮರ್ಥ ಕಾಂಗ್ರೆಸ್ ಸರಕಾರದ ವಿರುದ್ಧ ಪದವೀಧರರು ಮತ ಚಲಾಯಿಸಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ. ಒಂದು ಕಾಲದಲ್ಲಿ 404 ಸ್ಥಾನ ಗೆದ್ದ ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಶ್ಚಿಮ ಬಂಗಾಳ, ದೆಹಲಿ ಬಿಹಾರ ಮುಂತಾದಡೆ ಇತರ ಪಕ್ಷಗಳೊಡನೆ ಸ್ಥಾನಕಾಗಿ ಬೇಡುವ ಹೀನಾಯ ಸ್ಥಿತಿಗೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ ಗೂಂಡಾ ರಾಜಕಾರಣ ಮತ್ತು ಕೊಲೆಗಡುಕ ರಾಜಕಾರಣದ ಮಮತಾ ಬ್ಯಾನರ್ಜಿಯವರ ಜೊತೆ ಕೈಜೋಡಿಸಿದರೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಮಾಧಿ ಮಾಡಿದ ಆಮ್ ಆದ್ಮಿ ಪಕ್ಷದ ಜೊತೆ ಹೊಂದಾಣಿಕೆ ಮಾಡುವ ಹೀನ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷ ಬಂದುಬಿಟ್ಟಿದೆ.

ಈಗ ಕಾಂಗ್ರೆಸ್ಸಿನ ಕಥೆ ಮುಗಿದಿದ್ದು ಭೂತಕಾಲದ ಪಕ್ಷವಾಗಿದೆ. ಕರ್ನಾಟಕ, ತೆಲಂಗಾಣ ಹಿಮಾಚಲ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿದ್ದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಹಿಮಾಚಲ ಪ್ರದೇಶದಲ್ಲಿ ನಡೆದ 5 ವಿಧಾನಸಭಾ ಕ್ಷೇತ್ರಗಳ ಮರು ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದ್ದು ಅಲ್ಲಿಯೂ ಈಗಿನ ಸರಕಾರ ಪತನ ಹೊಂದಿ ಕಾಂಗ್ರೆಸ್ ಪಕ್ಷ ಮೂಲೆಗುಂಪಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಿಶ್ವದ ಐದನೇ ದುರ್ಬಲ ಆರ್ಥಿಕ ರಾಷ್ಟ್ರವಾಗಿದ್ದ ಭಾರತವನ್ನು ಮೋದಿಯವರ 10 ವರ್ಷದ ಆಡಳಿತಾವಧಿಯಲ್ಲಿ ಐದನೇ ಆರ್ಥಿಕ ರಾಷ್ಟ್ರವನ್ನಾಗಿ ಬೆಳೆಸಿದರು ಮುಂದಿನ ಮೂರು ವರ್ಷ ಗಳಲ್ಲಿ ಭಾರತವು ಮೂರನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಕರ್ನಾಟಕದ ಕಾಂಗ್ರೆಸ್ ಆಡಳಿತದಿಂದಾಗಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ತಿಂಗಳಲ್ಲಿ 438 ಕೊಲೆ, 692 ಆತ್ಮಹತ್ಯೆಯಿಂದಾಗಿ ಈ ಸರಕಾರವು ಹತ್ಯೆ- ಆತ್ಮಹತ್ಯೆಗಳ ಸಾಧನೆ ಮಾಡಿದ ಸರಕಾರವಾಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಒಂದು ವರ್ಷದಲ್ಲಿ ಒಂದು ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡದೆ ಎಲ್ಲ ಹಣವನ್ನು ಗ್ಯಾರಂಟಿಗೆ ನೀಡಿದೆ. ರಸ್ತೆ, ಔಷಧಿಗೆ ದುಡ್ಡಿಲ್ಲದ ದರಿದ್ರ ಸರ್ಕಾರ ರಾಜ್ಯದಲ್ಲಿದ್ದು ಬಸ್ಸಿಗೆ ಡೀಸೆಲ್ ಹಾಕಲು ಸಾಧ್ಯವಾಗದೆ ಶಿವಮೊಗ್ಗ ಕೆಎಸ್ ಆರ್ ಟಿ ಸಿ ಬಸ್ ನಡು ರಸ್ತೆಯಲ್ಲಿ ನಿಂತ ಘಟನೆ ಇದಕ್ಕೆ ನಿದರ್ಶನ ಎಂದರು.

ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯದ ಫಲಿತಾಂಶ 53 ಇದ್ದು 20 ಗ್ರೇಸ್ ಅಂಕ ನೀಡಿ ಅದನ್ನು ಶೇಕಡಾ 70ಕ್ಕೆ ಏರಿಸಲಾಗಿದೆ.ಆದರೆ ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡುವ ಬದಲು ಗ್ರೇಸ್ ಮಾರ್ಕ್ ನೀಡಿ ಫಲಿತಾಂಶ ಹೆಚ್ಚು ಮಾಡಿಕೊಂಡ ದುರಂತ ಕಾಣುವಂತಾಗಿದೆ ಸಿಇಟಿಯಲ್ಲಿ ಸಿಲೆಬಸ್ ಹೊರತಾದ ಶೇಕಡ 50ರಷ್ಟು ಪ್ರಶ್ನೆಗಳು ಬಂದರು ಯಾವೊಬ್ಬ ಅಧಿಕಾರಿಯನ್ನು ಇದಕ್ಕೆ ಜವಾಬ್ದಾರಿ ಮಾಡಲಿಲ್ಲ. ಕನ್ನಡವನ್ನು ನೆಟ್ಟಗೆ ಮಾತನಾಡಲು ಬಾರದ ಶಿಕ್ಷಣ ಸಚಿವರಿಂದ ಯಾವ ರೀತಿಯ ಪ್ರಗತಿಯನ್ನು ನಿರೀಕ್ಷಿಸಬಹುದು? ಎಂದು ಲೇವಡಿ ಮಾಡಿ ಇಂತಹ ಸಚಿವರು ರಾಹುಲ್ ಗಾಂಧಿಯ ಭಾಷಣವನ್ನು ತರ್ಜುಮೆ ಮಾಡಲು ನಿಂತು ನಗೆಪಾಟಲಿಗೆ ಈಡಾದ ಪ್ರಸಂಗವನ್ನು ಹೇಳಿ ವ್ಯಂಗ್ಯವಾಡಿದರು.

8 ಮತ್ತು 9ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಜಾರಿ ಮಾಡಿ ಪಾಲಕರನ್ನು ಹಾಗೂ ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ಕಾಂಗ್ರೆಸ್ ಸರಕಾರ ಕೊನೆಗೂ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಕೈ ಬಿಡುವಂತೆ ಆಯಿತು. ಒಟ್ಟು ಶಿಕ್ಷಣ ರಂಗವನ್ನು ಗೊಂದಲದ ಗೂಡನ್ನಾಗಿ ಪರಿವರ್ತಿಸಿದ್ದಾರೆ ಇದನ್ನು ಸರಿಪಡಿಸಲು ತಜ್ಞರ ತಂಡ ರಚಿಸಲು ಕೂಡ ವಿಫಲರಾಗಿದ್ದಾರೆ ಎಂದು ದೂರಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 18 ಸಾವಿರ ಶಿಕ್ಷಕರ ಕೊರತೆ ಇದ್ದರೂ ನೇಮಕಾತಿ ಮಾಡಲಿಲ್ಲ. ಶೌಚಾಲಯದ ಕೊರತೆ ಇದೆ. 45,000 ಕೊಠಡಿಗಳ ಬೇಡಿಕೆ ಇದ್ದರೂ ಸರಕಾರ ಮಾತ್ರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿ ಕೌಶಲ್ಯಾಧಾರಿತ ಮತ್ತು ಉದ್ಯೋಗ ಸೃಷ್ಟಿಯ ಅವಕಾಶವನ್ನು ತಪ್ಪಿಸಿದೆ. ಶಿಕ್ಷಣ ರಂಗದಲ್ಲಿ ಗೊಂದಲವನ್ನು ಮೂಡಿಸಿದೆ. ಈ ದೇಶದ ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಪದವೀಧರ ಮತದಾರರು ಮಹತ್ವದ ನಿರ್ಧಾರ ಕೈಗೊಂಡು ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಹೇಳಿದರು.

*ಶ್ವೇತ ಪತ್ರ ಬಿಡುಗಡೆಗೆ ಆಗ್ರಹ: ರವಿಕುಮಾರ್*
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪರಿಸ್ಥಿತಿ ತೀರ ಕೆಳಮಟ್ಟದಲ್ಲಿದ್ದು ಎಸ್ ಎಸ್ ಎಲ್ ಸಿ ಫಲಿತಾಂಶ ಇದಕ್ಕೆ ನಿದರ್ಶನವಾಗಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆ 94 ಶೇಕಡಾ ಫಲಿತಾಂಶ ಬಂದಿದ್ದು ಯಾದಗಿರಿ ಶೇಕಡ 50ರಷ್ಟು ಇದ್ದು ಇನ್ನೆಷ್ಟು ವರ್ಷಗಳಲ್ಲಿ ಆ ಜಿಲ್ಲೆಗಳಂತೆ ಆಗಲು ಶ್ರಮಿಸಬೇಕಾಗಿದೆ ಎಂದು ಪ್ರಶ್ನಿಸಿದರು.

ಈ ಏಳು ಜಿಲ್ಲೆಗಳ ಶೈಕ್ಷಣಿಕ ಅಧ್ಯಯನ ಮಾಡಲು ಮಾತ್ರವಲ್ಲ ಔದ್ಯೋಗಿಕ ಪರಿಸ್ಥಿತಿಯ ಕುರಿತು ಸರ್ವೇಕ್ಷಣೆ ನಡೆಸಲು ಹಾಗೂ 371 ಜೆ ಕಲಂ ಪ್ರಕಾರ ಬೇಡಿಕೆ ಈಡೇರಿಸಿದ್ದರ ಬಗ್ಗೆ ಕೂಡಲೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 17ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇರುವಾಗ ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಕಾಪಾಡಲು ಹಾಗೂ ಫಲಿತಾಂಶ ಹೆಚ್ಚಳ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಬಗ್ಗೆ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಈಶ್ವರ ಖಂಡ್ರೆ ಸ್ಥಿತಿಗತಿ ಕುರಿತು ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುರೇಶ್ ಸಜ್ಜನ್ , ಅಭ್ಯರ್ಥಿ ಅಮರನಾಥ ಪಾಟೀಲ್ ಮಾತನಾಡಿದರು ನೂತನವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಗೌತಮ್ ಜಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಸವರಾಜ್ ಮತ್ತಿಮೂಡು, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಸುಭಾಷ್ ಆರ್ ಗುತ್ತೇದಾರ್ ಜೆಡಿಎಸ್ ನ ಕಾರ್ಯಾಧ್ಯಕ್ಷರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ, ಈಶ್ವರ್ ಸಿಂಗ್ ಠಾಕೂರ್, ರವೀಂದ್ರ ಟೆಂಗಳಿ ವಿದ್ಯಾಸಾಗರ ಕುಲಕರ್ಣಿ, ಮಾಜಿ ಸಚಿವರಾದ ಬಾಬುರಾವ್ ಚೌಹಾಣ್ ಮತ್ತಿತರರು ಹಾಜರಿದ್ದರು. ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್ ದೇಶಮುಖ್ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here