ಕಲಬುರಗಿ: ಕಲ್ಯಾಣ ಕರ್ನಾಟಕ ಜನ ವಿರೋಧಿ ಹೋರಾಟ ಖಂಡಿಸಿ ಜೂನ್ 1ಕ್ಕೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹಾಗೂ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಜಾರಿಗೆ ಬಂದಿರುವ 371 (ಜೆ) ಕಲಂ ರದ್ದುಗೊಳಿಸುವಂತೆ ಹಸಿರು ಸೇನೆ ಸಂಘಟನೆ ವತಿಯಿಂದ ಜೂ.1ರಂದು ಬೆಂಗಳೂರಿನಲ್ಲಿ ನಡೆಸಲಿರುವ ಹೋರಾಟವು ಕಲ್ಯಾಣ ಕರ್ನಾಟಕ ಜನ ವಿರೋಧಿ ಹೋರಾಟವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದೀರ್ಘ ಕಾಲದ ನಿರಂತರ ಹೋರಾಟ ಹಾಗೂ ರಾಜಕೀಯ ಇಚ್ಛಾಶಕ್ತಿಯಿಂದ 2013 ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೆಶಿಕ ಅಸಮತೋಲನೆ ನಿವಾರಣೆಗೆ ಸಂವಿಧಾನದ 371ನೇ(ಜೆ) ಕಲಂ ಜಾರಿಗೆ ಬಂದಿದೆ.
ಏತನ್ಮಧ್ಯೆ ಬೆಂಗಳೂರಿನ ಕೆಲವು ಪಟ್ಟಭದ್ರ ಹಿತಾಸಕ್ತಿಯ ಗುಂಪು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ಜಾರಿಯಾದ ನಂತರ ಕರ್ನಾಟಕ ರಾಜ್ಯದ ಬಹಳಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕದವರೇ ಕಬಳಿಸುತ್ತಿದ್ದಾರೆ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕಲ್ಯಾಣದವರೇ ಮೇಲುಗೈ ಸಾಧಿಸುತ್ತಿದ್ದಾರೆ.
ಇದರಿಂದ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಅಪಪ್ರಚಾರ ಮಾಡುವ ಮುಖಾಂತರ 24 ಜಿಲ್ಲೆಯ ಜನರಿಗೆ ತಪ್ಪು ಸಂದೇಶ ನೀಡುವ ಸಂವಿಧಾನ ವಿರೋಧಿ ಕೃತ್ಯ ನಡೆಸುವ ಮುಖಾಂತರ ಬರುವ ಜೂನ್ 1 ರಂದು ಬೆಂಗಳೂರಿನಲ್ಲಿ 371ನೇ(ಜೆ) ಕಲಂ ವಿರುದ್ಧ ಹೋರಾಟ ಹಮ್ಮಿಕೊಂಡಿರುವುದು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಇಂತಹ ಸಂವಿಧಾನ ವಿರೋಧಿ ಹೋರಾಟಕ್ಕೆ ರಾಜ್ಯಪಾಲರು ಮತ್ತು ಸರಕಾರ ಕಿಂಚಿತ್ತೂ ಸ್ಪಂದಿಸದೇ ಇಂತಹ ಹೋರಾಟಗಳಿಗೆ ಅವಕಾಶ ನೀಡಬಾರದೆಂದು ಕಲ್ಯಾಣ ಕರ್ನಾಟಕದ ಜನಮಾನಸದ ವತಿಯಿಂದ ಒತ್ತಾಯಿಸಿದರು.
ಸಂವಿಧಾನದ ಮೀಸಲಾತಿಯ ಮೂಲ ಸಿದ್ಧಾಂತದ ಅರ್ಥ ಗೊತ್ತಿಲ್ಲದ ಸಂವಿಧಾನ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು, ಸಮಾನತೆಯ ವಿರೋಧಿಗಳು, ಪ್ರಾದೇಶಿಕ ಅಸಮತೋಲನೆ ವಿರೋಧಿಗಳು, ಅಭಿವೃದ್ಧಿ ವಿರೋಧಿಗಳು, ಅಷ್ಟೇ ಅಲ್ಲದೇ ಇಂತಹ ಶಕ್ತಿಗಳು ಅಖಂಡ ಕರ್ನಾಟಕ ಒಡೆಯುವಂತಹ ಕೃತ್ಯ ನಡೆಸುತ್ತಿದ್ದಾರೆ. ಅಭಿವೃದ್ಧಿಯಿಂದ ವಂಚಿತರಾದಾಗ, ಕ್ಯಾರೆ ಎನ್ನದ ಸಂವಿಧಾನ ವಿರೋಧಿ ಶಕ್ತಿಗಳು ಇಂದು ನಮ್ಮ ಪಾಲಿನ ಹಕ್ಕು ನಾವು ಪಡೆಯುತ್ತಿರುವ ಆರಂಭಿಕ ಹಂತದಲ್ಲಿಯೇ 371ನೇ(ಜೆ) ಕಲಮಿಗೆ ವಿರೋಧಿಸುತ್ತಿರುವುದು ನೋಡಿದರೆ ಇವರ ಕೀಳುಮಟ್ಟದ ನಿಯತ್ತು ಏನೆಂಬುದು ಸ್ಪಷ್ಟವಾಗುತ್ತದೆ ಎಂದು ದೂರಿದರು.
ಬಸವರಾಜ ದೇಶಮುಖ, ಪ್ರತಾಪಸಿಂಗ್ ತಿವಾರಿ, ಬಸವರಾಜ ಕುಮನೂರ, ಪ್ರೊ.ಆರ್.ಕೆ. ಹುಡಗಿ, ಮನೀಷ ಜಾಜು, ಡಾ. ಮಾಜಿದ್ ದಾಗಿ ಇತರರಿದ್ದರು.